ADVERTISEMENT

ಪಾಕ್ ಪ್ರಜೆಗಳ ಸೆರೆ: ಗುಪ್ತಚರದಿಂದ ವಿಚಾರಣೆ

ನಗರದಲ್ಲಿ ಒಂಬತ್ತು ತಿಂಗಳಿಂದ ನೆಲೆ

​ಪ್ರಜಾವಾಣಿ ವಾರ್ತೆ
Published 25 ಮೇ 2017, 19:41 IST
Last Updated 25 ಮೇ 2017, 19:41 IST
ಪಾಕ್ ಪ್ರಜೆಗಳ ಸೆರೆ: ಗುಪ್ತಚರದಿಂದ ವಿಚಾರಣೆ
ಪಾಕ್ ಪ್ರಜೆಗಳ ಸೆರೆ: ಗುಪ್ತಚರದಿಂದ ವಿಚಾರಣೆ   
ಬೆಂಗಳೂರು: ಒಂಬತ್ತು ತಿಂಗಳಿನಿಂದ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ಮೂವರು ಸೇರಿ ನಾಲ್ಕು ಮಂದಿಯನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬುಧವಾರ ಬಂಧಿಸಿದ್ದಾರೆ.
 
ಕೇರಳದ ಮಹಮದ್ ಸಿಹಾಬ್ (30), ಅವರ ಪತ್ನಿ ಪಾಕಿಸ್ತಾನದ ಸಮೀರಾ ಅಲಿಯಾಸ್ ನಜ್ಮಾ (25), ಸಂಬಂಧಿ ಮಹಮದ್ ಖಾಸಿಫ್ (30) ಹಾಗೂ ಇವರ ಪತ್ನಿ ಝೈನಬ್ ಅಲಿಯಾಸ್ ಕಿರಣ (26) ಎಂಬುವರನ್ನು ಬಂಧಿಸಲಾಗಿದೆ.
 
ಕೇಂದ್ರ ಗುಪ್ತಚರ (ಐಬಿ), ‘ರಾ’ ಹಾಗೂ ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ಅಧಿಕಾರಿಗಳು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
 
ಈ ಅಕ್ರಮ ವಾಸದ ಹಿಂದೆ ಸಿಹಾಬ್–ಸಮೀರಾ ಹಾಗೂ ಖಾಸಿಫ್–ನಜ್ಮಾ ಜೋಡಿಗಳ ಕುತೂಹಲಕಾರಿ ಪ್ರೇಮಕತೆ ಇರುವುದು ಗೊತ್ತಾಗಿದೆ. 
 
ಕತಾರ್‌ನಲ್ಲಿ ಪ್ರೇಮಾಂಕುರ: ‘2008ರಲ್ಲಿ ಕೇರಳದಿಂದ ನಗರಕ್ಕೆ ಬಂದ ಸಿಹಾಬ್, ಕುಮಾರಸ್ವಾಮಿ ಲೇಔಟ್‌ನ ಜ್ಯೂಸ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರ ತಂದೆ ಮಹಮದ್, ಕತಾರ್‌ನ ಸರ್ಕಾರಿ ಕಚೇರಿಯೊಂದರಲ್ಲಿ ಕಾರು ಚಾಲಕರಾಗಿದ್ದರು’ ಎಂದು ಅಧಿಕಾರಿಗಳು ವಿವರಿಸಿದರು.
 
‘ತಂದೆ ಜತೆ ಸೇರಿ ಹೆಚ್ಚು ಹಣ ಸಂಪಾದಿಸಬೇಕೆಂದು ಸಿಹಾಬ್ ಸಹ 2012ರಲ್ಲಿ ಕತಾರ್‌ಗೆ ಹೋದರು. ಅದೇ ಕಚೇರಿಯಲ್ಲಿ ಸಮೀರಾ ಶೀಘ್ರ ಲಿಪಿಕಾರರಾಗಿ (ಸ್ಟೆನೋಗ್ರಫರ್) ಕೆಲಸ ಮಾಡುತ್ತಿದ್ದರು.
 
ಡಯಾಬಿಟಿಸ್‌ನಿಂದ ಸಮೀರಾ ತಾಯಿ ನಿಧನರಾದ ಬಳಿಕ, ಅವರ ತಂದೆ ಇನ್ನೊಂದು ಮದುವೆಯಾಗಿ ಮಗಳನ್ನು ಬಿಟ್ಟು ಹೋದರು. ಈ ಹಂತದಲ್ಲಿ ಸಮೀರಾ–ಸಿಹಾಬ್ ನಡುವೆ ಪ್ರೇಮಾಂಕುರವಾಯಿತು. 2015ರಲ್ಲಿ ಮದುವೆಯೂ ಆದರು.’
 
‘ಭಾರತೀಯ ಯುವಕನನ್ನು ವಿವಾಹವಾದ ವಿಚಾರ ತಿಳಿದು ಕುಪಿತಗೊಂಡ ಸಮೀರಾ ಅಣ್ಣಂದಿರು, ಅವರನ್ನು ಕತಾರ್‌ನಿಂದ ಪಾಕಿಸ್ತಾನಕ್ಕೆ ಎಳೆದೊಯ್ದು ಒಂದು ತಿಂಗಳು ಗೃಹ ಬಂಧನದಲ್ಲಿಟ್ಟಿದ್ದರು. ಗರ್ಭಿಣಿಯಾಗಿದ್ದ ಸಮೀರಾ ಅವರಿಗೆ, ಸರಿಯಾದ ಆರೈಕೆ ಸಿಗದೆ ಗರ್ಭಪಾತವಾಯಿತು.
 
ನಂತರ ಸಂಬಂಧಿಯೊಬ್ಬರ ಮೊಬೈಲ್‌ನಿಂದ ಸಿಹಾಬ್‌ಗೆ ಕರೆ ಮಾಡಿದ್ದ ಅವರು, ಅಣ್ಣಂದಿರು ತಮ್ಮನ್ನು ಗೃಹಬಂಧನದಲ್ಲಿಟ್ಟಿರುವ  ವಿಷಯ ತಿಳಿಸಿದ್ದರು. ಅಲ್ಲದೆ, ಅಲ್ಲಿಂದ ಕರೆದುಕೊಂಡು ಹೋಗುವಂತೆ ಕಣ್ಣೀರಿಟ್ಟಿದ್ದರು.’
 
‘ಇದೇ ಸಂದರ್ಭದಲ್ಲಿ ಝೈನಬ್ (ಸಮೀರಾ ದೊಡ್ಡಪ್ಪನ ಮಗಳು), ಸೋದರ ಸಂಬಂಧಿ ಖಾಸಿಫ್‌ನನ್ನು ಪ್ರೇಮ ವಿವಾಹವಾಗಿದ್ದರು. ವರಸೆಯಲ್ಲಿ ಅವರಿಬ್ಬರು ಅಣ್ಣ–ತಂಗಿಯಾಗಬೇಕಿದ್ದ ಕಾರಣ ಕುಟುಂಬ ಸದಸ್ಯರು ಆ ಮದುವೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ, ಅವರೂ ಮನೆ ಬಿಟ್ಟು ಬರುವ ಯೋಚನೆಯಲ್ಲಿದ್ದರು.
 
ಈ ವಿಚಾರ ತಿಳಿದ ಸಿಹಾಬ್, ಅವರಿಬ್ಬರನ್ನು ಬಳಸಿಕೊಂಡು ಪತ್ನಿಯನ್ನು ಅಲ್ಲಿಂದ ಕರೆದುಕೊಂಡು ಬರಲು ನಿರ್ಧರಿಸಿದ್ದರು.’
 
‘ಫೋನ್ ಮೂಲಕ ಆ ನವ ದಂಪತಿಯನ್ನು ಸಂಪರ್ಕಿಸಿದ್ದ ಸಿಹಾಬ್, ‘ಸಮೀರಾಳನ್ನೂ ಕರೆದುಕೊಂಡು ಬನ್ನಿ. ನಾವು ಭಾರತಕ್ಕೆ ಹೋಗೋಣ. ಅಲ್ಲಿ ತೊಂದರೆ ಇಲ್ಲದೆ ಬದುಕಬಹುದು’ ಎಂದಿದ್ದರು. ಅದಕ್ಕೆ ಅವರು ಒಪ್ಪಿದ ಬಳಿಕ ಪಾಸ್‌ಪೋರ್ಟ್‌ ಮಾಡಿಸಿಕೊಳ್ಳಲು ಹಣ ಕಳುಹಿಸಿಕೊಟ್ಟಿದ್ದರು. 2016ರ ಸೆಪ್ಟಂಬರ್‌ನ ಒಂದು ರಾತ್ರಿ ಆ ದಂಪತಿ ಸಮೀರಾ ಅವರನ್ನು ಮನೆಯಿಂದ ಹೊರಗೆ ಕರೆದುಕೊಂಡು ಬರುವಲ್ಲಿ ಯಶಸ್ವಿಯಾದರು.’
 
‘ಪಾಕಿಸ್ತಾನದಿಂದ ಮೂವರು ಮಸ್ಕತ್‌ಗೆ ಬಂದರು. ಸಿಹಾಬ್ ಸಹ ಕತಾರ್‌ನಿಂದ ಅಲ್ಲಿಗೆ ಹೋದರು. ಬಳಿಕ ನಾಲ್ಕೂ ಮಂದಿ ನೇಪಾಳದ ಕಠ್ಮಂಡುಗೆ ಬಂದು, ಅಲ್ಲಿಂದ ಟ್ಯಾಕ್ಸಿಯಲ್ಲಿ ಪಾಟ್ನಾಕ್ಕೆ ಬಂದರು. ಪಾಟ್ನಾದಿಂದ  ರೈಲಿನಲ್ಲಿ ಬೆಂಗಳೂರಿಗೆ ಬಂದಿದ್ದರು.’
 
‘ಸಿಹಾಬ್ ಮೊದಲು ಕುಮಾರಸ್ವಾಮಿ ಲೇಔಟ್‌ನಲ್ಲಿ ಕೆಲಸ ಮಾಡುತ್ತಿದ್ದರಿಂದ ಅದೇ ಪ್ರದೇಶಕ್ಕೆ ಹೋಗಿ ಬಾಡಿಗೆ ಮನೆ ಮಾಡಿದರು. ಅಲ್ಲಿಂದ ಎರಡೂ ಜೋಡಿಗಳ ನವಜೀವನ ಶುರುವಾಯಿತು. ಸಿಹಾಬ್ ಹಾಗೂ ಖಾಸಿಫ್ ಸುಗಂಧ ದ್ರವ್ಯ ಮಾರಾಟ ಮಳಿಗೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 
 
ಸ್ಥಳೀಯರಲ್ಲಿ ಅನುಮಾನ: ‘ಈ ನಾಲ್ಕು ಮಂದಿ ನೆರೆಹೊರೆಯವರ ಜತೆ ಮಾತೇ ಆಡುತ್ತಿರಲಿಲ್ಲ. ಸ್ಥಳೀಯರು ತಾವಾಗಿಯೇ ಮಾತನಾಡಿಸಿದರೂ ಗಾಬರಿಯಿಂದ ಮನೆಯೊಳಗೆ ಹೋಗುತ್ತಿದ್ದರು. ಈ ವರ್ತನೆಯಿಂದ ಅನುಮಾನಗೊಂಡ ಉದ್ಯಮಿಯೊಬ್ಬರು, ತಮಗೆ ಪರಿಚಯವಿದ್ದ ಸಿಸಿಬಿ ಡಿಸಿಪಿ ಎಚ್‌.ಡಿ.ಆನಂದ್‌ಕುಮಾರ್ ಅವರಿಗೆ ವಿಷಯ ತಿಳಿಸಿದ್ದರು.
 
ಅವರು  ಆ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಇಡುವಂತೆ ತಮ್ಮ ಸಿಬ್ಬಂದಿಯನ್ನು ಮನೆ ಹತ್ತಿರ ಕಳುಹಿಸಿದ್ದರು. ಐದಾರು ದಿನ ಮನೆ ಬಳಿ ಸುತ್ತಾಡಿ ಗಮನಿಸಿದ ತಂಡ, ಬುಧವಾರ ಸಂಜೆ 6 ಗಂಟೆಗೆ ಮನೆ ಮೇಲೆ ದಾಳಿ ನಡೆಸಿ ಅವರನ್ನು ಬಂಧಿಸಿದೆ’ ಎಂದು ಐಎಸ್‌ಡಿ ಅಧಿಕಾರಿಯೊಬ್ಬರು ತಿಳಿಸಿದರು.
 
‘ಆರಂಭದಲ್ಲಿ ತಾವು ರಾಜಸ್ತಾನದವರೆಂದು ಹೇಳಿಕೊಂಡರು. ಆಗ ರಾಜಸ್ತಾನದ ವ್ಯಕ್ತಿಯೊಬ್ಬರನ್ನು ಕರೆಸಿ, ಆರೋಪಿಗಳನ್ನು ಮಾತನಾಡಿಸುವಂತೆ ಹೇಳಿದೆವು. ಭಾಷೆಯ ಶೈಲಿ ಗುರುತಿಸಿದ ಆ ವ್ಯಕ್ತಿ, ‘ಇವರು ರಾಜಸ್ತಾನದವರಂತೆ ಕಾಣಿಸುತ್ತಿಲ್ಲ’ ಎಂದರು.
 
ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಪಾಕಿಸ್ತಾನದಿಂದ ಬಂದಿದ್ದಾಗಿ ಹೇಳಿಕೆ ಕೊಟ್ಟರು. ಮನೆಯಲ್ಲಿ ಅವರ ಆಧಾರ್‌ ಕಾರ್ಡ್‌ಗಳು ಸಿಕ್ಕಿವೆ. ಅವುಗಳನ್ನು ಹೇಗೆ ಮಾಡಿಸಿಕೊಂಡರು ಎಂಬುದು ಗೊತ್ತಾಗಿಲ್ಲ’ ಎಂದು ಮಾಹಿತಿ ನೀಡಿದರು.
****
ಪ್ರತ್ಯೇಕ ವಿಚಾರಣೆ

‘ಸಮೀರಾ 6 ತಿಂಗಳ ಗರ್ಭಿಣಿ. ಹೀಗಾಗಿ, ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸುವ ಗೋಜಿಗೆ ಹೋಗಿಲ್ಲ. ನಗರದಲ್ಲಿ ಯಾರ ಜತೆ ಸಂಪರ್ಕದಲ್ಲಿದ್ದರು, ಬೇರೆ ಉದ್ದೇಶ ಏನಾದರೂ ಇತ್ತೇ ಎಂಬ ಬಗ್ಗೆ ಆರೋಪಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

****
ಕಾನ್‌ಸ್ಟೆಬಲ್ ಬಳಿ ಕಾರು ಖರೀದಿ!

‘ಹರಿಪ್ರಸಾದ್ ಎಂಬ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಪರಿಚಿತ ಕಾನ್‌ಸ್ಟೆಬಲ್‌ ಬಳಿ ₹ 1 ಲಕ್ಷ ಸಾಲ ಪಡೆದಿದ್ದರು. ಆ ಸಾಲ ಮರಳಿಸಲು ಆಗದೆ ತಮ್ಮ ‘ಸ್ವಿಫ್ಟ್‌’ ಕಾರನ್ನು ಕಾನ್‌ಸ್ಟೆಬಲ್‌ಗೆ ಕೊಟ್ಟಿದ್ದ ಅವರು, 2016ರಲ್ಲಿ ಕೆಲಸದ ನಿಮಿತ್ತ ಕತಾರ್‌ಗೆ ಹೋಗಿದ್ದರು. ಅಲ್ಲಿ ಸಿಹಾಬ್‌ ಪರಿಚಯವಾಗಿತ್ತು’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಸಿಹಾಬ್ ಕತಾರ್‌ನಿಂದ  ನಗರಕ್ಕೆ ಬಂದ ನಂತರ ಅವರಿಗೆ ಕರೆ ಮಾಡಿದ್ದ ಹರಿಪ್ರಸಾದ್, ‘ಕಾನ್‌ಸ್ಟೆಬಲ್‌ವೊಬ್ಬರ ಬಳಿ ನನ್ನ ಕಾರು ಇದೆ. ಅವರಿಗೆ ₹ 1 ಲಕ್ಷ ಕೊಟ್ಟು ನೀವು ಅದನ್ನು ಪಡೆದುಕೊಳ್ಳಿ’ ಎಂದಿದ್ದರು. ಅಂತೆಯೇ ಸಿಹಾಬ್ ಕಾನ್‌ಸ್ಟೆಬಲ್‌ಗೆ ಹಣ ಕೊಟ್ಟು ಆ ಕಾರು ಖರೀದಿಸಿದ್ದರು’ ಎಂದು ಮಾಹಿತಿ ನೀಡಿದರು.
****
‘ದೇಶಗಳ ವಿಷಯ ನಮಗೆ ಬೇಡ’
‘ಪಾಕಿಸ್ತಾನದಲ್ಲಿ ಒಂಟಿ ಮಹಿಳೆ ವಿದೇಶ ಪ್ರವಾಸ ಮಾಡುವಂತಿಲ್ಲ. ಹೀಗಾಗಿ, ಪತ್ನಿಯನ್ನು ಕರೆಸಿಕೊಳ್ಳಲು ಒದ್ದಾಡುತ್ತಿದ್ದೆ. ಇಂಥ ಸಂದರ್ಭದಲ್ಲಿ ಖಾಸಿಫ್–ಝೈನಬ್ ದೇವರಂತೆ ಸಿಕ್ಕರು.  ತೀರಾ ಸಂಕಷ್ಟದ ದಿನಗಳನ್ನು ಕಳೆದು ಈಗ ಹೊಸ ಬದುಕು ಕಟ್ಟಿಕೊಳ್ಳುತ್ತಿದ್ದೆವು.

ADVERTISEMENT

ಅಷ್ಟರಲ್ಲಿ ನೀವು ನಮ್ಮನ್ನು ಬಂಧಿಸಿದ್ದೀರಿ. ನಾವೇನು ಉಗ್ರರಲ್ಲ. ಪಾಕ್ ಪ್ರಜೆಗಳು ಎಂಬ ಒಂದೇ ಕಾರಣಕ್ಕೆ ಬಂಧಿಸಿದ್ದೀರಿ. ದೇಶಗಳ ವಿಷಯ ನಮಗೆ ಬೇಡ. ಜೀವನ ನಡೆದರೆ ಸಾಕೆಂದು ಬದುಕುತ್ತಿದ್ದೇವೆ’ ಎಂದು ಸಿಹಾಬ್ ಹೇಳಿಕೆ ಕೊಟ್ಟಿದ್ದಾಗಿ ಸಿಸಿಬಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.