ADVERTISEMENT

ಪಾಲಿಕೆಗೆ ನಷ್ಟ: ವಾಹನ ಸವಾರರಿಗೆ ಸಂಕಷ್ಟ

ಮಹಾತ್ಮ ಗಾಂಧಿ ರಸ್ತೆಯಲ್ಲಿ ಬ್ಯಾರಿಕೇಡ್‌ಗಳ ಮೇಲೆ ಅನಧಿಕೃತ ಜಾಹೀರಾತು ಫಲಕ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2015, 19:30 IST
Last Updated 4 ಅಕ್ಟೋಬರ್ 2015, 19:30 IST

ಬೆಂಗಳೂರು: ನಗರದ ಎಂ.ಜಿ.ರಸ್ತೆಯಲ್ಲಿ ಹಾಕಲಾಗಿರುವ ಬ್ಯಾರಿಕೇಡ್‌ಗಳ ಮೇಲೆ ಖಾಸಗಿ ಕಂಪೆನಿಗಳು ಜಾಹೀರಾತು ಫಲಕಗಳನ್ನು ಅಳವಡಿಸಿರುವುದರಿಂದ ಪಾಲಿಕೆಗೆ ಆರ್ಥಿಕ ನಷ್ಟ ಉಂಟಾಗುತ್ತಿರುವ ಜತೆಗೆ ವಾಹನ ಸವಾರರಿಗೂ ತೊಂದರೆಯಾಗುತ್ತಿದೆ.

ಅನಧಿಕೃತ ಜಾಹೀರಾತು ಫಲಕಗಳ ಸಂಬಂಧ ಬಿಬಿಎಂಪಿ ಸಹಾಯಕ ಆಯುಕ್ತ (ಜಾಹೀರಾತು) ಕೆ.ಮಥಾಯ್‌ ಅವರು ಇತ್ತೀಚೆಗೆ ತನಿಖೆ ನಡೆಸಿ ಪಾಲಿಕೆ ಆಯುಕ್ತರಿಗೆ ಸಲ್ಲಿಸಿರುವ ವರದಿಯಿಂದ ಈ ಸಂಗತಿ ಬೆಳಕಿಗೆ ಬಂದಿದೆ. 

ನಗರ ಪೊಲೀಸರು ಎಂ.ಜಿ.ರಸ್ತೆಯಲ್ಲಿ  ರಸ್ತೆ ವಿಭಜಕವಾಗಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದಾರೆ. ಇವುಗಳ ಮೇಲೆ ಕಟ್ಟಡ ನಿರ್ಮಾಣ ಸಾಮಗ್ರಿ ತಯಾರಿಕಾ ಕಂಪೆನಿಗಳು ಜಾಹೀರಾತು ಫಲಕಗಳನ್ನು ಅಳವಡಿಸಿವೆ.ಬ್ಯಾರಿಕೇಡ್‌ಗಳ ಮೇಲೆ ಜಾಹೀರಾತು ಹಾಕಲು ಪಾಲಿಕೆಯ ಜಾಹೀರಾತು ವಿಭಾಗದ ಅನುಮತಿ ಪಡೆದಿಲ್ಲ. ಅಲ್ಲದೇ, ಜಾಹೀರಾತು ಅಳವಡಿಸಿರುವುದಕ್ಕೆ ತೆರಿಗೆಯನ್ನೂ ಕಟ್ಟುತ್ತಿಲ್ಲ ಎಂದು ಅವರು ವರದಿಯಲ್ಲಿ ಹೇಳಿದ್ದಾರೆ. 

ಜಾಹೀರಾತು ಹಾಕಿರುವ ಕಂಪೆನಿಗಳು ಅದಕ್ಕೆ ತೆರಿಗೆ ಕಟ್ಟಬೇಕು. ಇಲ್ಲದಿದ್ದರೆ ಅವುಗಳನ್ನು ತೆರವುಗೊಳಿಸುವಂತೆ ನಗರ ಪೊಲೀಸರಿಗೆ ಪಾಲಿಕೆ ಆಯುಕ್ತರು ಕೂಡಲೇ ನೋಟಿಸ್‌ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.ದೆಹಲಿಯಲ್ಲಿಯೂ ಇದೇ ರೀತಿ ರಸ್ತೆಯಲ್ಲಿ ಹಾಕಲಾಗಿರುವ ಬ್ಯಾರಿಕೇಡ್‌ಗಳ ಮೇಲೆ ಜಾಹೀರಾತು ಹಾಕಲಾಗಿದೆ. ಅದಕ್ಕೆ ಆ ಕಂಪೆನಿಗಳು ತೆರಿಗೆ ಕಟ್ಟುತ್ತಿವೆ ಮತ್ತು ಈ ಬಗ್ಗೆ ಇರುವ ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ. ರಸ್ತೆ ಮಧ್ಯೆ ಹಾಕಲಾಗಿರುವ ಬ್ಯಾರಿಕೇಡ್‌ಗಳ ಮೇಲೆ ಜಾಹೀರಾತು ಅಳವಡಿಸಿರುವು
ದರಿಂದ ವಾಹನ ಸವಾರರ ಗಮನ ಅದರ ಮೇಲೆ ಹೋಗುತ್ತದೆ. ಇದರಿಂದ ಅಪಘಾತಗಳು ಸಹ ಹೆಚ್ಚುತ್ತವೆ ಎಂದು ಅವರು ವರದಿಯಲ್ಲಿ ಹೇಳಿದ್ದಾರೆ.

ಝೀಬ್ರಾ ಕ್ರಾಸಿಂಗ್‌ ಆಥವಾ ಸ್ಕೈವಾಕ್‌ ನಿರ್ಮಿಸಿ
ಎಂ.ಜಿ.ರಸ್ತೆಯಲ್ಲಿ ಅನಿಲ್‌ಕುಂಬ್ಳೆ ವೃತ್ತದಿಂದ ಕಾವೇರಿ ಜಂಕ್ಷನ್‌ವರೆಗೆ ರಸ್ತೆ   ದಾಟಲು ಅವಕಾಶ ಇಲ್ಲದಂತೆ ನಗರ ಸಂಚಾರ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿರುವ ಕ್ರಮಕ್ಕೆ ಪಾದಚಾರಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಾಫ್ಟ್‌ವೇರ್ ಉದ್ಯೋಗಿ ಕೆ.ನಮೀತಾ, ‘ಅಪಘಾತಗಳನ್ನು ನಿಯಂತ್ರಿಸಲು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ ಎಂದು ಪೊಲೀಸರು ಹೇಳುತ್ತಾರೆ. ಇದರಿಂದ ಅಪಘಾತಗಳ ಸಂಖ್ಯೆ ತಗ್ಗುವುದಿಲ್ಲ. ಬದಲಿಗೆ ಪಾದಚಾರಿಗಳಿಗೆ ತೊಂದರೆಯಾಗುತ್ತದೆ’ ಎಂದು ಹೇಳಿದರು.

ಅನಿಲ್ ಕುಂಬ್ಳೆ ವೃತ್ತದಿಂದ ಕಾವೇರಿ ಜಂಕ್ಷನ್‌ವರೆಗೆ ಎಲ್ಲಿಯೂ ರಸ್ತೆ ದಾಟಲು ಝೀಬ್ರಾ ಕ್ರಾಸಿಂಗ್ ವ್ಯವಸ್ಥೆ ಇಲ್ಲ. ಇದರಿಂದ ಜನರು ಬ್ಯಾರಿಕೇಡ್‌ಗಳಲ್ಲಿ ನುಗ್ಗಿ ರಸ್ತೆ ದಾಟಲು ಮುಂದಾಗುತ್ತಾರೆ. ಹೀಗಾಗಿ ಅಪಘಾತಗಳ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ ಎಂದರು. ಎಂ.ಜಿ.ರಸ್ತೆ 80 ಅಡಿ ಅಗಲ ಇದೆ. ಮೆಟ್ರೊ ನಿಲ್ದಾಣದ ಬಳಿ ಇದ್ದ ಝೀಬ್ರಾ ಕ್ರಾಸಿಂಗ್ ಮುಚ್ಚಲಾಗಿದೆ. ಬಿಎಂಟಿಸಿ ಬಸ್‌ಗಳು ಮೆಟ್ರೊ ನಿಲ್ದಾಣದ ಬಳಿ ನಿಲ್ಲುತ್ತವೆ. ಬಸ್‌ಗೆ ಹೋಗಲು ಒಂದು ಕಿ.ಮೀ.ನಷ್ಟು ನಡೆದು ಹೋಗಬೇಕಾಗುತ್ತದೆ. ಅಂಧರು ಮತ್ತು ಅಂಗವಿಕಲರಿಗೆ ಇದರಿಂದ ತುಂಬಾ ತೊಂದರೆಯಾಗುತ್ತದೆ ಎಂದರು.

ಜೋರಾಗಿ ಗಾಳಿ ಬೀಸಿದರೆ ಬ್ಯಾರಿಕೇಡ್‌ಗಳು ರಸ್ತೆ ಮೇಲೆ ಬೀಳುತ್ತವೆ. ಇತ್ತೀಚೆಗೆ ಸುರಿದ ಭಾರಿ ಗಾಳಿ, ಮಳೆಯಿಂದಾಗಿ ಬ್ಯಾರಿಕೇಡ್‌
ಗಳು ರಸ್ತೆ ಮೇಲೆ ಬಿದ್ದಿದ್ದರಿಂದ ವಾಹನ ದಟ್ಟಣೆ ಉಂಟಾಗಿತ್ತು. ಪಾದಚಾರಿಗಳಿಗೆ ಆಗುವ ತೊಂದರೆ ತಪ್ಪಿಸಲು ಝೀಬ್ರಾ ಕ್ರಾಸಿಂಗ್‌ ವ್ಯವಸ್ಥೆ ಅಥವಾ ಸ್ಕೈವಾಕ್‌ ನಿರ್ಮಿಸಬೇಕು ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT