ADVERTISEMENT

ಪಾಲಿಕೆ ಸದಸ್ಯನ ಮಗನ ವಿರುದ್ಧ ಆರೋಪ

​ಪ್ರಜಾವಾಣಿ ವಾರ್ತೆ
Published 9 ಮೇ 2017, 19:39 IST
Last Updated 9 ಮೇ 2017, 19:39 IST

ಬೆಂಗಳೂರು: ಸದಾಶಿವನಗರದ ಕಾವೇರಿ ಜಂಕ್ಷನ್ ಬಳಿ ಓಮ್ನಿ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದಿದ್ದು, ಕಾರಿನ ಚಾಲಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ.

ಶೆಟ್ಟಿಹಳ್ಳಿ ವಾರ್ಡ್‌ನ ಬಿಬಿಎಂಪಿ ಸದಸ್ಯ ಕೆ.ನಾಗಭೂಷಣ್‌ ಅವರ ಮಗ ಶಶಾಂಕ್ ಆ ಕಾರನ್ನು ಚಲಾಯಿಸುತ್ತಿದ್ದರು ಎಂದು ಪ್ರತ್ಯಕ್ಷದರ್ಶಿ
ಯೊಬ್ಬರು ತಿಳಿಸಿದ್ದಾರೆ.

‘ಮೇ 7 ರಂದು ಅಪಘಾತ ಸಂಭವಿಸಿದೆ. ಕಾವೇರಿ ಜಂಕ್ಷನ್ ಬಳಿ ಇನೋವಾ ಕಾರಿನಲ್ಲಿ ಬರುತ್ತಿದ್ದ ಶಶಾಂಕ್ ಬಸ್ ಒಂದನ್ನು ಹಿಂದಿಕ್ಕಲು ಹೋಗಿ ಓಮ್ನಿ ಕಾರಿಗೆ ಡಿಕ್ಕಿ ಹೊಡೆದಿದ್ದರು. ಬಳಿಕ ಕಾರು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದರು’ ಎಂದು ಅವರು ತಿಳಿಸಿದರು.

ADVERTISEMENT

‘ಈ ವೇಳೆ ಸ್ಥಳೀಯರು ಅವರ ಕಾರು ಅಡ್ಡಗಟ್ಟಿದ್ದರು. ಸ್ಥಳಕ್ಕೆ ಬಂದ ಪೊಲೀಸರಿಗೆ, ‘ಅದೇನ್‌ ಬಿಡಿ ಸಾರ್‌. ಬೆಳಿಗ್ಗೆ ಸರಿ ಮಾಡಿಸಿ ಕೊಡ್ತೀನಿ. ಎಲ್ಲ ಸೆಟ್ಲ್‌ ಮಾಡ್ತೀನಿ’ ಎಂದು ಶಶಾಂಕ್ ಹೇಳಿದ್ದರು. ಬಳಿಕ ಪೊಲೀಸರು ಇಬ್ಬರಿಗೂ ರಾಜಿ ಮಾಡಿಸಿ ಕಳುಹಿಸಿದ್ದಾರೆ’ ಎಂದರು.

‘ಅಪಘಾತ  ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿಲ್ಲ. ಪ್ರಭಾವಿ ವ್ಯಕ್ತಿಯ ಮಗ ಎಂಬ ಕಾರಣಕ್ಕೆ ಅವರನ್ನು ಹಾಗೆಯೇ ಬಿಟ್ಟು ಕಳುಹಿಸಿದ್ದಾರೆ’ ಎಂದು ಆರೋಪಿಸಿದರು.

ದೂರು ಕೊಟ್ಟಿಲ್ಲ: ‘ಅಪಘಾತ ಆಗಿದ್ದು ನಿಜ. ಈ ಬಗ್ಗೆ ನಮಗೆ ದೂರು ಬಂದಿಲ್ಲ. ಸ್ಥಳದಲ್ಲಿದ್ದವರೇ ಶಶಾಂಕ್ ಹಾಗೂ ಒಮ್ನಿ ಚಾಲಕರಿಗೆ ರಾಜಿ ಮಾಡಿಸಿದ್ದಾರೆ. ಸ್ಥಳದಲ್ಲಿ ಠಾಣೆಯ ಯಾವುದೇ ಸಿಬ್ಬಂದಿ ಇರಲಿಲ್ಲ. ಈ ಸಂಬಂಧ ಯಾರೂ ದೂರು ನೀಡಿಲ್ಲ’ ಎಂದು ಸದಾಶಿವನಗರ ಸಂಚಾರ ಠಾಣೆಯ ಪೊಲೀಸರು ಸ್ಪಷ್ಟ ಪಡಿಸಿದರು.

**

ಅಪಘಾತ ಸಂಭವಿಸಿದ ಬಗ್ಗೆ ಮಗ ಕರೆ ಮಾಡಿ ಹೇಳಿದ್ದಾನೆ. ಆತ ಕುಡಿದು ವಾಹನ ಚಾಲನೆ ಮಾಡಿಲ್ಲ. ಕೆಲಸದ ನಿಮಿತ್ತ ಹೊರಗಡೆ ಇದ್ದೇನೆ. ವಾಪಸ್ ಬಂದು ಈ ಸಮಸ್ಯೆ ಬಗೆಹರಿಸುತ್ತೇನೆ.
–ಕೆ. ನಾಗಭೂಷಣ್, ಶೆಟ್ಟಿಹಳ್ಳಿ ವಾರ್ಡ್ ಬಿಬಿಎಂಪಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.