ADVERTISEMENT

ಪಾಲಿಕೆ ಸದಸ್ಯೆಯ ಬಂಧನ

ಬಟ್ಟೆ ಅಂಗಡಿಯಲ್ಲಿ ಕಳವು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2014, 20:08 IST
Last Updated 22 ಏಪ್ರಿಲ್ 2014, 20:08 IST

ಬೆಂಗಳೂರು: ಬಟ್ಟೆ ಅಂಗಡಿಯಲ್ಲಿ ಬಟ್ಟೆಗಳನ್ನು ಕಳವು ಮಾಡಿದ ಆರೋಪದ ಮೇಲೆ ಬಿಬಿಎಂಪಿ ಗಿರಿನಗರ ವಾರ್ಡ್‌ನ ಬಿಜೆಪಿ ಸದಸ್ಯೆ ಎಚ್‌.ಎಸ್.ಲಲಿತಾ ಅವರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ ಗಾಂಧಿನಗರದ ಸುಖ್‌ಸಾಗರ್‌ ಮಾಲ್‌ನಲ್ಲಿನ ಅಶೋಕ್‌ ಅಪೆರಲ್ಸ್‌ ಬಟ್ಟೆ ಅಂಗಡಿಗೆ ಬಂದಿದ್ದ ಲಲಿತಾ ಅವರು ಏಳು ಚೂಡಿದಾರ್‌ ಟಾಪ್‌ಗಳನ್ನು ಕಳವು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಟ್ರಯಲ್‌ ನೋಡುವ ಸೋಗಿನಲ್ಲಿ ಒಂಬತ್ತು ಚೂಡಿದಾರ್‌ ಟಾಪ್‌ಗಳನ್ನು ತೆಗೆದುಕೊಂಡು ಟ್ರಯಲ್‌ ರೂಂಗೆ ಹೋಗಿದ್ದ ಲಲಿತಾ ಅವರು ಅದರಲ್ಲಿ ಏಳು ಟಾಪ್‌ಗಳನ್ನು ಸೀರೆಯೊಳಗೆ ತೂರಿಸಿಕೊಂಡಿದ್ದರು. ನಂತರ ಟ್ರಯಲ್‌ ರೂಂನಿಂದ ಹೊರಬಂದ ಅವರು ಎರಡು ಟಾಪ್‌ಗಳನ್ನು ಹಿಂದಿರುಗಿಸಿ ಅಂಗಡಿಯಿಂದ ಹೊರಡಲು ಮುಂದಾಗಿದ್ದಾರೆ.

ಟಾಪ್‌ಗಳ ಸಂಖ್ಯೆ ಕಡಿಮೆ ಇದ್ದುದರಿಂದ ಅನುಮಾನಗೊಂಡ ಮಳಿಗೆಯ ಕೆಲಸಗಾರರು ಲಲಿತಾ ಅವರನ್ನು ಹಿಡಿದು ವಿಚಾರಿಸಿದಾಗ ಕಳವು ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಬಳಿಕ ಮಳಿಗೆಯ ಮಾಲೀಕ ಅಶೋಕ್‌ ಅವರು ಲಲಿತಾ ಅವರನ್ನು ಠಾಣೆಗೆ ಕರೆದುಕೊಂಡು ಬಂದರು ಎಂದು ಪೊಲೀಸರು ತಿಳಿಸಿದ್ದಾರೆ.

ಠಾಣೆಯಲ್ಲಿ ಲಲಿತಾ ಅವರನ್ನು ತಪಾಸಣೆಗೆ ಒಳಪಡಿಸಿದಾಗಲೂ ಅವರ ಬಳಿ ಮತ್ತೊಂದು ಟಾಪ್‌ ಪತ್ತೆಯಾಯಿತು. ಸುಮಾರು ಒಂದು ತಿಂಗಳ ಹಿಂದೆ ಅಶೋಕ್‌ ಅಪೆರಲ್ಸ್‌ ಮಳಿಗೆಗೆ ಹೋಗಿದ್ದ ಲಲಿತಾ ಅವರು ಇದೇ ರೀತಿ ಕೆಲ ಬಟ್ಟೆಗಳನ್ನು ಕಳವು ಮಾಡಿದ್ದರು ಎಂದು ತನಿಖೆಯಿಂದ ಗೊತ್ತಾಗಿದೆ.

ಮಾಲೀಕ ಅಶೋಕ್‌ ಅವರು ನೀಡಿರುವ ದೂರು ಆಧರಿಸಿ ಲಲಿತಾ ಅವರ ವಿರುದ್ಧ ಕಳವು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ನ್ಯಾಯಾಂಗ ಬಂಧನ: ‘ಆರೋಪಿ­ಯನ್ನು ನ್ಯಾಯಾಂಗ ಬಂಧ­ನಕ್ಕೆ ಒಪ್ಪಿಸಿ ನ್ಯಾಯಾ­ಧೀಶರು ಆದೇಶ ಹೊರ­ಡಿಸಿದ್ದಾರೆ. ಆ ಆದೇಶದ ಅನ್ವಯ ಲಲಿತಾ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ’ ಎಂದು ಚಿಕ್ಕಪೇಟೆ ಉಪ ವಿಭಾಗದ ಎಸಿಪಿ ಎ.ಬಿ. ರಾಜೇಂದ್ರ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಲಲಿತಾ ಅವರು ಕ್ಲೆಪ್ಟೋಮೇನಿಯಾ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ಶಂಕೆ ಇದೆ. ಹೀಗಾಗಿ ಅವರು ಕಳವು ಮಾಡಿರಬಹುದು. ಆ ಬಗ್ಗೆ ಕುಟುಂಬ ಸದಸ್ಯರ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಲಾ­ಗುತ್ತಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.