ADVERTISEMENT

ಪಾಲಿಕೆ ಸದಸ್ಯೆ ಲಲಿತಾ ನಿಧನ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2014, 19:41 IST
Last Updated 26 ನವೆಂಬರ್ 2014, 19:41 IST

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಗಿರಿನಗರ ವಾರ್ಡ್‌ನ ಬಿಜೆಪಿ ಸದಸ್ಯೆಯಾಗಿದ್ದ ಎಚ್.ಎಸ್. ಲಲಿತಾ (40) ಅವರು ಬುಧವಾರ ಸಂಜೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರಿಗೆ ಪತಿ ಹಾಗೂ ಒಬ್ಬ ಪುತ್ರ ಇದ್ದಾರೆ.

‘ಲಲಿತಾ ಅವರದು ಅಸಹಜ ಸಾವು ಎಂದು ಆಸ್ಪತ್ರೆ ವೈದ್ಯರು ವರದಿ ಕೊಟ್ಟಿದ್ದಾರೆ. ಆ ವರದಿ ಆಧರಿಸಿ ಗಿರಿನಗರ ಠಾಣೆಯಲ್ಲಿ ಅಸಹಜ ಸಾವು (ಸಿಆರ್‌ಪಿಸಿಯ 174 ಸೆಕ್ಷನ್‌) ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಬಿ.ಎಸ್‌. ಲೋಕೇಶ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾವಿನ ಕಾರಣವನ್ನು ವೈದ್ಯರು ವರದಿಯಲ್ಲಿ ತಿಳಿಸಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಆ ಕುರಿತು ಹೆಚ್ಚಿನ ಮಾಹಿತಿ ಸಿಗಲಿದೆ’ ಎಂದು ಹೇಳಿದರು.

ಕಳೆದ ಕೆಲವು ವಾರಗಳಿಂದ  ಖಿನ್ನತೆಯಿಂದ ಬಳಲುತ್ತಿದ್ದ ಅವರು ತೀವ್ರವಾಗಿ ಅಸ್ವಸ್ಥಗೊಂಡು  ಆಸ್ಪತ್ರೆ ಸೇರಿದ್ದರು. ಅವರು ಆತ್ಮಹತ್ಯೆಗೆ ಯತ್ನಿಸಿದ್ದರು ಎಂಬ ವದಂತಿ ಹಬ್ಬಿತ್ತು. ಕ್ಲೆಪ್ಟೋಮೇನಿಯಾ ಎಂಬ ಮಾನಸಿಕ ಕಾಯಿಲೆಯಿಂದ ಅವರು ಬಳಲುತ್ತಿದ್ದರು ಎಂದು ಹೇಳಲಾಗಿತ್ತು.

ಅಂತಿಮ ದರ್ಶನ: ‘ಗುರುವಾರ ಮಧ್ಯಾಹ್ನ 12 ರಿಂದ 3 ರವರೆಗೆ ಗಿರಿನಗರದ ಅವರ ಮನೆಯಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ.

ಮಧ್ಯಾಹ್ನ 3.30ಕ್ಕೆ ಚಾಮರಾಜಪೇಟೆ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ’ ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎನ್‌.ಆರ್‌. ರಮೇಶ್‌ ತಿಳಿಸಿದರು.

ಕೌನ್ಸಿಲ್‌ ಸಭೆ ಮುಂದೂಡಿಕೆ: ಬಿಬಿಎಂಪಿ ಮಾಸಿಕ ಕೌನ್ಸಿಲ್‌ ಸಭೆ ಗುರುವಾರ ನಡೆಯಬೇಕಿತ್ತು. ಲಲಿತಾ ಅವರ ನಿಧನದ ಕಾರಣ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಸಭೆಯನ್ನು ಶುಕ್ರವಾರಕ್ಕೆ ಮುಂದೂಡಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.