ADVERTISEMENT

ಪಾಸ್‌ಪೋರ್ಟ್‌ ಕಾಯ್ದೆ ಜಾರಿಯಲ್ಲಿ ತೊಡಕು

ವೀಸಾ ಅವಧಿ ಮುಗಿದರೂ ನೆಲೆಸಿದ ಪ್ರಕರಣ: ಹೈಕೋರ್ಟ್‌ಗೆ ರಾಜ್ಯ ಸರ್ಕಾರದ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2016, 20:08 IST
Last Updated 11 ಫೆಬ್ರುವರಿ 2016, 20:08 IST
ಪಾಸ್‌ಪೋರ್ಟ್‌ ಕಾಯ್ದೆ ಜಾರಿಯಲ್ಲಿ ತೊಡಕು
ಪಾಸ್‌ಪೋರ್ಟ್‌ ಕಾಯ್ದೆ ಜಾರಿಯಲ್ಲಿ ತೊಡಕು   

ಬೆಂಗಳೂರು: ‘ವೀಸಾ ಅವಧಿ ಮುಗಿದ ಬಳಿಕವೂ ರಾಜ್ಯದಲ್ಲಿ ನೆಲೆಸಿರುವವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಪಾಸ್‌ಪೋರ್ಟ್‌ ಕಾಯ್ದೆ–1967ರ ಕಲಂ 14 ಮತ್ತು ಕೇಂದ್ರ ಗೃಹ ಇಲಾಖೆಯ ವಿದೇಶಿ ವ್ಯವಹಾರಗಳ ವಿಭಾಗವು 2014ರಲ್ಲಿ ಹೊರಡಿಸಿರುವ ಸುತ್ತೋಲೆಗಳ ನಡುವೆ ದ್ವಂದ್ವ ನಿಲುವು ಇದ್ದು ಇದು ರಾಜ್ಯಕ್ಕೆ ತೊಡಕಾಗಿ ಪರಿಣಮಿಸಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ ಅವರಿದ್ದ ಏಕಸದಸ್ಯ ಪೀಠವು ಗುರುವಾರ ನೈಜೀರಿಯಾ ಪ್ರಜೆಯೊಬ್ಬರ ಜಾಮೀನು ಅರ್ಜಿ ವಿಚಾರಣೆ ನಡೆಸಿತು.
ಈ ವೇಳೆ ವೀಸಾ ಅವಧಿ ಮುಗಿದ ಬಳಿಕವೂ  ರಾಜ್ಯದಲ್ಲಿ ನೆಲೆಸಿರುವ ವಿದೇಶಿಯರ ಕುರಿತಂತೆ ಹೆಚ್ಚುವರಿ ಅಡ್ವೊಕೇಟ್ ಜನರಲ್‌ ಎ.ಎಸ್‌.ಪೊನ್ನಣ್ಣ ನ್ಯಾಯಪೀಠಕ್ಕೆ ವಿವರಣೆ ನೀಡಿದರು.

‘ಕೇಂದ್ರ ಗೃಹ ಇಲಾಖೆಯು 2014ರ ಮಾರ್ಚ್‌ 12ರಂದು ಹೊರಡಿಸಿರುವ ಸುತ್ತೋಲೆ ಅನುಸಾರ ಪಾಸ್‌ಪೋರ್ಟ್‌ ಕಾಯ್ದೆ ಉಲ್ಲಂಘಿಸಿದ ವಿದೇಶಿ ಪ್ರಜೆಗಳಿಗೆ  ದಂಡ ವಿಧಿಸಿ ಬಿಡುಗಡೆ ಮಾಡಬಹುದು ಮತ್ತು ಅಂತಹವರನ್ನು ಕಪ್ಪುಪಟ್ಟಿಗೆ ಸೇರಿಸಬಹುದು ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ಅಧೀನ ನ್ಯಾಯಾಲಯಗಳು ಕೇವಲ ದಂಡ ಕಟ್ಟಿಸಿಕೊಂಡು ಇಂತಹವರನ್ನು ಪ್ರಕರಣದಿಂದ ಖುಲಾಸೆ ಮಾಡುತ್ತಿವೆ’ ಎಂದರು.

‘ವೀಸಾ ಅವಧಿ ಮುಗಿದ ಬಳಿಕವೂ ರಾಜ್ಯದಲ್ಲಿ ನೆಲೆಸಿರುವವರ ಕುರಿತಂತೆ ವಿದೇಶಿ ನೋಂದಣಿ ಪ್ರಾದೇಶಿಕ ಕಚೇರಿಯು (ಎಫ್‌ಆರ್‌ಆರ್‌ಒ) ಕ್ರಮ ಕೈಗೊಳ್ಳಬೇಕು. ಆದರೆ ಈ ವಿಷಯದಲ್ಲಿ   ನಿರ್ದಿಷ್ಟ ಕಾರ್ಯಸೂಚಿ ಅಥವಾ ಮಾರ್ಗದರ್ಶಿ ಸೂತ್ರ ಇಲ್ಲದಂತಾಗಿದೆ. ಆದ್ದರಿಂದ ಹೈಕೋರ್ಟ್‌  ಈ ದಿಸೆಯಲ್ಲಿ 2014ರ ಸುತ್ತೋಲೆ ಮತ್ತು ಪಾಸ್‌ಪೋರ್ಟ್‌ ಕಾಯ್ದೆಯನ್ನು ಪುನರ್ ಅವಲೋಕಿಸಬೇಕು’ ಎಂದು ಪೊನ್ನಣ್ಣ ಮನವಿ ಮಾಡಿದರು.

ಅರ್ಜಿದಾರರ ಪರ ಹಾಜರಿದ್ದ ವಕೀಲೆ ಎನ್‌.ಸರಸ್ವತಿ ಅವರು, ‘ವಿದೇಶಿಗರ ಮೇಲೆ ಎಫ್‌ಆರ್‌ಆರ್‌ಒ ಅಧಿಕಾರಿಗಳು ದಬ್ಬಾಳಿಕೆ ನಡೆಸುತ್ತಾರೆ’ ಎಂದು ದೂರಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ  ಸಹಾಯಕ ಸಾಲಿಸಿಟರ್‌ ಜನರಲ್‌ ಕೃಷ್ಣ ಎಸ್‌.ದೀಕ್ಷಿತ್‌, ‘ಇದು ನಿರಾಧಾರ ಆರೋಪ. ವಾಸ್ತವದಲ್ಲಿ ವೀಸಾ ಕಾಯ್ದೆ ಉಲ್ಲಂಘಿಸಿದ ವಿದೇಶಿಯರ ಬಗ್ಗೆ ರಾಜ್ಯದ ಪೊಲೀಸರು ತೀರಾ ಮೃದು ಧೋರಣೆ ಅನುಸರಿಸುತ್ತಿದ್ದಾರೆ. ಅರ್ಜಿದಾರರ ವಕೀಲರು ಈ ರೀತಿ ಆರೋಪ ಮಾಡುವುದು ಸರಿಯಲ್ಲ. ಅವರ ಈ ಆರೋಪ ದಿಟವೇ ಆಗಿದ್ದರೆ ಅದನ್ನು ಕೋರ್ಟ್‌ಗೆ ಪ್ರಮಾಣ ಪತ್ರದ ಮೂಲಕ ಸಲ್ಲಿಸಲಿ’ ಎಂದು ಸವಾಲೆಸೆದರು.

ಎಫ್‌ಆರ್‌ಆರ್‌ಒ ಅಧಿಕಾರಿ, ‘ರಾಜ್ಯದಲ್ಲಿ ಒಟ್ಟು 30 ಸಾವಿರ ವಿದೇಶಿಯರು ನೆಲೆಸಿದ್ದಾರೆ. ಬೆಂಗಳೂರಿನಲ್ಲಿ 1,665 ಜನರು ವೀಸಾ ಅವಧಿ ಮುಕ್ತಾಯವಾಗಿದ್ದರೂ ನೆಲೆಸಿದ್ದಾರೆ’ ಎಂದು ತಿಳಿಸಿದರು. ಆದೇಶ ಕಾಯ್ದಿರಿಸಿದ ಪೀಠವು ವಿಚಾರಣೆಯನ್ನು ಮುಂದೂಡಿತು.

‘ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳಿ’
‘ವೀಸಾ ಅವಧಿ ಮುಕ್ತಾಯವಾಗಿದ್ದರೂ ನೆಲೆಸಿರುವ ವಿದೇಶಿಯರ ಪಾಸ್‌ಪೋರ್ಟ್‌ಗಳನ್ನು ಯಾಕೆ ಮುಟ್ಟುಗೋಲು ಹಾಕಿಕೊಂಡಿಲ್ಲ’ ಎಂದು ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್‌ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಪಿ.ಎಂ.ನವಾಜ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

‘ಯಾವುದೇ ವಿದೇಶಿಯರಿಗೆ ಪ್ರಾಥಮಿಕ ದಾಖಲೆ ಎಂದರೆ ವೀಸಾ. ಅವಧಿ ಮುಗಿದ ಕೂಡಲೇ ಅಂತಹವರು ಸ್ವದೇಶಕ್ಕೆ ಮರಳಬೇಕು. ಹಾಗಿರುವಾಗ ಅವರನ್ನು ಯಾವ ಕಾಯ್ದೆ ಅಡಿ ದಂಡ ಕಟ್ಟಿಸಿಕೊಂಡು ಬಿಡುತ್ತಿದ್ದೀರಿ’ ಎಂದು ಪ್ರಶ್ನಿಸಿದರು.

‘ವೀಸಾ ಅವಧಿ ಮುಗಿದರೂ ಇಲ್ಲಿಯೇ ನೆಲೆಸಿದವರನ್ನು ವಶಕ್ಕೆ ಪಡೆದು ಇರಿಸಿಕೊಳ್ಳಲು ಒಂದು ಪ್ರತ್ಯೇಕ ಕೇಂದ್ರವನ್ನು ತೆರೆಯಬೇಕು. ಎಲ್ಲ ವಿದೇಶಿಯರ ಕುರಿತಂತೆ ಸೂಕ್ತ ಅಂಕಿಅಂಶಗಳನ್ನು ಸಂಗ್ರಹ ಮಾಡಿಕೊಳ್ಳುವ ವ್ಯವಸ್ಥೆ ರೂಪಿಸಿಕೊಳ್ಳಬೇಕು’ ಪೊನ್ನಣ್ಣ ಅವರಿಗೆ ನ್ಯಾಯಮೂರ್ತಿಗಳು ತಾಕೀತು ಮಾಡಿದರು.

**
ವೀಸಾ ಅವಧಿ ಮುಗಿದ ಬಳಿಕವೂ ರಾಜ್ಯದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳಿಗೆ ಕಾನೂನು ಕ್ರಮ ಕೈಗೊಳ್ಳುವ ಕುರಿತಂತೆ ಹೈಕೋರ್ಟ್‌ ಅಧೀನ ನ್ಯಾಯಾಲಯಗಳಿಗೆ ಮಾರ್ಗದರ್ಶಿ ಸೂತ್ರ ಹಾಕಿಕೊಡಬೇಕು.
ಎ.ಎಸ್‌.ಪೊನ್ನಣ್ಣ, ಹೆಚ್ಚುವರಿ ಅಡ್ವೊಕೇಟ್‌ ಜನರಲ್‌

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.