ADVERTISEMENT

ಪಿ.ಜಿ ಹಾಸ್ಟೆಲ್‌ ತೆರಿಗೆ ದರ ಪರಿಷ್ಕರಣೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2014, 20:12 IST
Last Updated 30 ಜುಲೈ 2014, 20:12 IST

ಬೆಂಗಳೂರು: ಪೇಯಿಂಗ್‌ ಗೆಸ್ಟ್‌ (ಪಿ.ಜಿ) ಹಾಸ್ಟೆಲ್‌ಗಳನ್ನು ವಸತಿ­ಯೇತರ ಕಟ್ಟಡಗಳ ವ್ಯಾಪ್ತಿಗೆ ತಂದು, ಅವುಗಳ ತೆರಿಗೆ ದರ ಪರಿಷ್ಕರಣೆ ಮಾಡಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೌನ್ಸಿಲ್‌ ಸಭೆಯಲ್ಲಿ ಬುಧವಾರ ನಿರ್ಣಯ ಕೈಗೊಳ್ಳಲಾಯಿತು.

ತೆರಿಗೆದಾತರಿಗೆ ಇದರಿಂದ ದೊಡ್ಡ ಹೊರೆ ಬೀಳಲಿದೆ ಎಂಬ ಪ್ರತಿರೋಧ ಕೆಲವು ಸದಸ್ಯರಿಂದ ಬಂತು. ಆದರೆ, ತೆರಿಗೆ ಪರಿಷ್ಕರಣೆಗೆ ಬಹುಪಾಲು ಸದಸ್ಯರಿಂದ ಬೆಂಬಲ ವ್ಯಕ್ತವಾಯಿತು. 12 ಹಾಸಿಗೆಗಳಿಗೂ ಅಧಿಕ ಸಾಮರ್ಥ್ಯದ ಪಿ.ಜಿ ಹಾಸ್ಟೆಲ್‌ಗಳಿಗೆ ಆಯಾ ವಲಯಕ್ಕೆ ತಕ್ಕಂತೆ ಚದರ ಅಡಿಗೆ ಗರಿಷ್ಠ ರೂ 20ರಿಂದ ಕನಿಷ್ಠ ರೂ 3ರವರೆಗೆ ತೆರಿಗೆ ವಿಧಿಸಲು ಸಭೆ ಅನುಮೋದನೆ ನೀಡಿತು. ಪಿ.ಜಿ ಹಾಸ್ಟೆಲ್‌ಗಳಿಗೆ ನಿಗದಿ ಮಾಡಲಾದ ತೆರಿಗೆ ದರಕ್ಕೆ ಕಾಚರಕ­ನಹಳ್ಳಿ ವಾರ್ಡ್‌ ಸದಸ್ಯ ಪದ್ಮನಾಭ ರೆಡ್ಡಿ ತೀವ್ರ ವಿರೋಧ ವ್ಯಕ್ತಪಡಿಸಿ­ದರು.

‘ರಾಜ್ಯ ಸರ್ಕಾರ ಕಳೆದ ವರ್ಷ ಹೊರಡಿಸಿದ ಗೆಜೆಟ್‌ ಅಧಿಸೂಚನೆ ಪ್ರಕಾರ ‘ಎ’ ವಲಯದಲ್ಲಿ ಪ್ರತಿ ಚದರ ಅಡಿಗೆ ಗರಿಷ್ಠ ರೂ 8ರಷ್ಟು ತೆರಿಗೆ ವಿಧಿಸಲು ಅವಕಾಶ ಇತ್ತು. ನಮ್ಮ ಅಧಿಕಾರಿಗಳು ಇದುವರೆಗೆ ಪಿ.ಜಿ ಹಾಸ್ಟೆಲ್‌ಗಳಿಂದ ಎಷ್ಟು ತೆರಿಗೆ ಸಂಗ್ರಹಿಸಿದ್ದಾರೆ’ ಎಂದು ಪ್ರಶ್ನಿಸಿದರು. ‘ಸಾರ್ವಜನಿಕರು ಪಾವತಿ ಮಾಡಲು ಸಾಧ್ಯವಿರುವಷ್ಟು ಪ್ರಮಾ­ಣದ ತೆರಿಗೆಯನ್ನಷ್ಟೇ ವಿಧಿಸಬೇಕು’ ಎಂದು ಸಲಹೆ ನೀಡಿದರು.

ಹಾಸ್ಟೆಲ್‌ ತೆರಿಗೆ ದರ ಪರಿಷ್ಕರಣೆ
‘ಉದ್ದೇ­ಶಿತ ದರದಿಂದ ಪಿ.ಜಿ ಹಾಸ್ಟೆಲ್‌ ನಡೆ­ಸು­ವುದೇ ಕಷ್ಟವಾಗಲಿದೆ. ಅಷ್ಟು ದೊಡ್ಡ ಮೊತ್ತದ ತೆರಿಗೆ ಭರಿಸಿ ಹಾಸ್ಟೆಲ್‌ಗಳಲ್ಲಿ ವಾಸವಾದ­ವರಿಗೆ ಸೌಲಭ್ಯ ಕಲ್ಪಿಸುವುದು ಹೇಗೆ ಸಾಧ್ಯ’ ಎಂದು ಅವರು ಕೇಳಿದರು.

ಸಮಗ್ರವಾಗಿ ಚರ್ಚಿಸಿ ನಿರ್ಣಯ ಕೈಗೊಳ್ಳಬೇಕಿದ್ದು, ಅಲ್ಲಿಯವರೆಗೆ ಈ ವಿಷಯವನ್ನು ಮುಂದೂಡಬೇಕು’ ಎಂದು ಆಗ್ರಹಿಸಿದರು.
ವಿರೋಧ ಪಕ್ಷದ ನಾಯಕ ಬಿ.ಎನ್‌. ಮಂಜು­ನಾಥ್‌ ರೆಡ್ಡಿ ಸಹ ಅದಕ್ಕೆ ಬೆಂಬಲ ವ್ಯಕ್ತಪಡಿಸಿದರು. ಯಡಿಯೂರು ವಾರ್ಡ್‌ ಸದಸ್ಯ ಎನ್‌.ಆರ್‌. ರಮೇಶ್‌, ‘ಪಿ.ಜಿ ಹಾಸ್ಟೆಲ್‌­ಗಳಿಗೆ ಪ್ರತಿ­ವರ್ಷ ಸಾವಿ­ರಾರು ಕೋಟಿ ಆದಾ­ಯ­ವಿದ್ದು, ಹೊಸ ತೆರಿಗೆ ದರ ಯೋಗ್ಯ­ವಾಗಿದೆ’ ಎಂದು ವಾದಿಸಿದರು.

‘ನಗರದ ವ್ಯಾಪ್ತಿಯಲ್ಲಿರುವ ಪಿ.ಜಿ ಹಾಸ್ಟೆಲ್‌ಗಳ ಸಂಖ್ಯೆ ಬಗೆಗೆ ಮಾಹಿತಿ ಕೇಳಿದಾಗ ಬಿಬಿಎಂಪಿ ಅಧಿ­ಕಾರಿ­ಗಳು ಕೇವಲ 270 ಎಂಬ ಮಾಹಿತಿ ನೀಡಿದ್ದರು. ಆಯು­ಕ್ತರ ಸೂಚನೆಯಂತೆ ಅದೇ ಅಧಿಕಾರಿಗಳು ಸಮೀಕ್ಷೆ ನಡೆಸಿದಾಗ ಬೆಂಗಳೂರು ದಕ್ಷಿಣ ವಲಯ ಒಂದ­ರಲ್ಲೇ 898 ಪಿ.ಜಿ ಹಾಸ್ಟೆಲ್‌ಗಳು (13,040 ಜನರ ವಾಸ) ಪತ್ತೆಯಾಗಿವೆ. ಉಳಿದ ಏಳೂ ವಲಯಗಳಲ್ಲಿ ಸಮೀಕ್ಷೆ ನಡೆಯಬೇಕಿದೆ’ ಎಂದು ಹೇಳಿದರು.

‘ಮಹದೇವಪುರ ಹಾಗೂ ಬೊಮ್ಮನಹಳ್ಳಿ ವಲಯಗಳಲ್ಲಿ ಅತ್ಯಧಿಕ ಪಿ.ಜಿ ಹಾಸ್ಟೆಲ್‌ಗಳಿದ್ದು, ನಗರದಲ್ಲಿ ಒಟ್ಟಾರೆ 8 ಸಾವಿರಕ್ಕೂ ಅಧಿಕ ಅಂತಹ ಹಾಸ್ಟೆಲ್‌ಗಳಿವೆ. ಎಲ್ಲವನ್ನೂ ತೆರಿಗೆ ವ್ಯಾಪ್ತಿಗೆ ತಂದರೆ ಬಿಬಿಎಂಪಿಗೆ ಕೋಟ್ಯಂತರ ರೂಪಾಯಿ ತೆರಿಗೆ ಹರಿದು ಬರಲಿದೆ’ ಎಂದು ಅವರು ವಿವರಿಸಿದರು.

ಉತ್ತರ ನೀಡಿದ ಆಯುಕ್ತ ಎಂ. ಲಕ್ಷ್ಮೀನಾರಾಯಣ, ‘ಪಿ.ಜಿ ಹಾಸ್ಟೆಲ್‌ಗಳ ಕುರಿತು ಬಿಬಿಎಂಪಿಯಲ್ಲಿ ಪರಿ­ಪೂರ್ಣ ಮಾಹಿತಿಯೇ ಇಲ್ಲವಾಗಿದೆ. ಇತ್ತೀಚಿನ ಅಹಿತ­ಕರ ಘಟನೆಗಳ ಹಿನ್ನೆಲೆಯಲ್ಲಿ ಪೊಲೀಸರು ಮಾಹಿತಿ ಅಪೇ­ಕ್ಷಿಸಿದರೂ, ಪೂರೈಸುವ ಸ್ಥಿತಿಯಲ್ಲಿ ನಾವಿಲ್ಲ. ಅಲ್ಲಿ ಏನಾದರೂ ಬೇಡದ ಸಂಗತಿಗಳು ನಡೆ­ದರೆ ನಗ­ರಕ್ಕೆ ಕೆಟ್ಟ ಹೆಸರು ಬರುತ್ತದೆ. ಅವುಗಳ ಮೇಲೆ ನಿಯಂತ್ರಣ ವಿಧಿಸುವ ಜತೆಗೆ ಮಾಹಿತಿ ಸಂಗ್ರಹಿ­ಸಿ­ಡಲು ಪ್ರತ್ಯೇಕ ವ್ಯವಸ್ಥೆ ಮಾಡುವುದು ಅಗತ್ಯವಾಗಿದೆ’ ಎಂದರು.

‘ಪಿ.ಜಿ ಹಾಸ್ಟೆಲ್‌ಗಳು ವಾಣಿಜ್ಯೀಕರಣವಾಗಿದ್ದು, ದೊಡ್ಡ ಪ್ರಮಾಣದ ವರಮಾನ ಪಡೆಯುತ್ತಿವೆ. ಅವು­ಗ­ಳನ್ನು ವಸತಿಯೇತರ ವ್ಯಾಪ್ತಿಗೆ ತರುವುದರಿಂದ ಬಿಬಿಎಂಪಿ ಆರ್ಥಿಕ ಸಂಪನ್ಮೂಲವೂ ಹೆಚ್ಚುತ್ತದೆ. ಹೀಗಾಗಿ ಈ ನಿರ್ಣಯಕ್ಕೆ ಅನುಮೋದನೆ ಕೊಟ್ಟರೆ ಒಳ್ಳೆಯದು’ ಎಂದು ಅಭಿಪ್ರಾಯಪಟ್ಟರು.

‘ಉದ್ದೇಶಿತ ತೆರಿಗೆ ದರಗಳಿಗೆ ಸಂಬಂಧಿಸಿದಂತೆ ಹೊರಡಿಸಲಾಗಿದ್ದ ಕರಡು ಅಧಿಸೂಚನೆಗೆ ಸಾರ್ವಜನಿ­ಕರಿಂದ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾ­ಗಿತ್ತು. ಆದರೆ, ಯಾವ ಆಕ್ಷೇಪಣೆಗಳೂ ಸಲ್ಲಿಕೆಯಾ­ಗಿಲ್ಲ’ ಎಂದು ಉಪ ಆಯುಕ್ತ (ಕಂದಾಯ) ಐ. ರಮಾಕಾಂತ್‌ ಹೇಳಿದರು. ಬಳಿಕ ಸಭೆ ನಿರ್ಣಯವನ್ನು ಅನುಮೋದಿಸಿತು.

ಐಟಿ ಕಂಪೆನಿಗಳ ತೆರಿಗೆ: ‘ನಗರದಲ್ಲಿ 3,758 ಐ.ಟಿ ಕಂಪೆನಿಗಳಿದ್ದರೂ ಬಿಬಿಎಂಪಿ ಅಧಿಕಾರಿಗಳು ಸುಮಾರು 350 ಇರಬಹುದು ಎಂಬ ತಪ್ಪು ಮಾಹಿತಿ ನೀಡಿದ್ದಾರೆ’ ಎಂದು ಎನ್‌.ಆರ್‌. ರಮೇಶ್‌ ದೂರಿದರು. ‘1,200 ಕಾಲ್‌ ಸೆಂಟರ್‌/ ಬಿಪಿಒ ಹಾಗೂ 92 ಬಿ.ಟಿ ಕಂಪೆನಿಗಳು ಸಹ ನಗರದಲ್ಲಿದ್ದು, ಎಲ್ಲ ಮೂಲಗಳಿಂದ ರೂ 600 ಕೋಟಿಯಷ್ಟು ತೆರಿಗೆ ಸಂಗ್ರಹ ಮಾಡಬಹು­ದಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು. ಎಲ್ಲ ಕಂಪೆನಿಗಳಿಗೆ ಸಂಬಂಧಿಸಿದ ಮಾಹಿತಿಯನ್ನೂ ಅವರು ಆಯುಕ್ತರಿಗೆ ನೀಡಿದರು.

‘ನಗರದಲ್ಲಿ 15 ಲಕ್ಷ ಮನೆ, 6.50 ಲಕ್ಷ ವಾಣಿಜ್ಯ ಕಟ್ಟಡಗಳಿವೆ. ಅದರಲ್ಲಿ 22 ಸಾವಿರ ಅಪಾರ್ಟ್‌­ಮೆಂಟ್‌ಗಳು, 1.10 ಲಕ್ಷ ಕೈಗಾರಿಕಾ ಕಟ್ಟಡಗಳು, 2,446 ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳು, 891 ಕಲ್ಯಾಣ ಮಂಟಪಗಳು, 1,200 ಪಾರ್ಟಿ ಹಾಲ್‌ಗಳು, 441 ಸ್ಟಾರ್‌ ಹೋಟೆಲ್‌ಗಳು, 2,500 ಲಾಡ್ಜ್‌ಗಳಿವೆ. ಎಲ್ಲವುಗಳಿಂದ ರೂ 4,500 ಕೋಟಿ ತೆರಿಗೆ ಸಂಗ್ರಹ ಸಾಧ್ಯವಿದೆ’ ಎಂದು ವಿವರಿಸಿದರು.

‘ಕಾರ್ಪೋರೇಟ್‌ ಸಂಸ್ಥೆಗಳು ತಮ್ಮ ಆದಾಯದ ಶೇ 2ರಷ್ಟು ಮೊತ್ತವನ್ನು ಕಂಪೆನಿಗಳ ಸಾಮಾಜಿಕ ಹೊಣೆ (ಸಿಎಸ್‌ಆರ್‌) ನಿಭಾಯಿಸಲು ವಿನಿಯೋಗಿಸಬೇಕಿದ್ದು, ಅದನ್ನೂ ಬಿಬಿಎಂಪಿ ಕಾರ್ಯಕ್ರಮಗಳ ಮೂಲಕವೇ ಖರ್ಚು ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು. ‘ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊ­ಳ್ಳಲಾಗುವುದು’ ಎಂದು ಆಯುಕ್ತರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.