ADVERTISEMENT

ಪುಟ್ಟಣ್ಣಯ್ಯ ಶೈಲಿಗೆ ನಕ್ಕು ನಲಿದ ಸದನ

​ಪ್ರಜಾವಾಣಿ ವಾರ್ತೆ
Published 17 ಜುಲೈ 2014, 19:54 IST
Last Updated 17 ಜುಲೈ 2014, 19:54 IST

ಬೆಂಗಳೂರು: ‘ನಮ್ಮ ಶಾಲೆಗಳಲ್ಲಿ ದೈಹಿಕ ಶಿಕ್ಷಕರು ಇರುವು­ದಿಲ್ಲ. ಹಾಗೊಮ್ಮೆ ಇದ್ದರೂ ಅವರು ಮಕ್ಕಳಿಗೆ ಬುರ್‌ (ಕೈ ಪಕ್ಕಕ್ಕೆ ಎತ್ತುತ್ತಾ), ಬುರ್‌ (ಕೈ ಮೇಲಕ್ಕೆ), ಬುರ್‌ (ಕೈ ಮುಂದಕ್ಕೆ) ಮಾಡಿಸಿ ಹೋಗುತ್ತಿರುತ್ತಾರೆ...

‘ಹಿಂದೆ ನಾವು ಕಬಡ್ಡಿ, ಕಬಡ್ಡಿ ಎನ್ನು­ತ್ತಿದ್ದೆವು. ಈಗ ಇಂಗ್ಲಿಷ್‌ ಶೈಲಿ ಹೆಚ್ಚಾಗಿ ಕ..ಬ..ಡಿ.., ಕ...ಬ..ಡಿ.. ಎನ್ನುತ್ತಿದ್ದಾರೆ...

ಹೀಗೆ ವಿಶೇಷ ಉದ್ಗಾರಗಳೊಂದಿಗೆ ತಮ್ಮದೇ ಆದ ವಿಶಿಷ್ಟ ಹಾವಭಾವ ದೊಂದಿಗೆ ಸರ್ವೋದಯ ಕರ್ನಾಟಕ ಪಕ್ಷದ ಶಾಸಕ ಕೆ.ಎಸ್‌. ಪುಟ್ಟಣ್ಣಯ್ಯ ಮಾತ­ನಾಡುತ್ತಿದ್ದರೆ ಸದನದಲ್ಲಿ ನಗೆಯೋ ನಗೆ.

ವಿಧಾನಸಭೆಯಲ್ಲಿ ಶಿಕ್ಷಣ ಇಲಾಖೆ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಭಾಗ­ವಹಿಸಿ ಮಾತನಾಡಿದ ಅವರು, ಸರ್ಕಾರ ಹಮ್ಮಿಕೊಳ್ಳಬೇಕಾದ ಶಿಕ್ಷಣ ಮತ್ತು ಕ್ರೀಡಾ ಕಾರ್ಯಕ್ರಮಗಳ ಬಗ್ಗೆ ಹತ್ತಾರು ಸಲಹೆಗಳನ್ನು ನೀಡಿದರು. ಮಧ್ಯೆ ಪ್ರವೇಶಿ­ಸಿದ ಕಾಂಗ್ರೆಸ್‌ ಶಾಸಕ ಪಿ.ಎಂ.ನರೇಂದ್ರ­ಸ್ವಾಮಿ, ‘ನೀವೇನೋ ಚೆನ್ನಾಗಿ ಮಾತನಾಡುತ್ತಿದ್ದೀರಿ. ಆದರೆ ಅದನ್ನು ಅವರು (ಕಲಾಪ ದಾಖಲಿಸುವ ಸಿಬ್ಬಂದಿ)

20 ಇಂಗ್ಲಿಷ್ ಮೀಡಿಯಂ ನಾಯಿಗಳು
‘ದಿವಂಗತ ಎಚ್‌.ನರಸಿಂಹಯ್ಯ ಅವರು ಬದುಕಿದ್ದಾಗ ನಿತ್ಯ ಲಾಲ್‌ ಬಾಗ್‌ಗೆ ಹೋಗುತ್ತಿದ್ದರು. ಆಗ ಅಲ್ಲಿ 35 ನಾಯಿಗಳಿದ್ದವಂತೆ. ಅವುಗಳಲ್ಲಿ 20 ಇಂಗ್ಲಿಷ್‌, 10 ತೆಲುಗು ಮತ್ತು 5 ಕನ್ನಡ ಮಾಧ್ಯಮದ ನಾಯಿಗಳು ಇದ್ದವಂತೆ’ ಎಂದು ಬಿಜೆಪಿ ಶಾಸಕ ಎಸ್‌.ಸುರೇಶ್‌ ಕುಮಾರ್‌ ಹೇಳಿದಾಗ ಸದನದಲ್ಲಿ ನಗೆಯ ಅಲೆ ಎದ್ದಿತು.

ಬರೆದು­ಕೊಳ್ಳುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು.

‘ನಾನು ಹೀಗೆ ಹಾಸ್ಯ ಧಾಟಿಯಲ್ಲಿ ಮಾತನಾಡಿದ್ದನ್ನು ಕೇಳಿಯಾದರೂ ಸಚಿವ­ರಿಗೆ ಸ್ಫೂರ್ತಿ ಬರಲಿ.  ಹೊಸ ಆಲೋಚನೆ ಮಾಡಲಿ’ ಎಂದು ಪುಟ್ಟಣ್ಣಯ್ಯ ಹೇಳಿದರು.

ಪುಟ್ಟಣ್ಣಯ್ಯ ಸಿಡಿಸಿದ ಕಿಡಿನುಡಿ ಮತ್ತು ಸಲಹೆಗಳು ಇಲ್ಲಿವೆ;
*ಇಲ್ಲಿ (ನಗರ) ಕಿಂಡರ್‌ಗಾರ್ಡನ್‌ಗೆ ಮಕ್ಕಳ ಜತೆ ನಾಯಿಮರಿಯೂ ಹೋಗುತ್ತೆ; ಹಳ್ಳಿ ಅಂಗನವಾಡಿಗೆ ಹೆಲ್ಮೆಟ್‌ ಹಾಕಿಕೊಂಡು ಹೋಗ ಬೇಕಾದ ಸ್ಥಿತಿ ಇದೆ.
*ಸರ್ಕಾರಿ ಶಾಲೆಗಳಲ್ಲಿ ಕಲಿತವರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇಕಡಾ 15ರಷ್ಟು ಮೀಸಲು ನೀಡಿ; ಆ ಮೂಲಕ ಮಕ್ಕಳು ಶಾಲೆಗೆ ಬರುವಂತೆ ಮಾಡಿ.
*ಸರ್ಕಾರಿ ಶಾಲೆಗಳಲ್ಲಿ ಓದಿ ಉನ್ನತ ಸ್ಥಾನದಲ್ಲಿರುವವರ ಹೆಸರುಗಳನ್ನು ಆಯಾ ಶಾಲಾಭಿವೃದ್ಧಿ ಸಮಿತಿಯ ಆಹ್ವಾನಿತರ ಪಟ್ಟಿಯಲ್ಲಿ ಸೇರಿಸಿ.
*ಲಂಚ ತಿಂದು ಲೋಕಾಯುಕ್ತಕ್ಕೆ ಸಿಕ್ಕೋರು ರೈತರಲ್ಲ; ರೈತ ಮಹಿಳೆಯೂ ಅಲ್ಲ. ಎಲ್ಲ ಓದಿದೋರೆ ಅಂತಹ ಕೆಲಸ ಮಾಡೋದು.
*ಈಗ ಯಾರನ್ನೂ ಕೇಳಿದರೂ ಬಿ.ಇ, ಬಿ.ಇ ಅಂತಾರೆ. ಇಷ್ಟೊಂದು ಎಂಜಿನಿ­ಯ­ರುಗಳನ್ನು ಗುಡ್ಡೆ ಹಾಕಿಕೊಂಡು ಏನ್ಮಾಡ್ತೀರಿ?
*ಗರಡಿ ಮನೆಗಳ ಅಭಿವೃದ್ಧಿಗೆ ನೀವು ಕೊಟ್ಟಿರುವ ಅನುದಾನ ಪೈಲ್ವಾನರ ಲಂಗೋಟಿ ಖರೀದಿಗೂ ಸಾಕಾಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT