ADVERTISEMENT

ಪುರಾತನ ವಿಗ್ರಹ ಮಾರಾಟ ನಾಲ್ವರು ಆರೋಪಿಗಳ ಸೆರೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 19:48 IST
Last Updated 26 ಸೆಪ್ಟೆಂಬರ್ 2016, 19:48 IST

ಬೆಂಗಳೂರು: ಪುರಾತನ ವಿಗ್ರಹ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಡಿ ನಾಲ್ವರನ್ನು ಕುಮಾರಸ್ವಾಮಿ ಲೇಔಟ್‌ ಠಾಣೆಯ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

‘ಬಿಟಿಎಂ ಲೇಔಟ್‌ನ ಖಾಲೀದ್‌ ಸೈಫುಲ್ಲಾಖಾನ್‌ (63), ತುಮಕೂರಿನ ಇರ್ಫಾನ್‌ಬೇಗ್‌, ಮೈಸೂರಿನ ಸುಲೇಮಾನ್‌, ಬದ್ರುದ್ದೀನ್‌ ಬಂಧಿತರು. ಅವರಿಂದ ಪಂಚಲೋಹದ ವಿಗ್ರಹ, ಚೆಂಬು ಹಾಗೂ ಎರಡು ಕಾರು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಸುಲೇಮಾನ್‌ ಎಂಬಾತ ತನ್ನ ಜಮೀನಿನಲ್ಲಿ ಪುರಾತನ ಪಂಚಲೋಹ ವಿಗ್ರಹ ಸಿಕ್ಕಿದ್ದು,  ಅದನ್ನು ಮಾರಾಟ ಮಾಡಿಕೊಡುವಂತೆ ಇನ್ನುಳಿದ ಆರೋಪಿಗಳಿಗೆ ಹೇಳಿದ್ದ. ಅದರಂತೆ ಎಲ್ಲರೂ ಕಾರು ಮಾಡಿಕೊಂಡು ವಿಗ್ರಹ ಮಾರಾಟ ಮಾಡಲು ನಗರಕ್ಕೆ ಬಂದಿದ್ದರು’.

‘ಹೊಯ್ಸಳ ಪಾರ್ಕ್‌ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಆರೋಪಿಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದರು. ಅದರನ್ವಯ ಸ್ಥಳಕ್ಕೆ ಹೋಗಿ ವಿಚಾರಣೆ ನಡೆಸಿದಾಗ ವಿಗ್ರಹ ಮಾರಾಟ ಮಾಡಲು ಆರೋಪಿಗಳು ಬಂದಿದ್ದು ಗೊತ್ತಾಯಿತು’ ಎಂದು ತಿಳಿಸಿದರು. 

‘ಪಂಚಲೋಹ ವಿಗ್ರಹಕ್ಕೆ ವಿದೇಶದಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಇದೆ. ಗಿರಾಕಿ ಹುಡುಕಿಕೊಟ್ಟರೆ ಕಮಿಷನ್‌ ನೀಡುವುದಾಗಿ ಸುಲೇಮಾನ್‌ ಹೇಳಿದ್ದ. ಜತೆಗೆ ಅದನ್ನು ನಂಬಿದ್ದ ಆರೋಪಿಗಳು, ಬೆಂಗಳೂರಿನಲ್ಲಿ ಗಿರಾಕಿಯೊಬ್ಬರನ್ನು ಹುಡುಕಿದ್ದರು. ಅವರ ಭೇಟಿಗೆ ಬಂದಿದ್ದ ವೇಳೆಯಲ್ಲೇ ಅವರನ್ನು ಬಂಧಿಸಲಾಯಿತು. ಆ ಗಿರಾಕಿ ಯಾರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.