ADVERTISEMENT

ಪುರುಷ ಸಮಾಜಕ್ಕೆ ಕಾಲಿಡುವ ಮುನ್ನ ಬದಲಾಗಿ

7ನೇ ಗ್ರೇಸ್ ಹೋಪರ್ ಇಂಡಿಯಾ ಕಾನ್ಫರೆನ್ಸ್ ನಲ್ಲಿ ಮಹಿಳೆಯರಿಗೆ ವನಿತಾ ಕಿವಿ ಮಾತು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2016, 20:08 IST
Last Updated 7 ಡಿಸೆಂಬರ್ 2016, 20:08 IST
ವನಿತಾ ನಾರಾಯಣ್
ವನಿತಾ ನಾರಾಯಣ್   

ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಯುವತಿಯರು, ಮಹಿಳೆಯರಿಂದಲೇ ಸಭಾಂಗಣ ತುಂಬಿತ್ತು. ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರಿಗೆ ಆಗುತ್ತಿರುವ ತಾರತಮ್ಯ, ಪುರುಷರ ದಬ್ಬಾಳಿಕೆ, ಎದುರಿಸುತ್ತಿರುವ ಕಷ್ಟಗಳ ಕುರಿತ ಪ್ರಶ್ನೆಗಳೇ ಅಲ್ಲಿ ಮಾರ್ದನಿಸುತ್ತಿದ್ದವು.

ಇದು ಕಂಡುಬಂದದ್ದು ‘ದಿ ಅನಿತಾ ಬೊರ್ಗ್ ಇನ್‍ಸ್ಟಿಟ್ಯೂಟ್’ ನಗರದಲ್ಲಿ ಬುಧವಾರ ಆಯೋಜಿಸಿದ್ದ ಮೂರು ದಿನಗಳ ‘7ನೇ ಗ್ರೇಸ್ ಹೋಪರ್ ಇಂಡಿಯಾ ಕಾನ್ಫರೆನ್ಸ್’ನಲ್ಲಿ.ವಿಚಾರ ಸಂಕಿರಣದಲ್ಲಿ  ಮಾತನಾಡಿದ ಐಬಿಎಂನ ವ್ಯವಸ್ಥಾಪಕ ನಿರ್ದೇಶಕಿ ವನಿತಾ ನಾರಾಯಣ್ ಅವರು, ‘ಪುರುಷ ಸಮಾಜಕ್ಕೆ ಕಾಲಿಡುವ ಮುನ್ನ ಮಹಿಳೆಯರು ತಮ್ಮೊಳಗೆ ಬದಲಾವಣೆ ತಂದುಕೊಳ್ಳಬೇಕು.  ಮಾನಸಿಕ ದೃಢತೆ ಕಾಯ್ದುಕೊಳ್ಳಬೇಕು. ತಮ್ಮಲ್ಲಿರುವ ಕೌಶಲ ಮತ್ತು ಶ್ರೇಷ್ಠತೆಯನ್ನು ಮನಗಾಣಬೇಕು’ ಎಂದು ಅಭಿಪ್ರಾಯಪಟ್ಟರು.

ಕೆಲಸದಲ್ಲಿ ಏಕತಾನತೆ ಕಾಡುವುದಕ್ಕೆ ಪರಿಹಾರ ಮತ್ತು ಉದ್ಯೋಗದಲ್ಲಿ  ಪ್ರಾಮುಖ್ಯತೆ ದಕ್ಕೆ ಆಗುವ ಘಟನೆಗಳಿಗೆ ಹೇಗೆ  ಪ್ರತಿಕ್ರಿಯಿಸಬೇಕು ಎಂದು ಐಟಿ ಉದ್ಯೋಗಿ ಕಾವ್ಯ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ವನಿತಾ ಅವರು, ‘ಒಂದೇ ಕೆಲಸದಲ್ಲಿ ಇದ್ದಾಗ ಏಕತಾನತೆ ಕಾಡುವುದು ಸಹಜ ಆದರೆ ನಮ್ಮ ಕೆಲಸವನ್ನು ಹೆಚ್ಚು ಆಸಕ್ತಿದಾಯಕವಾಗಿ ಮಾಡಿಕೊಂಡಾಗ ಅದು ಸರಿಹೋಗುತ್ತದೆ. ಇನ್ನು ಪ್ರಾಮುಖ್ಯತೆ ವಿಷಯದಲ್ಲಿ ಕೆಲಸದ ಮೂಲಕವೇ ಅಂತಹವರಿಗೆ ಉತ್ತರ ನೀಡಬೇಕು’ ಎಂದು ಹೇಳಿದರು.

‘ಸವಾಲುಗಳಿಂದ ಮಹಿಳೆಯರು ದೂರ ಇರುತ್ತಾರೆ. ಸುಲಭದ ಕೆಲಸವನ್ನು ಮಾತ್ರ   ಮಾಡಲು ಸಾಧ್ಯ ಎಂಬ ತಪ್ಪು ಕಲ್ಪನೆ ಇದೆ. ಆದರೆ, ಮಹಿಳೆಯರೇ ಹೆಚ್ಚು ಜವಾಬ್ದಾರಿ ನಿಬಾಯಿಸುವುದು. ಮನೆ, ಉದ್ಯೋಗ ಹೀಗೆ ಎಲ್ಲಾ ಸ್ಥರಗಳಲ್ಲೂ ಸವಾಲುಗಳನ್ನು ಸ್ವೀಕರಿಸುತ್ತಿರುತ್ತಾಳೆ’ ಎಂದರು. ಐಬಿಎಂ 2013ರಲ್ಲಿ ಮೊದಲ ಬಾರಿ ಮಹಿಳಾ ವ್ಯವಸ್ಥಾಪಕ ನಿರ್ದೇಶಕಿಯನ್ನು ಆಯ್ಕೆ ಮಾಡಿದ್ದು ಸೇರಿದಂತೆ ಐಬಿಎಂನಲ್ಲಿ ಮಹಿಳಾ ಪಾಲ್ಗೊಳ್ಳುವಿಕೆ ಬಗ್ಗೆ ವಿವರಿಸಿದರು.

ಮಹಿಳಾ ಉದ್ಯಮಿ ಶಾಲಿನಿ ಅವರು ಮಾತನಾಡಿ, ‘ನಮ್ಮ ಜೀವನಲ್ಲಿ ಮಾದರಿ ವ್ಯಕ್ತಿ ಮತ್ತು ಗುರು ಇರಬೇಕು. ನಿಮ್ಮ ಕ್ಷೇತ್ರವಲ್ಲದವರನ್ನೂ ಸಿನಿಮಾ ನಟ–ನಟಿಯರು, ಉದ್ಯಮಿಗಳು, ಕ್ರಿಕೆಟಿಗರು ಹೀಗೆ ಯಾರನ್ನಾದರೂ ನೀವು ಮಾದರಿ ವ್ಯಕ್ತಿಗಳನ್ನಾಗಿ ಇಟ್ಟುಕೊಳ್ಳಬಹುದು. ಆಗ ನಮ್ಮ ದಾರಿ ವಿಭಿನ್ನವಾಗಿರುತ್ತದೆ ಎಲ್ಲರ ಮಧ್ಯೆ ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಕಾರಣ ಆಗುತ್ತದೆ’ ಎಂದು ತಿಳಿಸಿದರು.

ಈ ಸಮಾವೇಶದ ಭಾಗವಾಗಿ  ಮಹಿಳಾ ಉದ್ಯಮಿಗಳಿಗೆ ಉತ್ತೇಜನ ನೀಡಲು ‘ಮಹಿಳಾ ಉದ್ಯಮಿ ಸ್ಪರ್ಧೆ’ ನಡೆಯುತ್ತದೆ. ಸಮಾವೇಶದ ಕೊನೆಯ ದಿನ ಡಿ.9ರಂದು ಸ್ಪರ್ಧೆಯ ವಿಜೇತರನ್ನು ಘೋಷಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.