ADVERTISEMENT

ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನ: ಉಗಾಂಡ ಪ್ರಜೆ ಸಾವು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2017, 20:11 IST
Last Updated 13 ಮಾರ್ಚ್ 2017, 20:11 IST
ಇಫಾಯಿ
ಇಫಾಯಿ   

ಬೆಂಗಳೂರು: ದೇವನಹಳ್ಳಿ ಬಳಿ ಭಾನುವಾರ ರಾತ್ರಿ ಬೈಕ್‌ ಉರುಳಿ ಬಿದ್ದಿದ್ದರಿಂದ ಸವಾರ ಇಫಾಯಿ ಮಡೂ (28) ಎಂಬುವರು ಮೃತಪಟ್ಟಿದ್ದಾರೆ.
ಉಗಾಂಡದ  ಇಫಾಯಿ, ಉದ್ಯೋಗ ವೀಸಾದಡಿ ನಗರಕ್ಕೆ ಬಂದಿದ್ದರು. ಇವರು ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಬಂದಿತ್ತು. ಅದರನ್ವಯ  ಅವರನ್ನು ಬಂಧಿಸಲು ಪೊಲೀಸರು ಹೋಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

‘ಕೊತ್ತನೂರಿನ ಅವಲಹಳ್ಳಿ ರಸ್ತೆಯ ಬಳಿ ಇಫಾಯಿ ಹಾಗೂ ಅವರ ಸ್ನೇಹಿತ ಗ್ರಾಹಕರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ಸಿಸಿಬಿ ಇನ್‌ಸ್ಪೆಕ್ಟರ್‌  ಕೆ.ಎನ್. ಯಶವಂತ ಕುಮಾರ್ ನೇತೃತ್ವದ ತಂಡವು ರಾತ್ರಿ 12 ಗಂಟೆಯ ಸುಮಾರಿಗೆ ಸ್ಥಳಕ್ಕೆ ಹೋಗಿತ್ತು.’‘ಈ ವೇಳೆ ಪೊಲೀಸರನ್ನು ನೋಡಿದ ಇಫಾಯಿ ಹಾಗೂ ಸ್ನೇಹಿತ ಬೈಕ್‌ ಹತ್ತಿ ಸ್ಥಳದಿಂದ ತಪ್ಪಿಸಿಕೊಂಡರು. ಪೊಲೀಸರು ಅವರನ್ನು ಬೆನ್ನಟ್ಟಿದ್ದರು’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದರು.

‘ಭೈರತಿ ಸಮೀಪದ ಹೋಟೆಲ್‌ವೊಂದರ ಬಳಿ ವೇಗವಾಗಿ ಹೋಗುತ್ತಿದ್ದ ಬೈಕ್‌ ರಸ್ತೆಯ ಗುಂಡಿಗೆ ಇಳಿದು ಉರುಳಿಬಿದ್ದಿತ್ತು. ಆಗ ಹಿಂಬದಿ
ಕುಳಿತಿದ್ದ ಇಫಾಯಿ ಅವರ ತಲೆ ಹಾಗೂ ಎದೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಬೈಕ್‌ ಸ್ಥಳದಲ್ಲೇ ಬಿಟ್ಟು ಸವಾರ ಪರಾರಿಯಾಗಿದ್ದಾನೆ.’

ADVERTISEMENT

‘ಸ್ಥಳಕ್ಕೆ ಬಂದಿದ್ದ ಸಿಸಿಬಿ ಪೊಲೀಸರು ಇಫಾಯಿ ಅವರನ್ನು ಬೌರಿಂಗ್‌ ಆಸ್ಪತ್ರೆಗೆ ಕರೆದೊಯ್ದಿದ್ದರು. ತಪಾಸಣೆ ನಡೆಸಿದ್ದ ವೈದ್ಯರು, ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ಹೇಳಿದರು’ ಎಂದು  ಅವರು ಮಾಹಿತಿ ನೀಡಿದರು.

‘ಘಟನೆ ಸಂಬಂಧ ಸಿಸಿಬಿ ಪೊಲೀಸರು ದೂರು ಕೊಟ್ಟಿದ್ದಾರೆ. ಜತೆಗೆ ದೇವನಹಳ್ಳಿ ಸಂಚಾರ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದೇವೆ. ತಲೆಮರೆಸಿಕೊಂಡಿರುವ ಇನ್ನೊಬ್ಬನಿಗಾಗಿ ಶೋಧ ನಡೆಸುತ್ತಿದ್ದು, ಆತ ಸಿಕ್ಕ ಬಳಿಕ  ನಿಖರ ಮಾಹಿತಿ ಗೊತ್ತಾಗಲಿದೆ’ ಎಂದು ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಹೇಮಂತ್‌ ನಿಂಬಾಳ್ಕರ್‌ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.