ADVERTISEMENT

ಪ್ರಕರಣ ಸಿಸಿಬಿಗೆ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2014, 19:47 IST
Last Updated 19 ಏಪ್ರಿಲ್ 2014, 19:47 IST

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇತ್ತೀಚೆಗೆ ಕೈದಿಗಳ ಬಳಿ ನಕಲಿ ನೋಟುಗಳು ಪತ್ತೆಯಾದ ಪ್ರಕರಣದ ತನಿಖೆಯನ್ನು ಕೇಂದ್ರ ಅಪರಾಧ ವಿಭಾಗಕ್ಕೆ (ಸಿಸಿಬಿ) ವರ್ಗಾಯಿಸಲಾಗಿದೆ.

ಟಿ–ಟ್ವೆಂಟಿ ವಿಶ್ವಕಪ್ ಪಂದ್ಯಗಳಿಗೆ ಜೈಲಿನಲ್ಲಿ ಬೆಟ್ಟಿಂಗ್ ನಡೆ­ಯುತ್ತಿದೆ ಎಂಬ ಮಾಹಿತಿ ಆಧರಿಸಿ ಕಾರಾಗೃಹದ ಅಧಿಕಾರಿಗಳು ಏ.6ರಂದು ದಿಢೀರ್ ದಾಳಿ ನಡೆಸಿದ್ದರು. ಈ ವೇಳೆ ಎಂಟನೇ ಬ್ಯಾರಕ್‌ನಲ್ಲಿದ್ದ ಕೈದಿಗಳ ಬಳಿ ₨ 500 ಮುಖ­ಬೆಲೆಯ ₨ 15,500 ಹಣ ಪತ್ತೆಯಾಗಿತ್ತು. ತಪಾಸಣೆ ನಂತರ ಅವೆಲ್ಲ ನಕಲಿ ನೋಟುಗಳು ಎಂದು ತಿಳಿದುಬಂದಿತ್ತು. ಈ ಸಂಬಂಧ ಜೈಲು ಅಧಿಕಾರಿಗಳು ಏ.9ರಂದು ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಗೆ ದೂರು ಕೊಟ್ಟಿದ್ದರು.

‘ನಕಲಿ ನೋಟುಗಳು ಹೇಗೆ ಕಾರಾಗೃಹದ ಒಳಗೆ ಹೋದವು,  ಆ ಹಣದ ಮೂಲ ಯಾವುದು ಎಂಬ ಬಗ್ಗೆ ತನಿಖೆ ನಡೆಸಲು ಪ್ರಕರಣವನ್ನು ಸಿಸಿಬಿ ವರ್ಗಾಯಿಸಲಾಗಿದೆ. ನಕಲಿ ನೋಟುಗಳನ್ನು ಇಟ್ಟುಕೊಂಡಿದ್ದ ಐವರು ಕೈದಿಗಳ ವಿಚಾರಣೆ ಇನ್ನೂ ಆರಂಭವಾಗಿಲ್ಲ. ಮೂರ್ನಾಲ್ಕು ದಿನಗಳಲ್ಲಿ ಸಿಸಿಬಿ ಪೊಲೀಸರು ಆ ಕೈದಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಟಿ–20 ಹಾಗೂ ಐಪಿಎಲ್ ಪಂದ್ಯಗಳಿಗೆ ಬೆಟ್ಟಿಂಗ್‌ ಕಟ್ಟಲು ಕೈದಿಗಳು ಹಣ ತರಿಸಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಇತ್ತೀಚೆಗೆ ಅವರ ಭೇಟಿಗೆ ಬಂದಿದ್ದವರು ಹಣ ಸಾಗಿಸಿರುವ ಸಾಧ್ಯತೆ ಇದೆ. ಇದರಲ್ಲಿ ಜೈಲು ಸಿಬ್ಬಂದಿಯ ಕೈವಾಡವನ್ನು ಅಲ್ಲಗಳೆಯುವಂತಿಲ್ಲ. ವಿಚಾರಣೆ ನಂತರ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾರಾಗೃಹ ಇಲಾಖೆಗಳ ಡಿಐಜಿ ಕೆ.ವಿ.ಗಗನ್‌ದೀಪ್, ‘ನಕಲಿ ನೋಟು ಇಟ್ಟುಕೊಂಡಿದ್ದ ವಿಜಯೇಂದರ್, ಮೋಹನ್‌ಕುಮಾರ್, ವೆಂಕಟೇಶ್, ಗೋಪಾಲಕೃಷ್ಣ ಹಾಗೂ ಲಕ್ಷ್ಮೀಕಾಂತ ಎಂಬ ಕೈದಿಗಳ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ತನಿಖೆ ಯಾವ ಹಂತದಲ್ಲಿದೆ ಎಂಬ ಬಗ್ಗೆ ಅವರಿಂದ ಇನ್ನೂ ಮಾಹಿತಿ ಬಂದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.