ADVERTISEMENT

ಪ್ರತಿಷ್ಠಿತರ ತಾಣ, ಪಾದಚಾರಿ ಗೌಣ!

ಭರತ್ ರಾವ್ ಎಂ.
Published 20 ಸೆಪ್ಟೆಂಬರ್ 2014, 20:16 IST
Last Updated 20 ಸೆಪ್ಟೆಂಬರ್ 2014, 20:16 IST

ಬೆಂಗಳೂರು: ಸಾರ್ವಜನಿಕರು ಓಡಾಡಲು ಸರಿಯಾದ ಮಾರ್ಗ ಇಲ್ಲದಿದ್ದರೆ ಸಂಚಾರ ಎಷ್ಟು ಜಟಿಲ ಎನ್ನುವುದಕ್ಕೆ ಎಚ್‌ಎಸ್‌ಆರ್‌ ಬಡಾವಣೆ ಅವ್ಯವಸ್ಥೆ ತಕ್ಕ ಸಾಕ್ಷ್ಯ ಒದಗಿಸುತ್ತಿದೆ.

ಸಾರ್ವಜನಿಕರಿಗಾಗಿ ಪಾಲಿಕೆಯು ಪಾದಚಾರಿ ಮಾರ್ಗ ನಿರ್ಮಿಸಿದರೆ   ಕೆಲವರು ಅಂಗಡಿ ಮತ್ತು  ಹೋಟೆಲ್‌ ವಹಿವಾಟಿಗೆ ಆ ಮಾರ್ಗವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವಾಹನಗಳ ಪಾರ್ಕಿಂಗ್‌ಗೂ ಸವಾರರಿಗೆ ಪಾದಚಾರಿ ಮಾರ್ಗವೇ ಬೇಕಾಗಿದೆ.
ನಗರದ ಪ್ರತಿಷ್ಠಿತ ಪ್ರದೇಶಗಳಲ್ಲಿ   ಎಚ್‌ಎಸ್ಆರ್‌ ಬಡಾವಣೆಯೂ ಒಂದು. ಈ ಬಡಾವಣೆಯಲ್ಲಿ ಕೆಲ ನಿವಾಸಿಗಳು ಮತ್ತು ಖಾಸಗಿ ಕಂಪೆನಿಗಳ ಮಾಲೀಕರು ಪಾದಚಾರಿ ಮಾರ್ಗವನ್ನೂ ಅತಿಕ್ರಮಿಸಿದ್ದಾರೆ.

ಎಚ್‌ಎಸ್‌ಆರ್ ಬಡಾವಣೆಯ 4ನೇ ಹಂತದ 14ನೇ ಮುಖ್ಯರಸ್ತೆಯಲ್ಲಿ ಓಡಾಡಿದಾಗ  ಪಾದಚಾರಿ ಮಾರ್ಗದ ಅವ್ಯವಸ್ಥೆ ಎದ್ದು ಕಂಡಿತು.
ಮುಖ್ಯರಸ್ತೆ ಪ್ರವೇಶಿಸಿದಾಗ ಮೊದಲು ಸಿಗುವುದು ಕಟ್ಟಡ ನಿರ್ಮಾಣದ ನೆಪದಲ್ಲಿ ಕಾಲುದಾರಿ ಅತಿಕ್ರಮಿಸಿದ ಮಣ್ಣಿನರಾಶಿ. ಇದರ ಮುಂದೆ ಪಾದಚಾರಿ ಮಾರ್ಗದಲ್ಲೇ ಬೈಕ್‌ಗಳನ್ನು ಸಾಲು ಸಾಲಾಗಿ ನಿಲ್ಲಿಸಲಾಗಿತ್ತು.

ಈ ಹಾದಿಯಲ್ಲಿ ಮುಂದೆ ಹೋದರೆ ಸಿಗುವುದು ತಳ್ಳುಗಾಡಿಗಳ ಸಾಲು.  ಪಾದಚಾರಿ ಮಾರ್ಗದಲ್ಲೇ ಬಿಎಸ್‌ಎನ್‌ಎಲ್ ದೂರವಾಣಿ

ಸಂಪರ್ಕ ಪೆಟ್ಟಿಗೆಯೂ ಇದ್ದು, ಅಕ್ಕಪಕ್ಕದ ಪ್ರದೇಶವು ಗಿಡಗಳಿಂದ ತುಂಬಿಕೊಂಡಿದೆ. ಇದರಿಂದ ಜನಸಾಮಾನ್ಯರ ಓಡಾಟಕ್ಕೆ ಅಡೆತಡೆ ಆಗುತ್ತಿತ್ತು.

‘ಕೆಲವರು ಪಾದಚಾರಿ ಮಾರ್ಗದಲ್ಲೇ ಗಂಟೆಗಟ್ಟಲೇ  ವಾಹನ ನಿಲ್ಲಿಸುತ್ತಾರೆ.  ಮರದಡಿಯಲ್ಲಿ ಕಾರುಗಳನ್ನು ನಿಲುಗಡೆ ಮಾಡುವುದರಿಂದ ತೊಂದರೆ ಹೆಚ್ಚಿದೆ’ ಎಂದು ಸ್ಥಳೀಯರು ದೂರಿದರು.

ಅದೇ ರಸ್ತೆಯ ಬಲಭಾಗದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ಆಗಿತ್ತು. ಕಾಲುದಾರಿ ಮೇಲೆಯೇ ನಾಯಿಕೊಡೆಗಳಂತೆ ಎದ್ದಿರುವ ತಳ್ಳುಗಾಡಿಗಳು ಇನ್ನಷ್ಟು ತೊಂದರೆ ಕೊಡುತ್ತಿದ್ದವು.

ಬಲಭಾಗದಲ್ಲಿ ಮತ್ತಷ್ಟು ಮುಂದೆ ಸಾಗಿದರೆ ಖಾಸಗಿ ಕಂಪೆನಿಗಳ ಸಿಬ್ಬಂದಿ ವಾಹನಗಳನ್ನು ಪಾದಚಾರಿ ಮಾರ್ಗದಲ್ಲೇ ನಿಲ್ಲಿಸಿರುವುದು ಕಂಡು ಬಂತು. ಹಾಗೆಯೇ ಪಾದಚಾರಿ ಮಾರ್ಗವನ್ನು ಗ್ಯಾರೇಜ್‌ಗಳು, ಅಂಗಡಿಗಳು ಆಕ್ರಮಿಸಿದ್ದವು.  ಇದೇ ದಾರಿಯಲ್ಲಿ  ತಲೆಗೆ ಬಡಿಯುವಂತೆ ಇರುವ ದೊಡ್ಡ ಟ್ರಾನ್ಸ್‌ಫಾರ್ಮರ್‌, ಅರ್ಧಕ್ಕೆ ಸ್ಥಗಿತಗೊಂಡ ಕಾಮಗಾರಿ, ಕಿತ್ತು ಮೇಲೆದ್ದ ಕಲ್ಲಿನ ಹಾದಿ ಎದುರಾಯಿತು. ಪಾದಚಾರಿ ಮಾರ್ಗದ ಪಕ್ಕದಲ್ಲೇ ತೆರೆದ ಒಳಚರಂಡಿ ಇತ್ತು. ಕೊಂಚ ಯಾಮಾರಿದರೆ ಚರಂಡಿಯೊಳಗೆ ಬೀಳುವುದು ಖಚಿತವಾಗಿತ್ತು. 

‘ಬಡಾವಣೆಯಲ್ಲಿ ಪಾದಚಾರಿ ಮಾರ್ಗದ ಒತ್ತುವರಿ ಪ್ರಕರಣಗಳು ಹೆಚ್ಚಿದ್ದು ಹಿರಿಯ ನಾಗರಿಕರು ಸಂಚಾರ ನಡೆಸುವುದೇ ಕಷ್ಟವಾಗಿದೆ. ಒತ್ತುವರಿ ಮಾಡಿಕೊಂಡಿರುವ ಅಂಗಡಿಗಳ ವಿರುದ್ಧ  ಪಾಲಿಕೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯರಾದ ನಾಗರಾಜ್ ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.