ADVERTISEMENT

ಪ್ರತ್ಯೇಕ ಅಪಘಾತ: ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2016, 19:45 IST
Last Updated 2 ಫೆಬ್ರುವರಿ 2016, 19:45 IST

ಬೆಂಗಳೂರು: ರಾಮಮೂರ್ತಿನಗರ ಹೊರ ವರ್ತುಲ ರಸ್ತೆ ಹಾಗೂ ಸಿಂಗಸಂದ್ರದಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಪ್ರತ್ಯೇಕ ಬೈಕ್ ಅಪಘಾತಗಳಲ್ಲಿ ಕೂಲಿ ಕಾರ್ಮಿಕ ಸೇರಿ ಇಬ್ಬರು ಮೃತಪಟ್ಟಿದ್ದಾರೆ.

ಸುಲ್ತಾನಪಾಳ್ಯ ನಿವಾಸಿಯಾದ ಮುರುಗನ್ (30) ಅವರು ಗಾರೆ ಮೇಸ್ತ್ರಿ ರಾಮರೆಡ್ಡಿ ಜತೆ ಕೆಲಸದ  ನಿಮಿತ್ತ ಕೋಲಾರಕ್ಕೆ ಹೋಗಿದ್ದರು. ಅಲ್ಲಿಂದ ರಾತ್ರಿ 12.30ರ ಸುಮಾರಿಗೆ ಬೈಕ್‌ನಲ್ಲಿ ಮನೆಗೆ ವಾಪಸಾಗುವಾಗ ಈ ದುರ್ಘಟನೆ ಸಂಭವಿಸಿದೆ.

ವೇಗವಾಗಿ ಬೈಕ್ ಓಡಿಸಿಕೊಂಡು ಬಂದಿರುವ ರಾಮರೆಡ್ಡಿ, ರಾಮಮೂರ್ತಿನಗರದ ಎಎಸ್‌ಆರ್‌ ಕಲ್ಯಾಣ ಮಂಟಪ ಸಮೀಪದ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡರು. ಆಗ ಅಡ್ಡಾದಿಡ್ಡಿಯಾಗಿ ಸಾಗಿದ ಬೈಕ್ ವಿಭಜಕಕ್ಕೆ ಡಿಕ್ಕಿಯಾಯಿತು.

ಹಿಂಬದಿ ಕುಳಿತಿದ್ದ ಮುರುಗನ್, ನಾಲ್ಕೈದು ಅಡಿಯಷ್ಟು ಮೇಲೆ ಎಗರಿ ವಿಭಜಕದ ಮೇಲೆ ಬಿದ್ದರು. ಗಂಭೀರ ಪೆಟ್ಟಾಗಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದರು.

ರಾಮರೆಡ್ಡಿ ಅವರ ಎಡಗಾಲು ಮುರಿದಿದೆ. ಅತಿ ವೇಗ ಹಾಗೂ ಅಜಾಗರೂಕ ಚಾಲನೆ  ಆರೋಪದಡಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಕೆ.ಆರ್.ಪುರ ಸಂಚಾರ ಪೊಲೀಸರು ಹೇಳಿದ್ದಾರೆ.

ಮಗ ಸಾವು, ತಾಯಿಗೆ ಗಾಯ: ‌ಹೊಸೂರು ರಸ್ತೆಯ ಸಿಂಗಸಂದ್ರದಲ್ಲಿ ಮೃತಪಟ್ಟ ಮುಜಾಮಿಲ್ (23) ಅಕ್ಕಿ ವ್ಯಾಪಾರಿಯಾಗಿದ್ದರು. ಶಿಕಾರಿಪಾಳ್ಯ ನಿವಾಸಿಯಾದ ಅವರು, ತಾಯಿ ಫರ್ವಿನ್ ತಾಜ್ ಅವರನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಮಂಗಮ್ಮನಪಾಳ್ಯದಲ್ಲಿ ನಿಗದಿಯಾಗಿದ್ದ ಸಂಬಂಧಿಯೊಬ್ಬರ ಮದುವೆಗೆ ಹೋಗುತ್ತಿದ್ದರು.

ರಾತ್ರಿ 7.30ರ ಸುಮಾರಿಗೆ ಅವರು ಸಿಂಗಸಂದ್ರಕ್ಕೆ ಬಂದಾಗ, ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ವಿಭಜಕಕ್ಕೆ ಡಿಕ್ಕಿ ಮಾಡಿದ್ದಾರೆ. ಕೆಳಗೆ ಬೀಳುತ್ತಿದ್ದಂತೆಯೇ ಹೆಲ್ಮೆಟ್ ಕಳಚಿಕೊಂಡಿದ್ದರಿಂದ ಮುಜಾಮಿಲ್ ಅವರ ತಲೆಗೆ ಬಲವಾದ ಪೆಟ್ಟಾಗಿದೆ. ಫರ್ವಿನ್ ಅವರ ಪಕ್ಕೆಲುಬು ಮುರಿದಿದೆ.

ಕೂಡಲೇ ಸ್ಥಳೀಯರು ಇಬ್ಬರನ್ನೂ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆಗೆ ಸ್ಪಂದಿಸದ ಮುಜಾಮಿಲ್, ಮಂಗಳವಾರ ಬೆಳಗಿನ ಜಾವ 3 ಗಂಟೆಗೆ ಕೊನೆಯುಸಿರೆಳೆದರು. ಫರ್ವಿನ್ ಪ್ರಾಣಕ್ಕೆ ಅಪಾಯವಿಲ್ಲ ಎಂದು ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.