ADVERTISEMENT

ಪ್ರವಾಸಿ ತಾಣಗಳಲ್ಲಿ ಹೆಚ್ಚು ದರ ಕಡಿವಾಣಕ್ಕೆ ಕ್ರಮ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 20:34 IST
Last Updated 27 ಮಾರ್ಚ್ 2017, 20:34 IST

ಬೆಂಗಳೂರು: ‘ಪ್ರವಾಸಿ ತಾಣಗಳಲ್ಲಿ ಆಹಾರ ಮತ್ತು ಪಾನೀಯಗಳನ್ನು ಗರಿಷ್ಠ ಮಾರಾಟ ದರಕ್ಕಿಂತ (ಎಂಆರ್‌ಪಿ) ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದನ್ನು ನಿಯಂತ್ರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ಕಳುಹಿಸಲಾಗುವುದು’ ಎಂದು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.
ವಿಧಾನ ಪರಿಷತ್ತಿನಲ್ಲಿ ಜೆಡಿಎಸ್‌ನ ಕಾಂತರಾಜು ಪ್ರಶ್ನೆಗೆ ಸಚಿವರು ಉತ್ತರಿಸಿದರು.

ನೋಟು ರದ್ದತಿಯಿಂದಾಗಿ ಪ್ರವಾಸೋದ್ಯಮ ತೀವ್ರವಾಗಿ ಕುಸಿದಿತ್ತು. ಈಗ ರಜೆಗಳು ಆರಂಭ ಆಗಿರುವುದರಿಂದ ಮತ್ತೆ ಹೆಚ್ಚಿನ ಜನ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಅಗತ್ಯ ಇರುವ ಕಡೆ ಇನ್ನೂ ಹೆಚ್ಚಿನ ಬಸ್‌ಗಳು, ಭದ್ರತಾ ಸಿಬ್ಬಂದಿ ಒದಗಿಸಲಾಗುವುದು ಎಂದರು.

ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಸಾರಿಗೆ ಮತ್ತು ವಸತಿಸಹಿತ ಪ್ಯಾಕೇಜ್‌ ಟೂರ್‌ಗಳನ್ನು ರೂಪಿಸಲಾಗಿದೆ. ಕೆಲವೇ ದಿನಗಳಲ್ಲಿ ಈ ಬಗ್ಗೆ ಪ್ರಚಾರ ಮಾಡಲಾಗುವುದು. ಅಲ್ಲದೆ, ದಕ್ಷಿಣ ಭಾರತದ ಐಷಾರಾಮಿ ರೈಲು ‘ಗೋಲ್ಡನ್‌ ಚಾರಿಯಟ್‌’ನ ಪ್ರಯಾಣ ದರವನ್ನೂ ಕಡಿಮೆ ಮಾಡಲಾಗಿದೆ ಎಂದು ಖರ್ಗೆ ವಿವರಿಸಿದರು.

ADVERTISEMENT

ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಗಳಿಗೆ ತಲಾ 20 ಲಕ್ಷ ಬಿಡುಗಡೆ ಮಾಡಲಾಗಿದೆ. ಪ್ರಸಕ್ತ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಇನ್ನೂ 16 ಪ್ರವಾಸಿ ತಾಣಗಳನ್ನು ಘೋಷಿಸಿದ್ದು, ಅಲ್ಲಿಯೂ ಶೀಘ್ರವಾಗಿ ಮೂಲಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.

₹ 43 ಕೋಟಿ ಬಿಡುಗಡೆ
‘ರಾಜ್ಯದ ವಿವಿಧ ಪ್ರವಾಸಿ ತಾಣ ಗಳಲ್ಲಿ ಯಾತ್ರಿ ನಿವಾಸ, ಡಾರ್ಮಿ ಟರಿ ನಿರ್ಮಾಣ ಕಾಮಗಾರಿ ಗಳನ್ನು ಕೈಗೊಳ್ಳಲು ಪ್ರವಾಸೋ ದ್ಯಮ ಇಲಾಖೆಯಿಂದ ಕಾಮ ಗಾರಿ ಅನುಷ್ಠಾನ ಸಂಸ್ಥೆಗಳಿಗೆ ₹ 43.84 ಕೋಟಿ ಬಿಡುಗಡೆ ಮಾಡ ಲಾಗಿದೆ’ ಎಂದು ತಿಳಿಸಿದರು.
ಪ್ರವಾಸೋದ್ಯಮ ಇಲಾಖೆಯಿಂದ ಯಾವುದೇ ಯಾತ್ರಿ ನಿವಾಸಗಳನ್ನು ನಿರ್ಮಾಣ ಮಾಡುತ್ತಿಲ್ಲ. ಆದರೆ, ಯಾತ್ರಿನಿವಾಸಗಳನ್ನು ನಿರ್ಮಾಣ ಮಾಡುವ ಲೋಕೋಪಯೋಗಿ ಇಲಾಖೆ, ನಿರ್ಮಿತಿ ಕೇಂದ್ರಗಳಿಗೆ ಹಣ ನೀಡಲಾಗುವುದು ಎಂದು ಕಾಂಗ್ರೆಸ್‌ನ ಆರ್.ಬಿ. ತಿಮ್ಮಾಪೂರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.