ADVERTISEMENT

ಪ್ರಸ್ತಾವ ತಿರಸ್ಕರಿಸಿದ್ದ ಎನ್‌ಎಚ್‌ಎಐ

ಹೆಬ್ಬಾಳದ ಕೆಂಪಾಪುರ ಜಂಕ್ಷನ್‌­ನಲ್ಲಿ ಸ್ಕೈವಾಕ್‌

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2015, 20:10 IST
Last Updated 27 ಫೆಬ್ರುವರಿ 2015, 20:10 IST

ಬೆಂಗಳೂರು: ಹೆಬ್ಬಾಳದ ಕೆಂಪಾಪುರ ಜಂಕ್ಷನ್‌­ನಲ್ಲಿ ಸ್ಕೈವಾಕ್‌ ನಿರ್ಮಿಸಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಳೆದ ವರ್ಷವೇ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿ­ಕಾ­ರಕ್ಕೆ (ಎನ್‌ಎಚ್‌ಎಐ) ವಿವರವಾದ ಪ್ರಸ್ತಾವವನ್ನು ಸಲ್ಲಿಸಿತ್ತು. ಆದರೆ, ಅದನ್ನು ಎನ್‌ಎಚ್‌ಎಐ ತಿರಸ್ಕರಿಸಿತ್ತು.

ಸ್ವತಃ ಬಿಬಿಎಂಪಿ ಆಯುಕ್ತ ಎಂ.­ಲಕ್ಷ್ಮೀನಾರಾಯಣ ಶುಕ್ರವಾರ ಕೌನ್ಸಿಲ್‌ ಸಭೆಗೆ ಈ ಮಾಹಿತಿ ನೀಡಿದರು. ‘ಜಂಕ್ಷ­ನ್‌­­ನಿಂದ ಮುಂದಿರುವ ಮೇಲ್ಸೇತುವೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸುಪರ್ದಿಯಲ್ಲಿದೆ. ಕೆಳಭಾಗದ ರಸ್ತೆ ಎನ್‌ಎಚ್‌ಎಐ ವ್ಯಾಪ್ತಿಗೆ ಒಳಪಡು­ತ್ತದೆ. ಅಲ್ಲಿ ಸ್ಕೈ ವಾಕ್‌ ನಿರ್ಮಾಣ ಮಾಡಲು ಎನ್‌ಎಚ್‌ಎಐ ಅನುಮತಿ ಅಗತ್ಯ­ವಾಗಿದೆ. ಈ ಹಿಂದೆ ಪ್ರಸ್ತಾವ ಸಲ್ಲಿಸಿ­­ದ್ದಾಗ ಪ್ರಾಧಿಕಾರ ಅದನ್ನು ತಿರಸ್ಕರಿಸಿತ್ತು’ ಎಂದು ವಿವರಿಸಿದರು.

‘ಕೊಲಂಬಿಯಾ ಏಷ್ಯಾ ಆಸ್ಪತ್ರೆ ಸ್ಕೈ ವಾಕ್‌ ನಿರ್ಮಿಸಲು ಸಿದ್ಧವಿತ್ತು. ಆದರೆ, ಅನುಮತಿ ಸಿಗದ ಕಾರಣ ಪ್ರಸ್ತಾವವನ್ನು ಕೈ­ಬಿಡಲಾಯಿತು. ಎನ್‌ಎಚ್‌ಎಐ ವತಿ­ಯಿಂ­­­ದಲೇ ಅಲ್ಲೊಂದು ಸ್ಕೈ ವಾಕ್‌ ನಿರ್ಮಾಣ ಮಾಡುವ ಭರವಸೆ ಅಲ್ಲಿನ ಅಧಿಕಾರಿಗಳಿಂದ ಸಿಕ್ಕಿದೆ’ ಎಂದು ತಿಳಿಸಿದರು.

ಬ್ಯಾಟರಾಯನಪುರ ವಾರ್ಡ್‌ನ ಇಂದಿರಾ ಹಾಗೂ ಕೊಡಿಗೆಹಳ್ಳಿ ವಾರ್ಡ್‌ನ ಅಶ್ವತ್ಥನಾರಾಯಣ ಗೌಡ, ‘ಇನ್ನೂ ಎಷ್ಟು ಬಲಿಗಳನ್ನು ಪಡೆದ ಮೇಲೆ ಅಲ್ಲಿ ಸ್ಕೈ ವಾಕ್‌ ನಿರ್ಮಾಣ ಮಾಡ­ಲಾಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಎನ್‌ಎಚ್‌ಎಐ ಈಗಾಗಲೇ ಟೆಂಡರ್‌ ಪ್ರಕ್ರಿಯೆ ಆರಂಭಿಸಲು ನಿರ್ಧ­ರಿಸಿದೆ. ಬಿಬಿಎಂಪಿಯಿಂದ ಪತ್ರ ಬರೆದು ಕೂಡಲೇ ಸ್ಕೈ ವಾಕ್‌ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗು­ವುದು’ ಎಂದು ಆಯುಕ್ತರು ಉತ್ತರಿಸಿದರು.

ತಿರಸ್ಕರಿಸಲು ಕಾರಣ...
‘ಎನ್‌ಎಚ್‌ಎಐಗೆ ಸೇರಿದ ಪ್ರದೇಶದಲ್ಲಿ ಖಾಸಗಿ ಸಂಸ್ಥೆಗೆ ಸ್ಕೈ ವಾಕ್‌ ನಿರ್ಮಿಸಲು ಅವಕಾಶ ಮಾಡಿಕೊಟ್ಟು, ಅಲ್ಲಿ ಜಾಹೀರಾತು ಫಲಕ ಅಳವಡಿಸುವ ಯೋಜನೆ ಹೊಂದಿದ್ದರಿಂದ ಪ್ರಸ್ತಾವ ತಿರಸ್ಕಾರ ಮಾಡಲಾಗಿತ್ತು’ ಎಂದು ಎನ್‌ಎಚ್‌ಎಐ ಅಧಿಕಾರಿಗಳು ಮಾಹಿತಿ ನೀಡಿದರು.

‘ಎನ್‌ಎಚ್‌ಎಐ ನಿಯಮಾವಳಿ ಪ್ರಕಾರ ಪ್ರಾಧಿಕಾರದ ಸ್ಥಳದಲ್ಲಿ ಖಾಸಗಿ ಜಾಹೀರಾತು ಹಾಕಲು ಅವಕಾಶ ಇಲ್ಲ. ಜಾಹೀರಾತು ಫಲಕ ಅಳವಡಿಸದೆ ಸ್ಕೈ ವಾಕ್‌ ನಿರ್ಮಿಸುವುದಾದರೆ ನಮ್ಮ ಅಭ್ಯಂತರ ಇಲ್ಲ’ ಎಂದು ಎನ್‌ಎಚ್‌ಎಐ ಮುಖ್ಯ ಪ್ರಧಾನ ವ್ಯವಸ್ಥಾಪಕ ಎ.ಕೆ. ಮಾಥೂರ್‌ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT