ADVERTISEMENT

ಪ್ರಾಂಶುಪಾಲೆ ಸೇರಿ ನಾಲ್ವರು ಸೆರೆ

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2017, 19:42 IST
Last Updated 21 ಫೆಬ್ರುವರಿ 2017, 19:42 IST

ಬೆಂಗಳೂರು: ಮಾರತ್ತಹಳ್ಳಿ ಠಾಣೆ ವ್ಯಾಪ್ತಿಯ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಮೂರು ವರ್ಷದ ಬಾಲಕಿ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಸುರಕ್ಷತಾ ಕ್ರಮ ಕೈಗೊಳ್ಳದ ಆರೋಪದ ಮೇಲೆ ಪೊಲೀಸರು ಪ್ರಾಂಶುಪಾಲೆ ಸೇರಿ ನಾಲ್ಕು ಮಂದಿಯನ್ನು ಮಂಗಳವಾರ ಬಂಧಿಸಿದ್ದಾರೆ.

ಪ್ರಾಂಶುಪಾಲೆ ಡಾ.ವೀಣಾ, ಆಡಳಿತ ಮಂಡಳಿ ಸದಸ್ಯರಾದ ಕಿಂಗ್ಸ್‌ಟನ್, ಪ್ರವೀಣ್ ಹಾಗೂ ಇನ್ನೊಬ್ಬ ನಿರ್ದೇಶಕನ ಸೆರೆಯಾಗಿದೆ. ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಸಂಬಂಧ ಮಾರತ್ತಹಳ್ಳಿ ಪೊಲೀಸರು ಶಾಲೆಯ ಮೇಲ್ವಿಚಾರಕ ಮಂಜುನಾಥ್‌ನನ್ನು ಸೋಮವಾರವೇ ಬಂಧಿಸಿದ್ದರು.

‘ಮಕ್ಕಳಿಗೆ ರಕ್ಷಣೆ ನೀಡದ ಆರೋಪದ ಮೇಲೆ ಆಡಳಿತ ಮಂಡಳಿ ಸದಸ್ಯರನ್ನು ಬಂಧಿಸಲಾಗಿದೆ’ ಎಂದು ವೈಟ್‌ಫೀಲ್ಡ್ ಡಿಸಿಪಿ ನಾರಾಯಣ್ ಹೇಳಿದ್ದಾರೆ.

ADVERTISEMENT

ಮುಂದುವರಿದ ಪ್ರತಿಭಟನೆ:  ಶಾಲೆಯಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ಕೆರಳಿದ ಪೋಷಕರು, ಮಂಗಳವಾರ ಬೆಳಿಗ್ಗೆ ಕೂಡ  ಶಾಲೆ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದರು.

‘ಆರೋಪಿ ಮಂಜುನಾಥ್, ಈ ಹಿಂದೆಯೂ ಮಕ್ಕಳ ಜತೆ ಅನುಚಿತವಾಗಿ ವರ್ತಿಸಿದ್ದ. ಈ ವಿಚಾರವನ್ನು ಪ್ರಾಂಶುಪಾಲರ ಗಮನಕ್ಕೂ ತರಲಾಗಿತ್ತು. ಆದರೆ, ಅದನ್ನು ಅವರು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ, ಘಟನೆಗೆ ಪ್ರಾಂಶುಪಾಲರು, ಆಡಳಿತ ಮಂಡಳಿಯನ್ನೇ ನೇರ ಹೊಣೆ ಮಾಡಬೇಕು. ಕೂಡಲೇ ಶಾಲೆಯನ್ನು ಮುಚ್ಚಿಸಬೇಕು’ ಎಂದು ಆಗ್ರಹಿಸಿದರು. ಈ ಒತ್ತಾಯಕ್ಕೆ ಮಣಿದ ಪೊಲೀಸರು, ನಾಲ್ವರನ್ನೂ ಬಂಧಿಸಿದರು.

ಶಾಲೆಗೆ ಉಗ್ರಪ್ಪ ಭೇಟಿ

ರಾಜ್ಯ ಮಕ್ಕಳ ಮತ್ತು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಹಾಗೂ ಸಮಿತಿಯ ಇತರೆ ಸದಸ್ಯರು ಮಂಗಳವಾರ ನರ್ಸರಿಗೆ ಭೇಟಿ ನೀಡಿ ಪೋಷಕರ ದೂರುಗಳನ್ನು ಆಲಿಸಿದರು.

ಶಾಲೆಯಲ್ಲಿ ಈ ಹಿಂದೆಯೂ ಇಬ್ಬರು ಮಕ್ಕಳ ಮೇಲೆ ಕಿರುಕುಳ ನಡೆದಿತ್ತು ಎಂಬುದನ್ನು ಪೋಷಕರು ಉಗ್ರಪ್ಪ ಅವರ ಗಮನಕ್ಕೆ ತಂದರು. ಅದಕ್ಕೆ ಪ್ರತಿಕ್ರಿಯಿಸಿದ ಅವರು, ‘ಈ ಕೃತ್ಯಗಳ ಬಗ್ಗೆ ಪ್ರತ್ಯೇಕವಾಗಿ ದೂರು ದಾಖಲಿದರೆ, ತನಿಖೆಗೆ ಆದೇಶಿಸಲಾಗುವುದು’ ಎಂದು ಹೇಳಿದರು.

ಪ್ರತ್ಯೇಕ ದೂರು ಕೊಡಲು ಒಪ್ಪದ ಪೋಷಕರು, ಈಗ ದಾಖಲಾಗಿರುವ ಪ್ರಕರಣದ ಅಡಿಯಲ್ಲೇ ಹಿಂದಿನ ಕೃತ್ಯಗಳ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಈ ವಿಚಾರವಾಗಿ ಪ್ರತಿಭಟನಾಕಾರರು ಹಾಗೂ ಸಮಿತಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಕೊನೆಗೆ ಉಗ್ರಪ್ಪ ಅವರು ಹಳೇ ಪ್ರಕರಣಗಳ ಬಗ್ಗೆಯೂ ತನಿಖೆ ಮಾಡುವಂತೆ ಪೊಲೀಸರಿಗೆ ಸೂಚಿಸಿದರು. ಆ ಬಳಿಕ ಪರಿಸ್ಥಿತಿ ತಿಳಿಯಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.