ADVERTISEMENT

ಪ್ರಿಯಕರನ ಜತೆ ಸೇರಿ ಪುತ್ರಿ ಕೊಂದ ತಾಯಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 19:58 IST
Last Updated 3 ಸೆಪ್ಟೆಂಬರ್ 2015, 19:58 IST

ಬೆಂಗಳೂರು:  ಮಗಳನ್ನು ನೀರಿನ ಸಂಪ್‌ಗೆ ತಳ್ಳಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ಮತ್ತು ಆಕೆಯ ಪ್ರಿಯಕರನನ್ನು ಬ್ಯಾಡರಹಳ್ಳಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ತಾವರೆಕೆರೆಯ ಲತಾ (25) ಮತ್ತು ಮಾಗಡಿಯ ರಮೇಶ್ (28) ಬಂಧಿತರು. ಆರೋಪಿಗಳು ಎಂಟು ವರ್ಷದ ಸ್ಮಿತಾಳನ್ನು ಮಂಗಳವಾರ ನೀರಿನ ಸಂಪ್‌ಗೆ ತಳ್ಳಿ ಹತ್ಯೆ ಮಾಡಿದ್ದರು.

ಹತ್ತು ವರ್ಷದ ಹಿಂದೆ ನಾಗರಾಜು ಎಂಬುವವರನ್ನು ಮದುವೆಯಾಗಿದ್ದ ಲತಾಗೆ ಸ್ಮಿತಾ ಎಂಬ ಪುತ್ರಿ ಇದ್ದಳು. ವರ್ಷದ ಹಿಂದೆ ನಾಗರಾಜು ಅವರು ಅಪಘಾತದಲ್ಲಿ ಮೃತಪಟ್ಟಿದ್ದರು.

ನಂತರ ಕುಟುಂಬಕ್ಕೆ ಪರಿಚಯಸ್ಥನಾಗಿದ್ದ ನಾಗರಾಜು ಜತೆ ಲತಾ ಹೊಂದಿದ್ದ ಸ್ನೇಹ, ಅಕ್ರಮ ಸಂಬಂಧಕ್ಕೆ ತಿರುಗಿತ್ತು.  ನಾಗರಾಜನಿಗೂ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ.

ನಾಗರಾಜ ಆಗಾಗ್ಗೆ ಲತಾ ಮನೆಗೆ ಬಂದು ಉಳಿದು ಹೋಗುತ್ತಿದ್ದ. ಈ ಕುರಿತು ತಾಯಿ ಜತೆ ಜಗಳವಾಡುತ್ತಿದ್ದ ಸ್ಮಿತಾ, ‘ಆತನನ್ನು ಮನೆಗೆ ಬರುವುದು ಬೇಡ’ ಎಂದು ತಾಯಿಗೆ ಹೇಳುತ್ತಿದ್ದರು.

ಸ್ಮಿತಾಳನ್ನು ಹೀಗೆ ಬಿಟ್ಟರೆ ನನ್ನ ಲತಾಳ ಸಂಬಂಧಕ್ಕೆ ತೊಂದರೆಯಾಗುತ್ತದೆ ಎಂದು ಭಾವಿಸಿದ್ದ ನಾಗರಾಜ, ಸ್ಮಿತಾಳನ್ನು ಕೊಲ್ಲಲು ತಂತ್ರ ರೂಪಿಸಿದ್ದ. ಇದಕ್ಕೆ ಲತಾ ಕೂಡ ಬೆಂಬಲ ಸೂಚಿಸಿದ್ದಳು.

ಅಂತೆಯೇ ಮಂಗಳವಾರ ಮನೆಗೆ ಬಂದಾಗ, ಸಂಪ್‌ನಲ್ಲಿ ನೀರು ಇದೆಯೇ ಎಂದು ಪರಿಶೀಲಿಸುವಂತೆ ಲತಾ ಸ್ಮಿತಾಗೆ ಹೇಳಿದ್ದಳು. ಅಂತೆಯೇ ಆಕೆ ಸಂಪ್‌ನ ಬಾಗಿಲು ತೆರೆದು ಬಗ್ಗಿ ನೋಡುತ್ತಿದ್ದಾಗ ಇಬ್ಬರೂ ಹಿಂದಿನಿಂದ ತಳ್ಳಿ ಬಾಗಿಲು ಮುಚ್ಚಿದ್ದರು.

ಆರಂಭದಲ್ಲಿ ಎಲ್ಲರೂ ಇದನ್ನು ಆಕಸ್ಮಿಕ ಸಾವು ಎಂದು ಭಾವಿಸಿದ್ದರು. ಆದರೆ, ನೆರೆಹೊರೆಯವರು ಲತಾ ಮತ್ತು ನಾಗರಾಜನ ನಡುವೆ ಅನೈತಿಕ ಸಂಬಂಧವಿರುವುದಾಗಿ ಮಾತನಾಡಿಕೊಳ್ಳುತ್ತಿದ್ದರು. ಅನುಮಾನದ ಮೇಲೆ ಇಬ್ಬರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ, ತಾವೇ ಸಂಪ್‌ಗೆ ತಳ್ಳಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡರು ಎಂದು ಪೊಲೀಸರು ಹೇಳಿದರು. ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.