ADVERTISEMENT

ಪ್ರೀತಿಸಿ ಮದುವೆಯಾಗಿದ್ದಕ್ಕೆ ಜೀವ ಬೆದರಿಕೆ!

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2016, 19:50 IST
Last Updated 24 ಅಕ್ಟೋಬರ್ 2016, 19:50 IST
ರಹೀಮ್‌ ಅವರಿಗೆ ಬಂದಿರುವ ಬೆದರಿಕೆ ಸಂದೇಶಗಳು
ರಹೀಮ್‌ ಅವರಿಗೆ ಬಂದಿರುವ ಬೆದರಿಕೆ ಸಂದೇಶಗಳು   

ಬೆಂಗಳೂರು: ಪರಸ್ಪರ ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿ ನಗರದಲ್ಲಿ ನೆಲೆಸಿರುವ ಅಂತರಧರ್ಮೀಯ ದಂಪತಿಗೆ ಅಪರಿಚಿತರು ಜೀವ ಬೆದರಿಕೆ ಹಾಕುತ್ತಿದ್ದಾರೆ.

ಅಂಥ ಬೆದರಿಕೆ ಬಗ್ಗೆ ದಂಪತಿಯು ತಿಲಕ್‌ನಗರ ಠಾಣೆಯಲ್ಲಿ ಸೋಮವಾರ ದೂರು ದಾಖಲಿಸಿದ್ದು, ರಕ್ಷಣೆಗಾಗಿ ಮನವಿ ಮಾಡಿದ್ದಾರೆ.

ಚಿಕ್ಕಮಗಳೂರಿನ 28 ವರ್ಷದ ರಹೀಮ್‌ (ಹೆಸರು ಬದಲಾಯಿಸಲಾಗಿದೆ) ಹಾಗೂ ಜಯನಗರದ 27 ವರ್ಷದ ರಾಧಾ (ಹೆಸರು ಬದಲಾಯಿಸಲಾಗಿದೆ)  ಮೂರು ತಿಂಗಳ ಹಿಂದೆ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ.

ಹುಡುಗ ಮುಸ್ಲಿಂ ಆಗಿದ್ದು,  ಹುಡುಗಿ ಹಿಂದೂ. ಅದೇ ಕಾರಣಕ್ಕಾಗಿ ಮಂಗಳೂರು ಹಾಗೂ ಚಿಕ್ಕಮಗಳೂರು ಮೂಲದ ಅಪರಿಚಿತರು ದಂಪತಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ.

‘ಕಂಡಲ್ಲಿ ಗುಂಡು’ ಎಂದು ಬೆದರಿಕೆ: ಮದುವೆ ನಂತರ ದಂಪತಿ ಜಯನಗರದಲ್ಲಿ ನೆಲೆಸಿದ್ದಾರೆ. ರಹೀಮ್‌  ಮೊಬೈಲ್‌ಗೆ ಪ್ರತಿದಿನವೂ ಕರೆ ಮಾಡುತ್ತಿರುವ ಅಪರಿಚಿತರು, ‘ನೀನು ಹಿಂದೂ ಹುಡುಗಿ ಮದುವೆಯಾಗಿದ್ದೀಯಾ. ಹಿಂದೂ ಸಂಸ್ಕೃತಿ ಪಾಲಿಸುತ್ತಿದ್ದೀಯಾ. ನಿನ್ನನ್ನು ಸುಮ್ಮನೇ ಬಿಡುವುದಿಲ್ಲ. ಕಂಡಲ್ಲಿ ಗುಂಡಿಟ್ಟು ಕೊಲ್ಲುತ್ತೇವೆ’ ಎಂದು ಬೆದರಿಕೆ ಹಾಕುತ್ತಿದ್ದಾರೆ.

‘ಪ್ರೀತಿಸಿ ಮದುವೆಯಾಗಿದ್ದೇವೆ. ಇಬ್ಬರ ಮನೆಯಲ್ಲೂ ಒಪ್ಪಿಗೆ ಇದೆ. ನಮಗೆ ಸಂಬಂಧವೇ ಇಲ್ಲದವರು ಬೆದರಿಕೆ ಹಾಕುತ್ತಿದ್ದಾರೆ. ‘97******66’, ‘81******45’, ‘84******25’ ನಂಬರ್‌ನಿಂದ ಬೆದರಿಕೆ ಕರೆಗಳು ಬರುತ್ತಿವೆ’ ಎಂದು ರಹೀಮ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊಬೈಲ್‌ಗೆ 20ಕ್ಕೂ ಹೆಚ್ಚು ನಂಬರ್‌ಗಳಿಂದ ಸಂದೇಶಗಳು ಬಂದಿವೆ.  ಫೇಸ್‌ಬುಕ್‌ ಖಾತೆಯಲ್ಲಿ ಮದುವೆ ಫೋಟೊಗಳಿಗೆ ಹಲವರು ಬೆದರಿಕೆಯ ಕಾಮೆಂಟ್‌ ಮಾಡಿದ್ದಾರೆ. ಇದರಿಂದಾಗಿ ಮನಸ್ಸಿಗೆ ನೆಮ್ಮದಿ ಇಲ್ಲದಂತಾಗಿದೆ’ ಎಂದು ಅಳಲು ತೋಡಿಕೊಂಡರು.

ವ್ಯಾಪಾರದ ವೇಳೆ ಹುಟ್ಟಿದ ಪ್ರೀತಿ: ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ ರಹೀಮ್‌, ಮಕ್ಕಳ ಬಟ್ಟೆ ಹಾಗೂ ಸಾಮಗ್ರಿಗಳ ಅಂಗಡಿ ಇಟ್ಟುಕೊಂಡಿದ್ದರು.
ಅಲ್ಲಿಯೇ ಹುಡುಗಿಯ ಪೋಷಕರ ಅಂಗಡಿಯೂ ಇತ್ತು. ವ್ಯಾಪಾರದ ವೇಳೆ ಅವರಿಬ್ಬರ ನಡುವೆ ಸ್ನೇಹವಾಗಿತ್ತು. ಬಳಿಕ ಸ್ನೇಹ ಪ್ರೀತಿಗೆ ತಿರುಗಿತ್ತು.
ರಹೀಮ್‌ ಅವರ ತಂದೆ–ತಾಯಿಯದ್ದು ಸಹ ಅಂತರಧರ್ಮೀಯ ಪ್ರೇಮ ವಿವಾಹ. ಹೀಗಾಗಿ ಮಗ ಮದುವೆ ವಿಷಯ ಪ್ರಸ್ತಾಪಿಸಿದಾಗ ಒಪ್ಪಿಗೆ ನೀಡಿದ್ದರು. ಇತ್ತ ಹುಡುಗಿ ಮನೆಯಲ್ಲೂ ಮದುವೆಗೆ ಅನುಮತಿ ದೊರಕಿತ್ತು.

ಹಿಂದೂ ಧರ್ಮ ಪಾಲನೆಗೆ ಆಕ್ರೋಶ: ‘ಮದುವೆ ಬಳಿಕ ರಹೀಮ್‌, ಹಿಂದೂ ಧರ್ಮದ ಸಂಪ್ರದಾಯ  ಪಾಲಿಸುತ್ತಿದ್ದಾರೆ. ಇದು ಅವರ ಮೂಲ ಧರ್ಮದ ಕೆಲವರ ಆಕ್ರೋಶಕ್ಕೆ ಕಾರಣವಾಗಿದ್ದು, ಅವರೇ ಈ ರೀತಿ ಬೆದರಿಕೆ ಹಾಕುತ್ತಿರಬಹುದು ಎಂಬ ಅನುಮಾನವಿದೆ’ ಎಂದು ತಿಲಕ್‌ನಗರ ಪೊಲೀಸರು ತಿಳಿಸಿದರು.

‘ಬೆದರಿಕೆ ಸಂಬಂಧ ದಂಪತಿ ದೂರು ನೀಡಿದ್ದಾರೆ. ಜತೆಗೆ ಕೆಲ ದಾಖಲೆಗಳನ್ನು ಕೊಟ್ಟಿದ್ದಾರೆ. ಅದನ್ನು ಪರಿಶೀಲಿಸಲಾಗುತ್ತಿದೆ.  ಆರೋಪಿಗಳನ್ನು ಆದಷ್ಟು ಬೇಗ ಪತ್ತೆ ಮಾಡಲಾಗುವುದು’ ಎಂದು ಹಿರಿಯ ಅಧಿಕಾರಿ ತಿಳಿಸಿದರು.
*
ದಂಪತಿ ನೀಡಿರುವ ದೂರು ಪರಿಶೀಲಿಸಿ ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಬೋರಲಿಂಗಯ್ಯ,
ಡಿಸಿಪಿ, ಆಗ್ನೇಯ ವಿಭಾಗ ­

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.