ADVERTISEMENT

ಪ್ಲಾಸ್ಟಿಕ್ ನಿಷೇಧ ಹಿಂಪಡೆಯಲು ಆಗ್ರಹ

ತಜ್ಞರ ಅಭಿಪ್ರಾಯ ಪಡೆದಿಲ್ಲ: ಕರ್ನಾಟಕ ರಾಜ್ಯ ಪ್ಲಾಸ್ಟಿಕ್ ಸಂಘದ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2016, 20:08 IST
Last Updated 29 ಮಾರ್ಚ್ 2016, 20:08 IST

ಬೆಂಗಳೂರು: ರಾಜ್ಯದಲ್ಲಿ ಜಾರಿಗೆ ತರಲಾಗಿರುವ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಹಿಂಪಡೆಯಬೇಕು ಮತ್ತು ಪ್ಲಾಸ್ಟಿಕ್ ನಿಷೇಧಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಆದೇಶವನ್ನು ಜಾರಿಗೆ ತರಬೇಕು ಎಂದು ಕರ್ನಾಟಕ ರಾಜ್ಯ ಪ್ಲಾಸ್ಟಿಕ್ ಸಂಘವು ಆಗ್ರಹಿಸಿದೆ.

ಪ್ಲಾಸ್ಟಿಕ್‌ ಬಳಕೆಯಿಂದಾಗುವ ತೊಂದರೆಗಳು, ನಿಷೇಧದಿಂದಾಗುವ ಅನುಕೂಲಗಳ ಬಗ್ಗೆ ಸರ್ಕಾರ ಯಾವುದೇ ವರದಿ ತಯಾರಿಸಿಲ್ಲ. ಅಲ್ಲದೇ, ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ನಿಷೇಧ ಮಾಡಿರುವುದು ಸರಿಯಲ್ಲ ಎಂದು ಸಂಘವು ದೂರಿದೆ. ‘ರಾಜ್ಯದಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧಕ್ಕೆ ಸಂಬಂಧಿಸಿದಂತೆ ಸರ್ಕಾರ ಏಕಮುಖ ತೀರ್ಮಾನ ತೆಗೆದುಕೊಂಡಿದೆ. ನಿಷೇಧಕ್ಕೂ ಮುನ್ನ ಪ್ಲಾಸ್ಟಿಕ್ ತಯಾರಿಕಾ ಉದ್ಯಮದವರೊಂದಿಗೆ ಮಾತುಕತೆ ನಡೆಸಿಲ್ಲ. ತಜ್ಞರ ಅಭಿಪ್ರಾಯವನ್ನೂ ಪಡೆದಿಲ್ಲ’ ಎಂದು ಹೇಳಿದರು.

‘ಕೇಂದ್ರ ಸರ್ಕಾರವು ಶುಕ್ರವಾರ (ಮಾ. 25)  ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣಾ ನಿಯಮವನ್ನು ಜಾರಿಗೆ ತಂದಿದೆ. ಅದರ ಅನ್ವಯ 50 ಮೈಕ್ರಾನ್‌ಗಿಂತ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್‌ ಅನ್ನು ಮಾತ್ರ ನಿಷೇಧಿಸಬೇಕು ಎಂದು ಅದರಲ್ಲಿ ಹೇಳಲಾಗಿದೆ’ ಎಂದರು. ‘ಪ್ಲಾಸ್ಟಿಕ್‌ಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಆರು ತಿಂಗಳ ಕಾಲಾವಕಾಶ ನೀಡಬೇಕು ಎಂದು ನಿಯಮದಲ್ಲಿ ಇದೆ. ಹೀಗಾಗಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ನಿಯಮವನ್ನು ಹಿಂಪಡೆಯಬೇಕು. ಕೇಂದ್ರ ಸರ್ಕಾರದ ನಿಯಮದ ಪ್ರಕಾರ 50 ಮೈಕ್ರಾನ್‌ಗಿಂತ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಮಾತ್ರ ನಿಷೇಧಿಸಬೇಕು’ ಎಂದು ಹೇಳಿದರು.

‘ರಾಜ್ಯದಲ್ಲಿ 750 ಪ್ಲಾಸ್ಟಿಕ್ ತಯಾರಿಕಾ ಉದ್ಯಮಗಳಿವೆ. ಅವುಗಳಲ್ಲಿ 70 ಸಾವಿರ ಮಂದಿ ಉದ್ಯೋಗಿಗಳಿದ್ದಾರೆ. ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಮಾಡಿದ ನಂತರ ಪ್ಲಾಸ್ಟಿಕ್ ಉತ್ಪಾದನೆ ಸ್ಥಗಿತಗೊಂಡಿದೆ. ಕಾರ್ಮಿಕರು ಕೆಲಸವಿಲ್ಲದೆ ಬೀದಿಗೆ ಬಂದಿದ್ದಾರೆ’ ಎಂದು ದೂರಿದರು. ‘ಪ್ಲಾಸ್ಟಿಕ್ ಉದ್ಯಮ ಸಣ್ಣ ಕೈಗಾರಿಕೆ ಅಡಿ ಬರುತ್ತದೆ. ಪ್ಲಾಸ್ಟಿಕ್ ಉದ್ದಿಮೆದಾರರು ವಿವಿಧ ಬ್ಯಾಂಕ್‌ಗಳಲ್ಲಿ ₹ 3 ಸಾವಿರ ಕೋಟಿ ಸಾಲ ಮಾಡಿಕೊಂಡಿದ್ದಾರೆ. ನಿಷೇಧ ಮಾಡಿದ ನಂತರ ಈವರೆಗೆ ₹ 150 ಕೋಟಿ ನಷ್ಟ ಉಂಟಾಗಿದೆ. ಇದನ್ನು ಯಾರು ತುಂಬಿ ಕೊಡುತ್ತಾರೆ’ ಎಂದು ಪ್ರಶ್ನಿಸಿದರು.

‘ರಾಜ್ಯ ಸರ್ಕಾರವು ಪ್ಲಾಸ್ಟಿಕ್‌ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧ ಮಾಡಿರುವುದು ಅವೈಜ್ಞಾನಿಕ ತೀರ್ಮಾನವಾಗಿದೆ’ ಎಂದರು.
‘ಪ್ಲಾಸ್ಟಿಕ್ ತಟ್ಟೆಗೆ ಪರ್ಯಾಯವಾಗಿ ಅಡಿಕೆ ಹಾಳೆಯ ತಟ್ಟೆಗಳನ್ನು ಬಳಸಬಹುದು ಎಂದು ಹೇಳಲಾಗುತ್ತದೆ. ಆದರೆ, ಅಡಿಕೆ ಹಾಳೆಯ ತಟ್ಟೆಗಳು ಎಲ್ಲಾ ಕಾಲದಲ್ಲಿಯೂ ಸಿಗುವುದಿಲ್ಲ. ಅಲ್ಲದೇ,  ಪೇಪರ್ ತಟ್ಟೆ, ಲೋಟಗಳನ್ನು ಮರದಿಂದ ತಯಾರಿಸಲಾಗುತ್ತದೆ. ಇದರಿಂದ ಅರಣ್ಯ ನಾಶವಾಗುತ್ತದೆ’  ಎಂದರು.

‘ಈಗಿರುವ ಪ್ಲಾಸ್ಟಿಕ್‌ ತಯಾರಿಕಾ ಯಂತ್ರಗಳಲ್ಲಿ ಬೇರೆ ಉತ್ಪನ್ನಗಳನ್ನು ತಯಾರಿಸಬಹುದು ಎಂದು ಸರ್ಕಾರ ಹೇಳುತ್ತದೆ. ಗ್ರೈಂಡರ್‌ನಲ್ಲಿ ಜೂಸ್‌ ಮಾಡಲು ಹೇಗೆ ಸಾಧ್ಯವಾಗುವುದಿಲ್ಲವೋ ಅದೇ ರೀತಿ ಪ್ಲಾಸ್ಟಿಕ್ ತಯಾರಿಕಾ ಯಂತ್ರಗಳಲ್ಲಿ ಸಹ ಬೇರೆ ವಸ್ತುಗಳನ್ನು ತಯಾರಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಪ್ಲಾಸ್ಟಿಕ್ ಉದ್ಯಮ ಕಳೆದ 40 ವರ್ಷಗಳಿಂದ ‘ಹಸಿರು’ ಗುಂಪಿನಲ್ಲಿದೆ. ‘ಪೇಪರ್’ ತಯಾರಿಕೆ ಉದ್ಯಮವು ‘ಕೆಂಪು’ ಗುಂಪಿನಲ್ಲಿದೆ.  ಪ್ಲಾಸ್ಟಿಕ್ ಉದ್ಯಮದಿಂದ ಪರಿಸರಕ್ಕೆ ಯಾವುದೇ ತೊಂದರೆಯೂ ಇಲ್ಲ. ಹೀಗಿದ್ದರೂ ಸರ್ಕಾರ ಪ್ಲಾಸ್ಟಿಕ್ ನಿಷೇಧ ಮಾಡಿರುವುದು ಏಕೆ ಎಂಬುದು ತಿಳಿಯುತ್ತಿಲ್ಲ’ ಎಂದರು.

ತ್ಯಾಜ್ಯ ಸಮಸ್ಯೆಗೆ ಪ್ಲಾಸ್ಟಿಕ್ ನಿಷೇಧ ಪರಿಹಾರವಲ್ಲ
‘ಪ್ಲಾಸ್ಟಿಕ್ ನಿಷೇಧವೊಂದೆ ತ್ಯಾಜ್ಯ ಸಮಸ್ಯೆ ನಿವಾರಣೆಗೆ ಪರಿಹಾರವಲ್ಲ. ರಾಜ್ಯದಲ್ಲಿ ಒಟ್ಟು ಉತ್ಪತ್ತಿಯಾಗುತ್ತಿರುವ ತ್ಯಾಜ್ಯದಲ್ಲಿ ಶೇ 6ರಷ್ಟು ಮಾತ್ರ ಪ್ಲಾಸ್ಟಿಕ್  ತ್ಯಾಜ್ಯ ಇದೆ. ಅದರಲ್ಲಿ 40 ಮೈಕ್ರಾನ್‌ಗಿಂತ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಶೇಕಡಾ 1ರಷ್ಟು ಮಾತ್ರ ಇದೆ. ಅದನ್ನು ಮಾತ್ರ ನಿಷೇಧ ಮಾಡುವುದು ಬಿಟ್ಟು ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಮಾಡಿರುವುದು ಸರಿಯಲ್ಲ’ ಎಂದು ವಿ.ವಿಜಯ್‌ಕುಮಾರ್ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.