ADVERTISEMENT

‘ಫಲಾನುಭವಿಗಳಿಗೆ ಸರ್ಕಾರದ ಯೋಜನೆ ತಲುಪಲಿ’

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 20:13 IST
Last Updated 20 ಜನವರಿ 2017, 20:13 IST
ಸುಧಾ, ಉಪನಗರ
ಸುಧಾ, ಉಪನಗರ   

ಬೆಂಗಳೂರು: ‘ರಾಜ್ಯ ಸರ್ಕಾರದ ಯೋಜನೆಗಳನ್ನು ಎಲ್ಲಾ ವರ್ಗದ ಜನರಿಗೆ ತಲುಪುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಇಲಾಖೆ, ಬಿಬಿಎಂಪಿ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯ್ತಿ ಆಶ್ರಯದಲ್ಲಿ  ಕೆಂಗೇರಿಯಲ್ಲಿ ಶುಕ್ರವಾರ ಆಯೋಜಿದ್ದ  ‘ಜನಮನ: ಫಲಾನುಭವಿಗಳೊಂದಿಗೆ ಸಂವಾದ’ದಲ್ಲಿ ಅವರು ಮಾತನಾಡಿದರು.

ಎಲ್ಲಾ ವರ್ಗದ ಜನರನ್ನು  ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಇನ್ನೂ ಹೆಚ್ಚು ಯೋಜನೆಗಳನ್ನು ರೂಪಿಸಲಾಗುತ್ತದೆ. ಸರ್ಕಾರದ ಸವಲತ್ತುಗಳು ಪ್ರತಿಯೊಬ್ಬ ನಾಗರಿಕನಿಗೂ ಸಿಗುವಂತಾಗಬೇಕು ಹಾಗೂ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ  ಅಭಿವೃದ್ಧಿ ಹೊಂದಬೇಕು ಎಂದರು.

‘ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಅಕ್ಕಿ. ಗೋಧಿ, ಎಣ್ಣೆ ಪ್ರಮಾಣವನ್ನು ಹೆಚ್ಚಿಸಬೇಕು. ಜೊತೆಗೆ ಸಿರಿಧಾನ್ಯಗಳನ್ನು ವಿತರಿಸಬೇಕು. ಗರ್ಭಿಣಿಯರು ಪಡಿತರ ಪಡೆಯಲು ಸರದಿಯಲ್ಲಿ ನಿಲ್ಲಲು ಸಾಧ್ಯವಾಗುವುದಿಲ್ಲ. ಹಾಗಾಗಿ ಕೂಪನ್ ಪದ್ಧತಿಯನ್ನು ರದ್ದು ಮಾಡಬೇಕು’ ಎಂದು ಫಲಾನುಭವಿ ಮಹಿಳೆಯರು ಸಚಿವರಲ್ಲಿ ವಿನಂತಿ ಮಾಡಿಕೊಂಡರು.

ಕ್ಷೀರಭಾಗ್ಯ ಯೋಜನೆಯ ಅಡಿಯಲ್ಲಿ  ವಾರದಲ್ಲಿ 3 ದಿನ ನೀಡಲಾಗುತ್ತಿರುವ ಹಾಲಿನ ಜೊತೆಗೆ ಮೊಟ್ಟೆ  ಮತ್ತು ಹಣ್ಣು ವಿತರಣೆ ಮಾಡುವಂತೆ ಒತ್ತಾಯಿಸಲಾಯಿತು. ಈ ವಿಷಯ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಸಚಿವರು ಭರವಸೆ ನೀಡಿದರು.

ಕ್ಷೀರಧಾರೆ ಯೋಜನೆಯಡಿ ಸರ್ಕಾರ ನೀಡುತ್ತಿರುವ 5 ರೂಪಾಯಿ ಪ್ರೋತ್ಸಾಹ ಧನದಿಂದ ರಾಜ್ಯದಲ್ಲಿ ಹೈನುಗಾರಿಕೆಗೆ ಹೆಚ್ಚಿನ ಉತ್ತೇಜನ ದೊರಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ರೈತರು ಪಶು ಆಹಾರಗಳ ಮೇಲಿನ ಬೆಲೆಯನ್ನು ಕಡಿಮೆ ಮಾಡಲು ವಿನಂತಿಸಿದರು.

‘ಸರ್ಕಾರದ ಎಲ್ಲ ಯೋಜನೆಗಳನ್ನು ಲೈಂಗಿಕ ಅಲ್ಪಸಂಖ್ಯಾತರಿಗೂ ವಿಸ್ತರಿಸಬೇಕು. ನಮ್ಮ ಸಮುದಾಯದ ಪ್ರತಿಯೊಬ್ಬರಿಗೂ ಆಧಾರ್, ಪಡಿತರಚೀಟಿ, ಗುರುತಿನ ಚೀಟಿ ನೀಡಬೇಕು. ನಿವೇಶನ ಪಡೆಯಲು ಅರ್ಜಿ ಸಲ್ಲಿಸಿದಾಗ ಜಾತಿ ಪ್ರಮಾಣಪತ್ರ ಬೇಕು ಎಂದು ಅಧಿಕಾರಿಗಳು ಕೇಳುತ್ತಾರೆ. ಇದರಿಂದ ನಮಗೆ ತೊಂದರೆಯಾಗುತ್ತಿದೆ’ ಎಂದು ಲೈಂಗಿಕ ಅಲ್ಪಸಂಖ್ಯಾತೆ ಅಳಲು ತೋಡಿಕೊಂಡರು.

‘ಈಗಾಗಲೆ 900 ಮನೆಗಳನ್ನು ನಿರ್ಮಿಸ ಲಾಗುತ್ತಿದ್ದು ಆದಷ್ಟು ಬೇಗ ಹಸ್ತಾಂತರಿಸುವುದಾಗಿ’ ಎಂದು ಸಚಿವರು ಸಲಹೆ ನೀಡಿದರು. ಜನನಿ ಮತ್ತು ಸುರಕ್ಷಾ ಯೋಜನೆ ಅಡಿ ಬಾಣಂತಿಯರಿಗೆ ಮಡಿಲು ಕಿಟ್ಟುಗಳನ್ನು ವಿತರಿಸಲಾಯಿತು. ಮನಸ್ವಿನಿ ಯೋಜನೆ, ಮೈತ್ರಿ ಯೋಜನೆ, ವೃದ್ಯಾಪ್ಯವೇತನ, ವಿಧವಾ ವೇತನ, ಅಂಗವಿಕ ವೇತನ, ಸಂಧ್ಯಾಸುರಕ್ಷಾ ಯೋಜನೆ, ರಾಷ್ಟ್ರೀಯ ಕುಟುಂಬ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಪ್ರೋತ್ಸಾಹಧನ ನೀಡಲಾಯಿತು. 300 ಫಲಾನುಭವಿಗಳು ಭಾಗವಹಿಸಿದ್ದರು.

ಆಧಾರ್ ಲಿಂಕ್‌ ಮಾಡಲು ಸಮಯ ನೀಡಿ
‘ಬ್ಯಾಂಕ್ ಖಾತೆಗೆ ಆಧಾರ್‌ ಲಿಂಕ್ ಮಾಡಿಕೊಳ್ಳಬೇಕೆಂದು ಕೇಂದ್ರ ಸರ್ಕಾರ ಸೂಚಿಸಿದೆ. ದೊಡ್ಡ ಮುಖಬೆಲೆಯ ನೋಟುಗಳ ರದ್ಧತಿಯಿಂದ ತಡವಾಗುತ್ತದೆ. ಆದುದರಿಂದ ಮಾರ್ಚ್ ವರೆಗೂ ಸಮಯ ನೀಡಬೇಕು’ ಎಂದು ಕ್ಷೀರಭಾಗ್ಯ ಫಲಾನುಭವಿಗಳು ಬೇಡಿಕೆ ವಿನಂತಿಸಿದರು. ಆಗ ಕೆ.ಜೆ.ಜಾರ್ಜ್ ಅವರು ‘ಈ ಬಗ್ಗೆ ಮುಖ್ಯಮಂತ್ರಿ ಜತೆಗೆ ಚರ್ಚೆ ಮಾಡುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

ಒತ್ತುವರಿ ತೆರವಿಗೆ ರೈತರ ಮನವಿ
ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಮಳೆಯನ್ನೇ ನಂಬಿ ಬದುಕುವ ನಮ್ಮಂತಹ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಾಗಾಗಿ ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕೆಂದು ಕೃಷಿಭಾಗ್ಯ ಯೋಜನೆ ಫಲಾನುಭವಿಗಳು ಒತ್ತಾಯಿಸಿದರು.

***
ಸಾರ್ವಜನಿಕರು ಏನಂತಾರೆ?

ಕಷ್ಟದಲ್ಲಿರುವ ಜನರ ನೆರವಿಗೆ ಇನ್ನಷ್ಟು ಯೋಜನೆಗಳನ್ನು ರೂಪಿಸಬೇಕು.  ಪ್ರತಿಯೊಬ್ಬ ನಾಗರಿಕನಿಗೂ ಸೌಲಭ್ಯಗಳು ಸಿಗುವಂತಾಗಬೇಕು
-ಸುಧಾ, ಉಪನಗರ

ಉದ್ಯೋಗ ಕ್ಷೇತ್ರಗಳಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಬೇಕು.
-ಎಂ.ನವೀನ್ ಕುಮಾರ್,ಕುರುಡು ಸೊಂಟನಹಳ್ಳಿ

***
ಹಸಿವುಮುಕ್ತ ರಾಜ್ಯದ ಕನಸು ನನಸಾಗಲಿ. ಯಾವುದೇ ಪಕ್ಷ ಆಡಳಿತಕ್ಕೆ ಬಂದರೂ ಜನಪರ ಯೋಜನೆಗಳು ರೂಪಿಸಲಿ.
-ರೈತ ಮುಖಂಡ ಮುನಿರೆಡ್ಡಿ, ಅತ್ತಿಬೆಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT