ADVERTISEMENT

ಫ್ಲೆಕ್ಸ್‌ ನಿಷೇಧ ನಿರ್ಧಾರ ಕೈಬಿಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಜನವರಿ 2015, 20:02 IST
Last Updated 31 ಜನವರಿ 2015, 20:02 IST

ಬೆಂಗಳೂರು: ‘ನಗರದಲ್ಲಿ ಫ್ಲೆಕ್ಸ್‌ ನಿಷೇಧ ಮಾಡುವ ನಿರ್ಧಾರವನ್ನು ಕೈಬಿಡಬೇಕು’ ಎಂದು ರಾಜ್ಯ ಡಿಜಿಟಲ್‌ ಪ್ರಿಂಟರ್ಸ್‌ ಮತ್ತು ಫ್ಲೆಕ್ಸ್‌ ಪ್ರಿಂಟರ್ಸ್ ಸಂಘದ ಅಧ್ಯಕ್ಷ ಕೃಷ್ಣಪ್ಪ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿ­ಯಲ್ಲಿ ಮಾತನಾಡಿ, ‘ನಗರದಲ್ಲಿ ಫ್ಲೆಕ್ಸ್‌ ನಿಷೇಧಿಸಲಾಗುವುದು ಮತ್ತು ಫ್ಲೆಕ್ಸ್‌ ಮುದ್ರಿಸುವ ಸಂಸ್ಥೆಗಳ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇತ್ತೀಚೆಗೆ ಮುಖ್ಯಮಂತ್ರಿಗಳು ಹೇಳಿ­ದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಮಂದಿ ಈ ಉದ್ಯಮವನ್ನು ಅವಲಂಬಿ­ಸಿದ್ದಾರೆ. ಫ್ಲೆಕ್ಸ್‌ ಮುದ್ರಣ ನಿಷೇಧಿಸಿದರೆ ಎಲ್ಲರೂ ಬೀದಿಗೆ ಬರುತ್ತಾರೆ’ ಎಂದರು.

ನಗರದಲ್ಲಿ 550ಕ್ಕೂ ಹೆಚ್ಚು ಪರವಾ­ನಗಿ ಪಡೆದ ಫ್ಲೆಕ್ಸ್‌ ಮುದ್ರಣ ಮಾಡುವ ಸಂಸ್ಥೆಗಳಿವೆ. ಕಾನೂನುಬದ್ಧವಾಗಿ ಪರ­ವಾ­ನಗಿ ಪಡೆದು ಫ್ಲೆಕ್ಸ್‌ ಮುದ್ರಣ ಮಾಡ­ಲಾಗುತ್ತಿದೆ. ಅಕ್ರಮವಾಗಿ ಫ್ಲೆಕ್ಸ್‌ ಮುದ್ರಣ ಮಾಡುತ್ತಿಲ್ಲ ಎಂದರು.

ನಗರದ ಸೌಂದರ್ಯ ಕಾಪಾಡಲು ಫ್ಲೆಕ್ಸ್‌ ನಿಷೇಧಿಸಲಾಗುತ್ತಿದೆ ಎಂದು ಹೇಳ­ಲಾಗಿದೆ. ಫ್ಲೆಕ್ಸ್‌ಗಳಿಂದ ಮಾತ್ರ ನಗರದ ಸೌಂದರ್ಯ ಹಾಳಾಗುತ್ತಿಲ್ಲ. ನಗರದಲ್ಲಿ 50 ಲಕ್ಷಕ್ಕೂ ಹೆಚ್ಚು ವಾಹನಗಳಿವೆ. ಇದ­ರಿಂದ ವಾಯುಮಾಲಿನ್ಯ ಹೆಚ್ಚುತ್ತಿದೆ. ಹಾಗಾದರೆ ವಾಹನಗಳನ್ನು ನಿಷೇಧಿಸು­ತ್ತೀರಾ ಎಂದು ಪ್ರಶ್ನಿಸಿದರು.

ನಗರದಲ್ಲಿ ಪರವಾನಗಿ ಪಡೆದು ಹಾಕಿರುವ 2,400 ಹೋಲ್ಡಿಂಗ್ಸ್‌ಗಳಿವೆ. 21 ಸಾವಿರ ಅನಧಿಕೃತ ಹೋಲ್ಡಿಂಗ್ಸ್‌­ಗಳಿವೆ ಎಂದು ಮೇಯರ್‌ ಹೇಳಿದ್ದಾರೆ. ಹಾಗಾದರೆ ಅನಧಿಕೃತ ಹೋಲ್ಡಿಂಗ್ಸ್‌ ನಿಯಂತ್ರಿಸದ ಅಧಿಕಾರಿಗಳ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಎಂದು ಕೇಳಿದರು.

‘ಮುಖ್ಯಮಂತ್ರಿಗಳ ಮೌಖಿಕ ಆದೇಶ­ವಿದೆ ಎಂದು ಹೇಳಿ ಜ.28ರಂದು ಬಿಬಿ­ಎಂಪಿ ಅಧಿಕಾರಿಗಳು ಮಾಗಡಿ ರಸ್ತೆಯ ಮೂರು ಡಿಜಿಟಲ್ ಮುದ್ರಣ ಸಂಸ್ಥೆಯ ಮಳಿಗೆಗಳಿಗೆ ಬೀಗ ಹಾಕಿದ್ದಾರೆ. ಪರವಾನಗಿ ಪಡೆದಿರುವ ಸಂಸ್ಥೆಗಳಿಗೆ ಬೀಗ ಹಾಕಲು ಅಧಿಕಾರಿಗಳಿಗೆ ಯಾವ ಅಧಿಕಾರ ಇದೆ. ಇಂತಹ ದೌರ್ಜನ್ಯವನ್ನು ಕೈಬಿಟ್ಟು, ಅನಧಿಕೃತ ಫ್ಲೆಕ್ಸ್‌, ಬ್ಯಾನರ್, ಹೋಲ್ಡಿಂಗ್ಸ್‌ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದರು.

ಸರ್ಕಾರ ಫ್ಲೆಕ್ಸ್ ನಿಷೇಧಿಸುವ ನಿರ್ಧಾರವನ್ನು ಕೈಬಿಡಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಹೋರಾಟ ನಡೆಸಲಾ­ಗು­ವುದು ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.