ADVERTISEMENT

ಬಂದ್‌ನಿಂದ ಜನರಿಗೆ ತೀವ್ರ ತೊಂದರೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2015, 20:36 IST
Last Updated 18 ಏಪ್ರಿಲ್ 2015, 20:36 IST
ಬಂದ್‌ನಿಂದ ಜನರಿಗೆ ತೀವ್ರ ತೊಂದರೆ
ಬಂದ್‌ನಿಂದ ಜನರಿಗೆ ತೀವ್ರ ತೊಂದರೆ   

ಬೆಂಗಳೂರು: ಮೇಕೆದಾಟು ಯೋಜನೆಗೆ ಶೀಘ್ರ ಚಾಲನೆ ನೀಡಬೇಕೆಂದು ಆಗ್ರಹಿಸಿ ಕನ್ನಡ ಒಕ್ಕೂಟ ಶನಿವಾರ ಕರೆ ನೀಡಿದ್ದ ‘ಕರ್ನಾಟಕ ಬಂದ್‌’ನಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು. ಬಂದ್‌ ನಿಮಿತ್ತ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಆಟೊ ಹಾಗೂ ಕ್ಯಾಬ್‌ ಸೇವೆ ಸ್ಥಗಿತಗೊಂಡಿದ್ದರಿಂದ ಜನ ಹೋಗಬೇಕಿದ್ದ ಸ್ಥಳಗಳಿಗೆ ಹೋಗಲು ಆಗಲಿಲ್ಲ.

ವಿವಿಧ ಸ್ಥಳಗಳಿಂದ ಸಿಟಿ ರೈಲು ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ರೈಲ್ವೆ ನಿಲ್ದಾಣದಲ್ಲೇ ಠಿಕಾಣಿ ಹೂಡಿದ್ದರು. ಬಸ್‌ ನೆಚ್ಚಿಕೊಂಡವರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಸಂಜೆಯವರೆಗೆ ಬಸ್‌ ಓಡಾಟ ಸ್ಥಗಿತಗೊಂಡಿರುವ ವಿಷಯ ತಿಳಿದು ಕೆಲವರು ನಿಲ್ದಾಣದಲ್ಲಿದ್ದ ಬೆಂಚ್‌ಗಳ ಮೇಲೆ ಮಲಗಿದರೆ, ಮತ್ತೆ ಕೆಲವರು ತಮ್ಮ ಜೊತೆಗೆ ತಂದಿದ್ದ ಬ್ಯಾಗ್‌ಗಳನ್ನು ತಲೆ ಕೆಳಗೆ ಇಟ್ಟುಕೊಂಡು ಮಲಗಿದ್ದರು.

ಕೆಲವು ಯುವಕರು ದಿನಪತ್ರಿಕೆ, ಪುಸ್ತಕ ಹಾಗೂ ಎಫ್‌ಎಂ ಮೊರೆ ಹೋಗಿದ್ದರು. ಇನ್ನು ಕೆಲವರು ತಮ್ಮ ಜೊತೆಗೆ ತಂದಿದ್ದ ಬುತ್ತಿ ಬಿಚ್ಚಿಕೊಂಡು ಅಲ್ಲೆ ತಿನ್ನುತ್ತಿದ್ದರು. ಹೋಟೆಲ್‌ಗಳು ಮುಚ್ಚಿದ್ದರಿಂದ ಬೇರೆ ಊರುಗಳಿಂದ ಬಂದಿದ್ದ ಬಹುತೇಕ ಜನ
ಬೆಳಿಗ್ಗೆಯ ಉಪಾಹಾರವೂ ಸಿಗಲಿಲ್ಲ. ಇದರಿಂದ ಅವರ ಮುಖಗಳು ಬಾಡಿ ಹೋಗಿದ್ದವು. ಸಂಜೆವರೆಗೆ ಕಾಯುವುದು ಬೇಡ ಎಂದು ಕೆಲವು ಯುವಕರು ಹೆಗಲಿಗೆ ಬ್ಯಾಗ್‌ ಏರಿಸಿಕೊಂಡು ಕಾಲ್ನಡಿಗೆಯಲ್ಲಿ ಹೋಗುವುದು ಕಂಡು ಬಂತು. ಕೆಲವರು ಸ್ನೇಹಿತರು, ಸಂಬಂಧಿಕರನ್ನು ಕರೆಸಿಕೊಂಡು ಅವರ ವಾಹನಗಳಲ್ಲಿ ತೆರಳಿದರು.

‘ಬಂದ್‌ ಬಗ್ಗೆ ನಿನ್ನೆಯೇ ತಿಳಿದಿತ್ತು. ಮುಂಜಾನೆ ಬಸ್‌ಗಳು ಹೊರಡಬಹುದು ಎಂದು ಬೆಳಿಗ್ಗೆ 6ಗಂಟೆಗೆ ಬಸ್‌ ನಿಲ್ದಾಣಕ್ಕೆ ಬಂದಿದ್ದೆ. ಆದರೆ, ಅಷ್ಟಾರಲ್ಲಾಗಲೇ ಬಸ್‌ ಸಂಚಾರ ನಿಂತು ಹೋಗಿತ್ತು’ ಎಂದು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ನಿಂತಿದ್ದ ಹಾಸನದ ಮಂಜು ತಿಳಿಸಿದರು.

‘ವಿಚಾರಿಸಿದರೆ ಸಂಜೆ 6ರ ನಂತರ ಬಸ್‌ ಓಡಾಟ ಶುರುವಾಗುತ್ತದೆ ಎಂದು ಹೇಳಿದ್ದಾರೆ. ಇಲ್ಲೇ ಕುಳಿತುಕೊಳ್ಳುವುದು ಬಿಟ್ಟರೆ ಅನ್ಯ ಮಾರ್ಗವಿಲ್ಲ’ ಎಂದು ನೋವು ತೋಡಿಕೊಂಡರು. ‘ನಗರದ ಬೊಮ್ಮನಹಳ್ಳಿಯಲ್ಲಿ ನನ್ನ ಸಂಬಂಧಿಕರು ವಾಸವಾಗಿದ್ದಾರೆ. ಅವರನ್ನು ನೋಡಲು ರಾಜಸ್ತಾನದಿಂದ ಬಂದಿದ್ದೇನೆ. ಆದರೆ, ಬಸ್‌ ಬಂದ್‌ ಇರುವುದರಿಂದ ಇಲ್ಲೇ ಕೂತಿದ್ದೇನೆ’ ಎಂದು ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿ ಕುಳಿತಿದ್ದ ಜೈಪುರದ ವಿಷ್ಣು ತಿಳಿಸಿದರು.

‘ಸಂಜೆ ಬಸ್‌ ಸಂಚಾರ ಶುರುವಾಗುತ್ತದೆ ಎಂದು ತಿಳಿಸಿದ್ದಾರೆ. ಈಗ ಬೇರೆ ಮಾರ್ಗ ಇಲ್ಲದ ಕಾರಣ ಅಲ್ಲಿಯವರೆಗೆ ಪುಸ್ತಕ ಓದಿ ಕಾಲ ಕಳೆಯಲು ನಿರ್ಧರಿಸಿದ್ದೇನೆ’ ಎಂದು ಬೇಸರದಿಂದಲೇ ಹೇಳಿದರು. ‘ಇಂದು ಬೆಳಿಗ್ಗೆ ಮುಂಬೈನಿಂದ ಇಲ್ಲಿಗೆ ಬಂದಿದ್ದೇನೆ. ಇಲ್ಲಿಗೆ ಬಂದ ನಂತರ ಬಂದ್‌ ವಿಷಯ ತಿಳಿಯಿತು. ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ನನ್ನ ಮಗ ಇದ್ದಾನೆ. ಆತನನ್ನು ನೋಡಲು ಬಂದಿದ್ದೇನೆ’ ಎಂದು ಸಿಟಿ ರೈಲು ನಿಲ್ದಾಣದಲ್ಲಿ ಕುಳಿತಿದ್ದ ದೇವೇಂದ್ರ ತಿಳಿಸಿದರು.

‘ಬಸ್‌, ಆಟೊ ಏನೂ ಸಂಚರಿಸುತ್ತಿಲ್ಲ. ವಿಚಾರಿಸಿದರೆ ಸಂಜೆ ಬಸ್‌ ಓಡಾಟ ಶುರುವಾಗುತ್ತದೆ ಎಂದಿದ್ದಾರೆ. ಅಲ್ಲಿಯವರೆಗೆ ಏನು ಮಾಡಬೇಕು ಎಂಬುದು ತೋಚುತ್ತಿಲ್ಲ’ ಎಂದರು. ‘ಮಧ್ಯಾಹ್ನ 2 ಗಂಟೆಗೆ ಪ್ರಶಾಂತಿ ಎಕ್ಸ್‌ಪ್ರೆಸ್‌ ರೈಲಿನ ಮೂಲಕ ಒಡಿಶಾಕ್ಕೆ ಹೋಗಬೇಕಿದೆ. ಪತ್ರಿಕೆಗಳ ಮೂಲಕ ಬಂದ್‌ ಇರುವ ವಿಷಯ ಗೊತ್ತಾಯಿತು. ಆದಕಾರಣ ನೆರೆಮನೆಯವರ ಸಹಾಯ ಪಡೆದು ಬೆಳಿಗ್ಗೆ 5ಗಂಟೆಗೆ ರೈಲು ನಿಲ್ದಾಣಕ್ಕೆ ಬಂದು ಕೂತಿದ್ದೇನೆ’ ಎಂದು ಭುವನೇಶ್ವರದ ಸತ್ಯವಾನ್‌ ಮುನಿ ತಿಳಿಸಿದರು.

‘ತಿಪಟೂರಿನಿಂದ ಬೆಳಿಗ್ಗೆ 10.30ಕ್ಕೆ ರೈಲಿನ ಮೂಲಕ ನಗರಕ್ಕೆ ಬಂದೆ. ಬೊಮ್ಮನಹಳ್ಳಿಗೆ ಹೋಗಬೇಕಾಗಿದೆ.  ಸಂಜೆಯವರೆಗೆ ಬಸ್‌ ಓಡಾಟ ಶುರುವಾಗುವುದಿಲ್ಲ ಎಂಬುದು ಗೊತ್ತಾಯಿತು. ಇದರಿಂದ ಇಲ್ಲಿ ಕುತಿದ್ದೇವೆ’ ಎಂದು ಬೊಮ್ಮನಹಳ್ಳಿ ನಿವಾಸಿ ಕಲಾ ಗೋಳು ತೋಡಿಕೊಂಡರು.

‘ಮನೆಯಲ್ಲಿ ತಾಯಿ, ಹೆಂಡತಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ನನ್ನ ಗಳಿಕೆಯಲ್ಲೇ ಇಡೀ ಕುಟುಂಬ ನಡೆಯುತ್ತಿದೆ. ಇಂದು ಏನಾದರೂ ಗಳಿಸಿಕೊಂಡು ಹೋಗದಿದ್ದರೆ ಎಲ್ಲರೂ ಉಪವಾಸ ಇರಬೇಕಾಗುತ್ತದೆ’ ಎಂದು ಆಟೊ ಚಾಲಕ ರಾಮಯ್ಯ ತಿಳಿಸಿದರು.
‘ಕನಿಷ್ಠ ₹200 ಹಣ ಗಳಿಸುವವರೆಗೆ ಆಟೊ ಓಡಿಸಲು ನಿರ್ಧರಿಸಿದ್ದೇನೆ. ಬಂದ್‌ಗೆ ನನ್ನ ಬೆಂಬಲ ಕೂಡ ಇದೆ. ಆದರೆ, ಹೊಟ್ಟೆಪಾಡಿಗಾಗಿ ಆಟೊ ಓಡಿಸುವ ಅನಿವಾರ್ಯತೆ ಇದೆ’ ಎಂದು ನೋವಿನಿಂದ ಹೇಳಿದರು.

ಪೊಲೀಸರಿಂದ ಬಿಗಿ ಭದ್ರತೆ
ಬೆಂಗಳೂರು:
ಬಂದ್ ವೇಳೆ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ನಗರ ಪೊಲೀಸರು ಭದ್ರತೆ ಒದಗಿಸಿದರು. ತಮಿಳು ಭಾಷಿಗರು ಹೆಚ್ಚಾಗಿ ನೆಲೆಸಿದ್ದ  ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಕೆಎಸ್‌ಆರ್‌ಪಿ ತುಕಡಿಗಳನ್ನು ಹಾಕಲಾಗಿತ್ತು. ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ನಡೆದ ಮೆರವಣಿಗೆಯದ್ದಕ್ಕೂ ಪೊಲೀಸರನ್ನು ನಿಯೋಜಿಸಲಾಗಿತ್ತು. ಇಡೀ ಮೆರವಣಿಗೆಯನ್ನು ಸಿಬ್ಬಂದಿ ವಿಡಿಯೊ ಚಿತ್ರೀಕರಣ ಮಾಡಿಕೊಂಡರು.

‘ಕೆಎಸ್‌ಆರ್‌ಪಿ, ಸಿಎಆರ್, ಗೃಹರಕ್ಷಕ ದಳ, ಕ್ಷಿಪ್ರ ಕಾರ್ಯ ಪಡೆ, ರಾಜ್ಯ ಕೈಗಾರಿಕಾ ಭದ್ರತಾ ಪಡೆ, ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ಪೊಲೀಸರು ಸೇರಿದಂತೆ 15 ಸಾವಿರಕ್ಕೂ ಹೆಚ್ಚಿ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ಬಳಸಿಕೊಳ್ಳಲಾಯಿತು. ತಮಿಳುನಾಡಿನಿಂದ ನಗರಕ್ಕೆ ಬರುತ್ತಿದ್ದ ಪ್ರತಿ ವಾಹನವನ್ನೂ ಗಡಿ ಭಾಗದಲ್ಲಿ ತಪಾಸಣೆಗೆ ಒಳಪಡಿಸಲಾಯಿತು’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

‘ಅಂಗಡಿ–ಮುಂಗಟ್ಟುಗಳ ಮಾಲೀಕರು ಸ್ವಯಂಪ್ರೇರಿತರಾಗಿ ವಹಿವಾಟು ಸ್ಥಗಿತಗೊಳಿಸಿದ್ದರು. ಬಸ್‌ ಸಂಚಾರ ಕೂಡ ಸ್ಥಗಿತಗೊಂಡಿದ್ದರಿಂದ ಬಂದ್ ಶಾಂತಿಯುತವಾಗಿ ನಡೆಯಿತು’ ಎಂದರು.

ಬೆಂಕಿ ಹಚ್ಚಲು ಯತ್ನ: ‘ಮುಂಜಾಗ್ರತಾ ಕ್ರಮವಾಗಿ ಶುಕ್ರವಾರವೇ 500 ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು. ಯಶವಂತಪುರದ ಬಳಿ ಕೆಲ ದುಷ್ಕರ್ಮಿಗಳು ಟೈರ್‌ಗಳಿಗೆ ಬೆಂಕಿ ಹಚ್ಚಲು ಯತ್ನಿಸಿದ್ದನ್ನು ಬಿಟ್ಟರೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ’ ಎಂದು ನಗರ ಪೊಲೀಸ್ ಕಮಿಷನರ್ ಎಂ.ಎನ್. ರೆಡ್ಡಿ ತಿಳಿಸಿದರು.

ಪೊಲೀಸರಿಂದ ಹಲ್ಲೆ: ಆರೋಪ
ರಸ್ತೆ ಮಧ್ಯೆ ಟೈರ್‌ಗಳಿಗೆ ಬೆಂಕಿ ಹಚ್ಚಿದ ಕಾರಣಕ್ಕೆ ಈಶಾನ್ಯ ವಿಭಾಗದ ಡಿಸಿಪಿ ವಿಕಾಸ್‌ಕುಮಾರ್ ವಿಕಾಸ್ ಮತ್ತು ಯಲಹಂಕ ಠಾಣೆ ಇನ್‌ಸ್ಪೆಕ್ಟರ್‌ ರಾಜೀವ್‌ ಅವರು, ಕರ್ನಾಟಕ ರಕ್ಷಣಾ ವೇದಿಕೆ ವಿದ್ಯಾರ್ಥಿ ಘಟಕದ ಮಂಜುನಾಥ್, ಚಂದ್ರು, ನವೀನ್ ಮತ್ತು ಸಾಗರ್ ಎಂಬುವರನ್ನು ಠಾಣೆಗೆ ಎಳೆದೊಯ್ದು ಬಟ್ಟೆ ಬಿಚ್ಚಿಸಿ ಹಲ್ಲೆ ನಡೆಸಿದರು ಎಂದು ಕರವೇ ಮುಖಂಡರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT