ADVERTISEMENT

ಬಜೆಟ್‌: ಹೆಚ್ಚಿದೆ ರಾಜಧಾನಿಯ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 19:57 IST
Last Updated 14 ಮಾರ್ಚ್ 2017, 19:57 IST
ಬಜೆಟ್‌: ಹೆಚ್ಚಿದೆ ರಾಜಧಾನಿಯ ನಿರೀಕ್ಷೆ
ಬಜೆಟ್‌: ಹೆಚ್ಚಿದೆ ರಾಜಧಾನಿಯ ನಿರೀಕ್ಷೆ   

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಮಂಡಿಸಲಿರುವ ಬಜೆಟ್‌ ಬಗ್ಗೆ ರಾಜಧಾನಿಯ ಜನತೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ವಿಧಾನಸಭಾ ಚುನಾವಣೆಗೆ ಇನ್ನು ಒಂದು ವರ್ಷ ಮಾತ್ರ ಬಾಕಿ ಇರುವುದರಿಂದ ಮುಖ್ಯಮಂತ್ರಿಯವರು ಜನಪ್ರಿಯ ಯೋಜನೆಗಳನ್ನು ಘೋಷಿಸಬಹುದು. ನಗರದ ವ್ಯಾಪ್ತಿಯಲ್ಲಿ 28 ವಿಧಾನಸಭಾ ಕ್ಷೇತ್ರಗಳಿರುವುದರಿಂದ   ಅವರು ಕಳೆದ ಬಾರಿಯ ಬಜೆಟ್‌ನಲ್ಲಿ  ನೀಡಿದ್ದಕ್ಕಿಂತ (₹ 5ಸಾವಿರ ಕೋಟಿ) ಹೆಚ್ಚಿನ ಅನುದಾನವನ್ನು ನಗರದ  ಮೂಲಸೌಕರ್ಯ ಅಭಿವೃದ್ಧಿಗೆ ಒದಗಿಸಬಹುದು ಎಂಬ ನಿರೀಕ್ಷೆ ಇದೆ.

‘ಸರ್ಕಾರ ಸಾರ್ವಜನಿಕ ಸಾರಿಗೆಯನ್ನು ಬಲಪಡಿಸಬೇಕು. ಜೊತೆಗೆ ಬಸ್‌ ಪ್ರಯಾಣದರವನ್ನು ಕಡಿಮೆ ಮಾಡಬೇಕು. ಮೆಟ್ರೊ ಯೋಜನೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಬೇಕು’ ಎಂದು  ನಗರ ಯೋಜನಾ ತಜ್ಞ ವಿ.ರವಿಚಂದರ್‌ ಒತ್ತಾಯಿಸಿದರು.
‘ಸುಸಜ್ಜಿತ ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸಬೇಕು. ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ಅನುದಾನ ಒದಗಿಸಬೇಕು. ನಗರದಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾಗಳ ಸಂಖ್ಯೆ ಹೆಚ್ಚಿಸಬೇಕು’ ಎಂದು ಅವರು ಸಲಹೆ ನೀಡಿದರು. 

ADVERTISEMENT

‘ನಗರದಲ್ಲಿ ದಿನದ 24 ತಾಸು ವಿದ್ಯುತ್‌ ಲಭ್ಯ ಇರುವಂತೆ ನೋಡಿಕೊಳ್ಳಬೇಕು. ಇಲ್ಲಿನ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ಹೆಚ್ಚು ಅನುದಾನ ನೀಡಬೇಕು. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು. ಆಸ್ಪತ್ರೆಗಳ ಸುಧಾರಣೆಗೆ ಕ್ರಮಕೈಗೊಳ್ಳಬೇಕು’ ಎಂದು ಎಚ್‌ಎಂಟಿ ಬಡಾವಣೆಯ ಎಚ್‌.ಎನ್‌.ಮನೋಹರ್‌ ಒತ್ತಾಯಿಸಿದರು.

ಉಪನಗರ ರೈಲು ಯೋಜನೆಗೆ ಸಿಗುವುದೇ ಅನುದಾನ

ನನೆಗುದಿಗೆ ಬಿದ್ದಿರುವ ಉಪನಗರ ರೈಲು ಯೋಜನೆ ಬಲಪಡಿಸಲು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ವಿಶೇಷ ಅನುದಾನ ಒದಗಿಸಿಲ್ಲ.  ರಾಜ್ಯ ಸರ್ಕಾರವಾದರೂ ಇದಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂಬ ನಿರೀಕ್ಷೆಯನ್ನು ರೈಲ್ವೆ ಹೋರಾಟ ಗಾರರು ಹೊಂದಿದ್ದಾರೆ.

₹9  ಸಾವಿರ ಕೋಟಿ ವೆಚ್ಚದಲ್ಲಿ ಉಪನಗರ ರೈಲು ಯೋಜನೆ ಜಾರಿಗೊಳಿಸುವ ಪ್ರಸ್ತಾವವನ್ನು ರೈಲ್ವೆ ಇಲಾಖೆ ಸಿದ್ಧಪಡಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವೆಚ್ಚವನ್ನು ಹಂಚಿಕೊಂಡು  ಯೋಜನೆಯನ್ನು ಅನುಷ್ಠಾನಗೊಳಿಸಬೇಕಾಗಿದೆ.   ಮೊದಲ ಹಂತದ ಅನುಷ್ಠಾನಕ್ಕೆ ₹2,500 ಕೋಟಿ ಬೇಕಾಗುತ್ತದೆ. ಉಪನಗರ ಯೋಜನೆ ಅಡಿ 15 ರೈಲುಗಳನ್ನು ಮೆಮು ರೈಲುಗಳಾಗಿ ಪರಿವರ್ತಿಸಲು ₹360 ಕೋಟಿ ಅಗತ್ಯವಿದೆ. ರಾಜ್ಯ ಸರ್ಕಾರ ಈ ಯೋಜನೆಗೆ ಹೆಚ್ಚಿನ ಅನುದಾನ ನೀಡಿದರೆ ಕೇಂದ್ರದ ಪಾಲನ್ನು  ಪಡೆಯುವುದು ಸುಲಭವಾಗಲಿದೆ ಎನ್ನುತ್ತಾರೆ ರೈಲ್ವೆ ಹೋರಾಟಗಾರರು.

ಹೊಸ ಕರಡು ನೀತಿ ಪ್ರಕಾರ ಯೋಜನೆಯ ಒಟ್ಟು ವೆಚ್ಚದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ತಲಾ ಶೇ 20ರಷ್ಟು ಮೊತ್ತವನ್ನು ಭರಿಸಬೇಕು. ಉಳಿದ ಶೇ 60ರಷ್ಟು ಸಾಲ ಪಡೆಯಬೇಕಾಗುತ್ತದೆ.

‘ಉಪನಗರ ಯೋಜನೆ ಮೊದಲ ಹಂತಕ್ಕೆ ₹ 500 ಕೋಟಿಯನ್ನಾದರೂ ಬಜೆಟ್‌ನಲ್ಲಿ ಒದಗಿಸಬೇಕು. ರೈಲು ಮೆಟ್ರೊ ಹಾಗೂ ಬಿಎಂಟಿಸಿ  ನಡುವೆ ಪರಸ್ಪರ ಸಂಪರ್ಕ ಕಲ್ಪಿಸಲು ಅನುದಾನ ನೀಡಬೇಕು’ ಎಂದು   ಪ್ರಜಾರಾಗ್‌ ಸಂಘಟನೆಯ ಸಂಜೀವ ದ್ಯಾಮಣ್ಣವರ್‌ ಒತ್ತಾಯಿಸಿದರು.

‘ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ದೇವನಹಳ್ಳಿ ನಿಲ್ದಾಣದ ನಡುವೆ  ಕೆಲವು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಿ, ಟ್ರಂಪೆಟ್‌ ಬಳಿ ಹೊಸ ನಿಲ್ದಾಣ ನಿರ್ಮಿಸಿದರೆ ವಿಮಾನನಿಲ್ದಾಣಕ್ಕೆ ತಲುಪಲು ಜನ ರೈಲನ್ನು ಬಳಸುತ್ತಾರೆ. ಇದಕ್ಕಾಗಿ ಯಲಹಂಕ ನಿಲ್ದಾಣದಿಂದ ದೇವನಹಳ್ಳಿ ನಿಲ್ದಾಣದ ನಡುವೆ ಜೋಡಿ ಮಾರ್ಗ ನಿರ್ಮಿಸಲು ಹಾಗೂ ವಿದ್ಯುತ್‌ ಮಾರ್ಗ ಅಳವಡಿಸಲು ₹ 500 ಕೋಟಿ  ಮೀಸಲಿಡಬೇಕು’ ಎಂದರು.  ‘ಸಂಗೊಳ್ಳಿ ರಾಯಣ್ಣ  ರೈಲು ನಿಲ್ದಾಣದಲ್ಲಿ ವಿಪರೀತ ಒತ್ತಡ ಇದೆ. ಇಲ್ಲಿ  ಬಿನ್ನಿಮಿಲ್‌ ಕಡೆಯ ಜಾಗವನ್ನು ಬಳಸಿಕೊಂಡು ಹೆಚ್ಚುವರಿ ಪ್ಲ್ಯಾಟ್‌ಫಾರ್ಮ್‌ಗಳನ್ನು ನಿರ್ಮಿಸಬೇಕು.  ಇದಕ್ಕೂ ಅನುದಾನ ನೀಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.