ADVERTISEMENT

ಬಡಮಕ್ಕಳಿಗೆ ಊಟದ ಆಮಿಷ ಒಡ್ಡಿ ಅತ್ಯಾಚಾರ!

10 ದಿನಗಳಲ್ಲಿ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪಾತಕಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 20:06 IST
Last Updated 14 ಮಾರ್ಚ್ 2017, 20:06 IST
ಆರೋಪಿಯು ವಿದ್ಯಾರ್ಥಿನಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗುತ್ತಿರುವ ದೃಶ್ಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿರುವುದು
ಆರೋಪಿಯು ವಿದ್ಯಾರ್ಥಿನಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗುತ್ತಿರುವ ದೃಶ್ಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿರುವುದು   

ಬೆಂಗಳೂರು: ಮೃಷ್ಟಾನ್ನ ಭೋಜನ ನೀಡುವುದಾಗಿ ಬಡಮಕ್ಕಳನ್ನು ಅಪಹರಿಸಿ, ನಿರ್ಜನ ಪ್ರದೇಶದಲ್ಲಿ ಅವರ ಮೇಲೆ ಅತ್ಯಾಚಾರ ಎಸಗುತ್ತಿದ್ದ ಕುಖ್ಯಾತ ಪಾತಕಿ ಮಲ್ಲಿಕಾರ್ಜುನ ಅಲಿಯಾಸ್ ಹೋರಿ (25) ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಮಾರ್ಚ್ 3ರಂದೇ ರಾಜರಾಜೇಶ್ವರಿನಗರ ಸಮೀಪದ ಕಾಳೇಗೌಡ ಲೇಔಟ್‌ನಲ್ಲಿ ಸಾರ್ವಜನಿಕರು ಈತನನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಆದರೆ, ಇಬ್ಬರು ಪೊಲೀಸರು ಬೈಕ್‌ನಲ್ಲಿ ಕೂರಿಸಿಕೊಂಡು ಠಾಣೆ ಹತ್ತಿರ ಕರೆದೊಯ್ದಾಗ, ಅವರನ್ನು ತಳ್ಳಿ ಆರೋಪಿ ಓಡಿ ಹೋಗಿದ್ದ. ನಂತರ ಈತನ ಪತ್ತೆಗೆ ಮೂರು ವಿಶೇಷ ತಂಡಗಳು ರಚನೆಯಾಗಿದ್ದವು.

ಕಲಬುರ್ಗಿಯ ಮಲ್ಲಿಕಾರ್ಜುನ, 4 ವರ್ಷಗಳ ಹಿಂದೆ ನಗರಕ್ಕೆ ಬಂದು ಸುಂಕದಕಟ್ಟೆಯಲ್ಲಿ ನೆಲೆಸಿದ್ದ. ಪೀಣ್ಯದ ಸಿದ್ಧ ಉಡುಪು ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ, ಇತ್ತೀಚೆಗೆ ಕೆಲಸ ತೊರೆದು ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ. ಹತ್ತು ದಿನಗಳ ಅಂತರದಲ್ಲಿ ಈತ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಕದ್ದ ಬೈಕ್‌ನಲ್ಲಿ ಸುತ್ತಾಟ:   ‘ಬನಶಂಕರಿ 3ನೇ ಹಂತದಲ್ಲಿ ಬೈಕ್ ಕದ್ದಿದ್ದ ಆರೋಪಿ, ಶಾಲೆಗಳು ಬಿಡುವ ಸಮಯದಲ್ಲಿ ನಗರದ ವಿವಿಧ ರಸ್ತೆಗಳಲ್ಲಿ ಸುತ್ತಾಡುತ್ತಿದ್ದ. ಈ ವೇಳೆ ಒಂಟಿಯಾಗಿ  ನಿಂತಿರುವ ವಿದ್ಯಾರ್ಥಿನಿಗೆ ಮೃಷ್ಟಾನ್ನ ಭೋಜನ ಅಥವಾ ಚಾಕೋಲೆಟ್‌ನ ಆಮಿಷ ಒಡ್ಡುತ್ತಿದ್ದ. ಬಳಿಕ ಬೈಕ್‌ನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದೇ ಫೆ.23ರ ಸಂಜೆ 5 ಗಂಟೆ ಸುಮಾರಿಗೆ ಸಂಜಯನಗರದ ಗೆದ್ದಲಹಳ್ಳಿಗೆ ತೆರಳಿದ್ದ ಆರೋಪಿ, ಮನೆ ಬಳಿ ಆಟವಾಡುತ್ತಿದ್ದ 11 ವರ್ಷದ ಬಾಲಕಿಯನ್ನು ಕಂಡಿದ್ದ. ನಂತರ ಆಕೆಯ ಹತ್ತಿರ ಹೋಗಿ, ‘ಪಕ್ಕದ ರಸ್ತೆಯಲ್ಲಿ ನಾನು ಮನೆ ಕಟ್ಟಿಸಿದ್ದೇನೆ. ಇಂದು ಗೃಹಪ್ರವೇಶ ನೆರವೇರಿತು. ಪಾತ್ರೆಗಳನ್ನು ತೆಗೆದುಕೊಂಡು ಬಂದರೆ, ಊಟ ಕೊಟ್ಟು ಕಳುಹಿಸುತ್ತೇನೆ’ ಎಂದು ನಂಬಿಸಿದ್ದ.

ಅದಕ್ಕೆ ಒಪ್ಪಿದ ಬಾಲಕಿ, ನೆರೆಮನೆಯ ಇನ್ನೊಬ್ಬ ಹುಡುಗನನ್ನು ಕರೆದುಕೊಂಡು  ಆರೋಪಿಯ ಜತೆ ಬೈಕ್‌ನಲ್ಲಿ ತೆರಳಿದ್ದಳು. ಮಾರ್ಗಮಧ್ಯೆ ಬೈಕ್ ನಿಲ್ಲಿಸಿದ ಆತ, ‘ನೀನು ಇಲ್ಲೇ ಇರು. ಈಕೆಯ ಹತ್ತಿರ ಊಟ ಕೊಟ್ಟು ಕಳುಹಿಸುತ್ತೇನೆ’ ಎಂದು ಆ ಹುಡುಗನನ್ನು ಕೆಳಗಿಳಿಸಿದ್ದ.
ಆಕೆಯನ್ನು ರಾಜಾನುಕುಂಟೆ ಹತ್ತಿರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ ಆತ, ‘ಅತ್ತರೆ ವಾಪಸ್ ಮನೆಗೆ ಬಿಡುವುದಿಲ್ಲ’ ಎಂದು ಹೆದರಿಸಿದ್ದ. ನಂತರ ಚಾಕೋಲೆಟ್ ಕೊಟ್ಟು, ತಡರಾತ್ರಿ ಮನೆ ಸಮೀಪ ಬಿಟ್ಟು ಹೋಗಿದ್ದ. ಆಕೆ ಪೋಷಕರಿಗೆ ವಿಷಯ ತಿಳಿಸಿದ್ದಳು. ಈ ಸಂಬಂಧ ಸಂಜಯನಗರ ಠಾಣೆಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೊ ) ಅಡಿ ಪ್ರಕರಣ ದಾಖಲಾಗಿತ್ತು.
ಮತ್ತೊಂದು ಕೃತ್ಯ:  ‘ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಆರೋಪಿಯ ಚಹರೆ ಆಧರಿಸಿ   ಸಂಜಯನಗರ ಪೊಲೀಸರು ತನಿಖೆ ನಡೆಸುತ್ತಿರುವಾಗಲೇ, ಮಾರ್ಚ್ 2ರಂದು ರಾಜರಾಜೇಶ್ವರಿನಗರ ಸಮೀಪದ ನರಸಿಂಹಸ್ವಾಮಿ ಗುಡ್ಡೆ ಪ್ರದೇಶದಲ್ಲಿ ಅಂಥದ್ದೇ ಮತ್ತೊಂದು ಪ್ರಕರಣ ವರದಿಯಾಯಿತು’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

‘ಸಂಜೆ 5.30ರ ಸುಮಾರಿಗೆ ಟ್ಯೂಷನ್‌ಗೆ ಹೋಗುತ್ತಿದ್ದ 5ನೇ ತರಗತಿ ವಿದ್ಯಾರ್ಥಿಯನ್ನು ಊಟ ಕೊಡುವುದಾಗಿ ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದ ಯುವಕ, ನಿರ್ಜನ ಪ್ರದೇಶದಲ್ಲಿ ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಎರಡೂ ಪ್ರಕರಣಗಳಲ್ಲಿ ಸಾಮ್ಯತೆ ಇದ್ದುದರಿಂದ ಒಬ್ಬನೇ ಆರೋಪಿ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಯಿತು.’

‘ಸಂಜಯನಗರ ಪೊಲೀಸರು ತಮ್ಮ ಬಳಿ ಇದ್ದ ಆರೋಪಿಯ ಚಹರೆಯನ್ನು ಈ ಬಾಲಕಿಗೆ ತೋರಿಸಿದಾಗ ‘ನನ್ನನ್ನು ಕರೆದುಕೊಂಡು ಹೋಗಿದ್ದು ಇದೇ ಅಂಕಲ್’ ಎಂದು ಆಕೆ ಹೇಳಿದಳು.’

ಸಿಂಹದ ಗುರುತು: ‘ಆರೋಪಿಯ ಚಹರೆ ಮುದ್ರಿಸಿ ಸಂಜಯನಗರ ಹಾಗೂ ರಾಜರಾಜೇಶ್ವರಿನಗರ ಠಾಣಾ ವ್ಯಾಪ್ತಿಯ ನಿವಾಸಿಗಳಿಗೆ ಹಂಚಿದ್ದೆವು. ಕಳವು ಮಾಡಿದ್ದ ಬೈಕ್‌ ಮೇಲೆ ಆತ ಸಿಂಹದ ಸ್ಟಿಕ್ಕರ್ ಅಂಟಿಸಿದ್ದ. ಆ ವಿವರವನ್ನೂ ಜನರಿಗೆ ಕೊಟ್ಟು, ಸುಳಿವು ಸಿಕ್ಕರೆ
ಠಾಣೆಗೆ ಕರೆ ಮಾಡುವಂತೆ ಮನವಿ ಮಾಡಿದ್ದೆವು. ಮಾರ್ಚ್ 3ರಂದು ಆತ ಬೈಕ್‌ನಲ್ಲಿ ಕಾಳೇಗೌಡಲೇಔಟ್‌ನ ಪ್ರೇಯಸಿ ಮನೆಗೆ ತೆರಳಿದ್ದ. ಸ್ಟಿಕ್ಕರ್ ಹಾಗೂ ಚಹರೆಯಿಂದ ಗುರುತು ಹಿಡಿದ ಸ್ಥಳೀಯರು, ಆರೋಪಿಯನ್ನು ಹಿಡಿದಿದ್ದರು’ ಎಂದು ಅಧಿಕಾರಿಗಳು ಹೇಳಿದರು.

‘ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ತೆರಳಿದ ಎಸ್‌ಐ ಹಾಗೂ ಕಾನ್‌ಸ್ಟೆಬಲ್‌, ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಠಾಣೆ ಹತ್ತಿರ ಬರುತ್ತಿದ್ದಂತೆಯೇ ಆರೋಪಿ ಸಿಬ್ಬಂದಿಯನ್ನು ತಳ್ಳಿ ಪರಾರಿಯಾಗಿದ್ದ. ಕೊನೆಗೆ ಮೊಬೈಲ್ ಕರೆಗಳ ವಿವರ (ಸಿಡಿಆರ್) ಆಧರಿಸಿ ತನಿಖೆ ನಡೆಸಿದಾಗ ಆತ ಮೊದಲು ಪೀಣ್ಯದ ಗಾರ್ಮೆಂಟ್ಸ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ವಿಷಯ ತಿಳಿಯಿತು. ಅಲ್ಲಿಗೆ ಹೋಗಿ ಪೂರ್ವಾಪರ ತಿಳಿದುಕೊಂಡೆವು. ಅಂತಿಮವಾಗಿ ಕಲಬುರ್ಗಿಯಲ್ಲಿ ನಮ್ಮ ಬಲೆಗೆ ಬಿದ್ದ’ ಎಂದು ಮಾಹಿತಿ ನೀಡಿದರು.

ಬೇರೆ ಬೇರೆ ಹೆಸರಿನಿಂದ ಪರಿಚಿತ

‘ಆರೋಪಿಯು ನಗರಕ್ಕೆ ಬಂದ ಆರಂಭದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ, ನಂತರ ಕೂಲಿ ಕಾರ್ಮಿಕನಾಗಿ ಕೆಲಸ ಮಾಡಿದ್ದ. ಆರು ತಿಂಗಳ ಹಿಂದೆ ಗಾರ್ಮೆಂಟ್ಸ್ ಸೇರಿಕೊಂಡಿದ್ದ. ಎಲ್ಲ ಕಡೆಯೂ ಬೇರೆ ಬೇರೆ ಹೆಸರುಗಳಿಂದ ತನ್ನ ಪರಿಚಯ ಮಾಡಿಕೊಂಡಿದ್ದ.  ಒಂದು ಕಡೆ ತನ್ನ ಹೆಸರು ಮಂಜುನಾಥ ಎಂದು, ಮತ್ತೊಂದೆಡೆ ರವಿ ಎಂದು, ಇನ್ನೊಂದು ಕಡೆ ಬಸವರಾಜ ಎಂದು ಹೇಳಿಕೊಂಡಿದ್ದ. ಆದರೆ, ಆತನ ಅಸಲಿ ಹೆಸರು ಮಲ್ಲಿಕಾರ್ಜುನ ಎಂಬುದು ಬಂಧನದ ನಂತರ ತಿಳಿಯಿತು’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.

ಬಡ ಮಕ್ಕಳೇ ಟಾರ್ಗೆಟ್
‘2–3 ದಿನ ಓಡಾಡಿ ಬಾಲಕಿಯನ್ನು ಗುರುತಿಸುತ್ತಿದ್ದೆ. ಬಡ ಕುಟುಂಬದ ಮಕ್ಕಳಾದರೆ ದೂರು ಕೊಡುವುದಿಲ್ಲವೆಂದು ಅವರನ್ನೇ ಟಾರ್ಗೆಟ್ ಮಾಡುತ್ತಿದ್ದೆ. ಸಿಕ್ಕಿ ಬೀಳಬಾರದೆಂದು ಅವರ ಬಳಿ ತಮಿಳು ಮಿಶ್ರಿತ ಕನ್ನಡ ಭಾಷೆಯಲ್ಲಿ ಮಾತನಾಡುತ್ತಿದ್ದೆ’ ಎಂದು ಆರೋಪಿ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ತಿಳಿಸಿದರು.

‘ಕೆಲ ದಿನಗಳ ಹಿಂದೆ ಸಿ.ಕೆ. ಅಚ್ಚುಕಟ್ಟು ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕದ್ದಿದ್ದಾಗಿ ಹಾಗೂ ಐಡಿಯಲ್ ಹೋಮ್ಸ್‌ ಟೌನ್‌ಶಿಪ್‌ನಲ್ಲಿ ನಟ ದರ್ಶನ್ ಅವರ ಮನೆ ಮುಂದೆ ನಿಂತಿದ್ದ ಎರಡು ಕಾರುಗಳ ಗಾಜುಗಳನ್ನು ಒಡೆದಿದ್ದಾಗಿ ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.