ADVERTISEMENT

ಬರದ ನಾಡಿನ ‘ಬಂಗಾರದ ಹುಡುಗಿ’!

ಬೆಂಗಳೂರು ವಿ.ವಿ ಘಟಿಕೋತ್ಸವದಲ್ಲಿ ಬೆರಗು ಮೂಡಿಸಿದ ಸಾಧಕಿ

​ಪ್ರಜಾವಾಣಿ ವಾರ್ತೆ
Published 20 ಮೇ 2014, 19:30 IST
Last Updated 20 ಮೇ 2014, 19:30 IST
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ 49ನೇ ಘಟಿಕೋತ್ಸವದಲ್ಲಿ ಶ್ರುತಿ ಡಿ.ಎಲ್‌ (ಭೌತವಿಜ್ಞಾನದಲ್ಲಿ 7 ಚಿನ್ನ), ಮೋಹಿತಾ ಎಸ್‌.ಎಂ (ಬಿ.ಇ.ಯಲ್ಲಿ 5 ಚಿನ್ನದ ಪದಕ), ರಾಜೇಂದ್ರ ಭಟ್‌ (ಸಂಸ್ಕೃತದಲ್ಲಿ 5 ಚಿನ್ನದ ಪದಕ), ಚೈತ್ರ ಎನ್‌. (ಬಿಎಸ್ಸಿಯಲ್ಲಿ 3 ಚಿನ್ನ), ರಶ್ಮಿ  ಎಸ್‌.ಬಾಳಿಗ (ಬಿ.ಇಡಿಯಲ್ಲಿ ಮೂರು ಚಿನ್ನ), ಐಶ್ವರ್ಯಾ ಎನ್‌.ಎ (ಬಿಕಾಂನಲ್ಲಿ 4 ಚಿನ್ನ), ಅನುಷಾ ಜಿ (ಬಿಎಯಲ್ಲಿ 4 ಚಿನ್ನ), ರೂಪಾ ಎಸ್‌ (ಅರ್ಥಶಾಸ್ತ್ರದಲ್ಲಿ 4 ಚಿನ್ನ) ಸಂಭ್ರಮಿಸಿದರು 	–ಪ್ರಜಾವಾಣಿ ಚಿತ್ರ
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ 49ನೇ ಘಟಿಕೋತ್ಸವದಲ್ಲಿ ಶ್ರುತಿ ಡಿ.ಎಲ್‌ (ಭೌತವಿಜ್ಞಾನದಲ್ಲಿ 7 ಚಿನ್ನ), ಮೋಹಿತಾ ಎಸ್‌.ಎಂ (ಬಿ.ಇ.ಯಲ್ಲಿ 5 ಚಿನ್ನದ ಪದಕ), ರಾಜೇಂದ್ರ ಭಟ್‌ (ಸಂಸ್ಕೃತದಲ್ಲಿ 5 ಚಿನ್ನದ ಪದಕ), ಚೈತ್ರ ಎನ್‌. (ಬಿಎಸ್ಸಿಯಲ್ಲಿ 3 ಚಿನ್ನ), ರಶ್ಮಿ ಎಸ್‌.ಬಾಳಿಗ (ಬಿ.ಇಡಿಯಲ್ಲಿ ಮೂರು ಚಿನ್ನ), ಐಶ್ವರ್ಯಾ ಎನ್‌.ಎ (ಬಿಕಾಂನಲ್ಲಿ 4 ಚಿನ್ನ), ಅನುಷಾ ಜಿ (ಬಿಎಯಲ್ಲಿ 4 ಚಿನ್ನ), ರೂಪಾ ಎಸ್‌ (ಅರ್ಥಶಾಸ್ತ್ರದಲ್ಲಿ 4 ಚಿನ್ನ) ಸಂಭ್ರಮಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ತಂದೆ ವ್ಯಾಸಂಗ ಮಾಡಿದ್ದು ಏಳನೇ ತರಗತಿವರೆಗೆ ಮಾತ್ರ. ತಾಯಿ ಕಲಿತದ್ದು ಎರಡನೇ ತರಗತಿವರೆಗೆ. ಸಹೋದರರ ಶಿಕ್ಷಣ ಎಸ್ಸೆಸ್ಸೆಲ್ಸಿಗಿಂತಲೂ ಕಡಿಮೆ. ಆದರೆ, ಮಗಳು ಸ್ನಾತಕೋತ್ತರ ಪದವಿಯಲ್ಲಿ ಆರು ಚಿನ್ನದ ಪದಕಗಳನ್ನು ಗಳಿಸಿದ್ದಾಳೆ.

ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತ­­ಕೋತ್ತರ ಪದವಿಯ ರಸಾಯನ­ವಿಜ್ಞಾನ ವಿಭಾಗದಲ್ಲಿ 6 ಚಿನ್ನದ ಪದಕ ಹಾಗೂ 3 ನಗದು ಬಹುಮಾನ ಪಡೆದ ನೂರ್‌ಜಹಾನ್‌ ಎ.ಆರ್‌. ಅವರ ಚಿನ್ನದ ಹಾದಿಯ ಕಥನ ಇದು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ 49ನೇ ಘಟಿ­ಕೋತ್ಸ­ವದಲ್ಲಿ ಚಿನ್ನದ ಪದಕ ಸ್ವೀಕರಿಸಿದ ಬಳಿಕ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು.

ನೂರ್‌ಜಾನ್‌ ಅವರ ಊರು ಬಾಗೇ­ಪಲ್ಲಿ. ತಂದೆ ಅಬ್ದುಲ್‌ ರಫೀಕ್‌. ತಾಯಿ ಶಕೀಲಾ ಬಾನು. ತಂದೆ ಊರಿನ ಮಾಂಸದ ಅಂಗಡಿಯಲ್ಲಿ ದುಡಿಯುತ್ತಿ­ದ್ದಾರೆ. ನೂರ್‌­ಜಹಾನ್‌ ಪದವಿವರೆಗೆ ಬಾಗೇಪಲ್ಲಿ ನ್ಯಾಷನಲ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ಎಸ್ಸೆಸ್ಸೆಲ್ಸಿ ಕಲಿಯುವ ತನಕ ಅವರು ಉನ್ನತ ಶಿಕ್ಷಣದ ಕನಸು ಕಂಡಿರಲಿಲ್ಲ. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕಗಳು ಬಂತು. ಹೀಗಾಗಿ ಕಲಿಯುವ ಉತ್ಸಾಹ ಮೂಡಿತು.

ಬಿ.ಎಸ್ಸಿಯಲ್ಲಿ ಜೀವ­ನದ ಗುರಿಯೇ ಬದಲಾ­ಯಿತು. ಬಿ.ಎಸ್ಸಿ­ಯಲ್ಲಿ ಅವರು ಶೇ 85 ಅಂಕ ಗಳಿಸಿ­ದರು. ಇದೇ ವೇಳೆ ದೊರಕಿದ ಜಿಂದಾಲ್‌ ವಿದ್ಯಾರ್ಥಿ ವೇತನ, ರಾಜ್ಯ ಸರ್ಕಾರದ ವಿದ್ಯಾರ್ಥಿ ವೇತನ ಇನ್ನಷ್ಟು ಕಲಿಯುವ ತುಡಿತಕ್ಕೆ ಉತ್ತೇಜನ ನೀಡಿತು. ಉನ್ನತ ವ್ಯಾಸಂಗಕ್ಕಾಗಿ ಬೆಂಗಳೂರು ವಿವಿಯಲ್ಲಿ ರಸಾಯನ­ವಿಜ್ಞಾನ ವಿಭಾಗ­ದಲ್ಲಿ ಸ್ನಾತಕೋತ್ತರ ಪದವಿಗೆ ಸೇರ್ಪಡೆ­ಯಾ­ದರು.

ಆರಂಭದಲ್ಲಿ ಬಾಗೇಪಲ್ಲಿ­ಯಿಂದ ಜ್ಞಾನಭಾರತಿಗೆ ನಿತ್ಯ ಪ್ರಯಾಣ ಮಾಡು­ತ್ತಿದ್ದರು. ಸ್ವಲ್ಪ ಸಮಯ ಕಳೆದ ಬಳಿಕ ಸ್ನೇಹಿತರ ಸಲಹೆ ಮೇರೆಗೆ ವಿವಿಯ ಹಾಸ್ಟೆಲ್‌ಗೆ ಸೇರಿಕೊಂಡರು. ಇದರಿಂದ ಕಲಿಕೆಗೆ ಹೆಚ್ಚಿನ ಸಮಯ ಸಿಕ್ಕಿತು. ‘ಪೋಷಕರು ಹೆಚ್ಚು ಕಲಿತವರು ಅಲ್ಲ.  ಆರ್ಥಿಕ ಪರಿಸ್ಥಿತಿಯೂ ಸಾಧಾರಣ ಸ್ಥಿತಿಯಲ್ಲಿ ಇತ್ತು. ಇಂತಹ ಸ್ಥಿತಿಯಲ್ಲೂ ಪೋಷಕರು ಕಲಿಕೆಗೆ ಹೆಚ್ಚಿನ ಉತ್ತೇಜನ ನೀಡಿದರು. ಅವರ ಪ್ರೋತ್ಸಾಹವೇ ಈ ಸಾಧನೆ ಮಾಡಲು ಸಾಧ್ಯ ಆಯಿತು’ ಎಂದು ನೂರ್‌ಜಹಾನ್‌ ಅನಿಸಿಕೆ ಹಂಚಿಕೊಂಡರು.

‘ಪ್ರಾಥಮಿಕ ತರಗತಿಯಲ್ಲಿಯೇ ಶಿಕ್ಷಕಿ ಆಗಬೇಕು ಎಂಬ ಕನಸು ಕಂಡಿದ್ದೆ. ಪಿಎಚ್‌.ಡಿ ಪದವಿ ಪಡೆದು ಉಪನ್ಯಾಸಕಿ ಆಗುವ ಯೋಚನೆ ಇದೆ’ ಎಂದರು. ಬಿ.ಎಸ್ಸಿ ಪದವಿಯಲ್ಲಿ ಚಿಂತಾಮಣಿ ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾ­ರ್ಥಿನಿ ಚೈತ್ರ ಎನ್‌. ಅವರು ಮೂರು ಚಿನ್ನದ ಪದಕ ಹಾಗೂ ನಾಲ್ಕು ನಗದು ಬಹುಮಾನಗಳನ್ನು ಸ್ವೀಕರಿಸಿದರು.  ‘ತಂದೆ ಕೃಷಿಕರು. ಪೋಷಕರ ಬೆಂಬಲ ಹಾಗೂ ಸಹಪಾಠಿಗಳ ಸಹಕಾರದಿಂದ ಹೆಚ್ಚಿನ ಅಂಕ ಗಳಿಸಲು ಸಾಧ್ಯ ಆಯಿತು. ಪಿಎಚ್.ಡಿ ಮಾಡುವ ಯೋಚನೆ ಇದೆ’ ಎಂದು ಅವರು ಹೇಳಿದರು.

ಪಠ್ಯ ಪುಸ್ತಕ ಓದಲಿಲ್ಲ: ಬಿಎ ಪದವಿ­ಯಲ್ಲಿ ನಗರದ ಬಿಷಪ್‌ ಕಾಟನ್‌ ಮಹಿಳಾ ಕ್ರೈಸ್ತ ಕಾಲೇಜಿನ ವಿದ್ಯಾರ್ಥಿನಿ ಅನುಷಾ ಜಿ. ಅವರು 4 ಚಿನ್ನದ ಪದಕ ಹಾಗೂ 3 ನಗದು ಬಹುಮಾನ ಗಳಿಸಿದರು. ಅವರ ತಂದೆ ಗಣೇಶ್‌ ಕೆ.ಎಸ್‌. ಅವರು ಅಬಕಾರಿ ಇಲಾಖೆ­ಯಲ್ಲಿ ಅಧಿ­ಕಾರಿ­ಯಾಗಿದ್ದಾರೆ. ತಾಯಿ ಕುಸುಮಾ, ಗೃಹಿಣಿ.

‘ಪೋಷಕರು ನನ್ನನ್ನು ಹುಡುಗನ ಹಾಗೆ ಬೆಳೆಸಿದರು. ಕರಾಟೆಯಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದೇನೆ. ಓದಿನಲ್ಲೂ ಹುಡು­ಗ­ರಿಗಿಂತ ಹೆಚ್ಚಿನ ಸಾಧನೆ ಮಾಡಬೇಕು ಎಂಬುದು ಹಂಬಲ ಆಗಿತ್ತು’ ಎಂದು ಅನುಷಾ ತಿಳಿಸಿದರು. ‘ರ್‍ಯಾಂಕ್‌ ನಿರೀಕ್ಷೆ ಮಾಡಿರಲಿಲ್ಲ. ಕಲಾ ವಿಭಾಗದಲ್ಲಿ ಹೆಚ್ಚಿನ ಅಂಕ ಗಳಿ­ಸಲು ಪುಸ್ತಕಗಳನ್ನೇ ಓದಬೇಕಿಲ್ಲ. ಪ್ರಸಕ್ತ ವಿದ್ಯಮಾನಗಳ ಬಗ್ಗೆ ಗಮನ ಹರಿ­­ಸಿದೆ. ಇದರಿಂದ ಹೆಚ್ಚಿನ ಅಂಕ ಗಳಿ­ಸಲು ಸಾಧ್ಯ ಆಯಿತು. ಐಎಎಸ್‌ ಅಧಿ­ಕಾರಿ ಆಗಬೇಕು ಎಂಬ ಕನಸಿದೆ’ ಎಂದರು.

ಆರು ಮಂದಿಗೆ ಗೌರವ ಡಾಕ್ಟರೇಟ್‌: ಎಸ್.ಎಸ್‌. ಅರಕೇರಿ (ಸಮಾಜ­ಸೇವೆ), ಜಿ.ಬಿ. ಪರಮ­ಶಿವಯ್ಯ (ಸಮಾಜ­­ಸೇವೆ), ಬಿ.ಟಿ. ಲಕ್ಷ್ಮಣ್‌ (ಶಿಕ್ಷಣ), ಪಿ. ರಾಮಯ್ಯ (ಪತ್ರಿಕೋದ್ಯಮ), ಹಂಸ­ಲೇಖ (ಸಿನಿಮಾ ಸಂಗೀತ) ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡ­ಲಾ­ಯಿತು. ಕಿರಣ್ ಮಜುಂದಾರ್‌ ಷಾ (ವಿಜ್ಞಾನ ಮತ್ತು ಜೀವ ತಂತ್ರಜ್ಞಾನ) ಗೈರು ಹಾಜರಾಗಿದ್ದರು.

223 ಮಂದಿಗೆ ಪಿಎಚ್‌.ಡಿ ಪದವಿ ಪ್ರದಾನ ಮಾಡಲಾಯಿತು. ಸ್ನಾತ­ಕೋತ್ತರ ವಿಭಾಗದಲ್ಲಿ 38 ವಿದ್ಯಾರ್ಥಿನಿ­ಯರು ಹಾಗೂ 28  ವಿದ್ಯಾರ್ಥಿಗಳು ಸೇರಿ 83 ಮಂದಿ ಚಿನ್ನದ ಪದಕ ಪಡೆ­ದರು. ಪದವಿಯಲ್ಲಿ 11 ವಿದ್ಯಾರ್ಥಿನಿ­ಯರು ಹಾಗೂ 6 ಮಂದಿ ವಿದ್ಯಾರ್ಥಿ­ಗಳು ಚಿನ್ನದ ಪದಕ ಸ್ವೀಕರಿಸಿದರು.

ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾ. ಎಸ್‌. ರಾಜೇಂದ್ರ ಬಾಬು ಘಟಿ­ಕೋತ್ಸವ ಭಾಷಣ ಮಾಡಿ, ‘ಶೈಕ್ಷಣಿಕ ವಲಯಗಳಲ್ಲಿ ರಾಜಕೀಯ ಹಸ್ತಕ್ಷೇಪ­ವನ್ನು ತಡೆಗಟ್ಟಬೇಕು. ಅದೇ ಹೊತ್ತಿಗೆ, ನೀತಿ ನಿರೂಪಣೆಯ ಮಟ್ಟ­ದಲ್ಲಿ ರಾಜ­ಕೀಯ ನಾಯಕತ್ವದ ಜೊತೆಗೆ ಸರಿ­ಯಾದ ಸಂಬಂಧವನ್ನು ನಿಭಾಯಿಸ­ಬೇಕು’ ಎಂದು ಸಲಹೆ ನೀಡಿದರು.

ರಾಜ್ಯಪಾಲ ಎಚ್‌.ಆರ್‌.  ಭಾರ­ದ್ವಾಜ್‌ ಅಧ್ಯಕ್ಷತೆ ವಹಿಸಿದ್ದರು. ಕುಲಪತಿ ಪ್ರೊ.ಬಿ. ತಿಮ್ಮೇಗೌಡ, ಕುಲ­ಸಚಿವರಾದ ಪ್ರೊ.ಕೆ.ಕೆ. ಸೀತಮ್ಮ, ಕುಲಸಚಿವ (ಮೌಲ್ಯಮಾಪನ) ಪ್ರೊ. ನಿಂಗೇಗೌಡ ಉಪಸ್ಥಿತರಿದ್ದರು.

ನೇಕಾರ ಪುತ್ರಿಗೆ 7 ಚಿನ್ನ
ಸ್ನಾತ­ಕೋತ್ತರ ಪದವಿಯ ಭೌತ­ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಶ್ರುತಿ ಡಿ.ಎಲ್‌. ಅವರು 7 ಚಿನ್ನದ ಪದಕ­ಗಳನ್ನು ಗಳಿಸುವ ಮೂಲಕ ಅತ್ಯಧಿಕ ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಅವರ ತಂದೆ ಕೈಮಗ್ಗ ನಡೆಸು­ತ್ತಿ­ದ್ದಾರೆ. ಅವರು ದೊಡ್ಡಬಳ್ಳಾ­ಪುರದ ನಿವಾಸಿ.

‘ಸ್ನಾತಕೋತ್ತರ ಪದವಿಯ ಮೊದಲ ವರ್ಷ ವಿವಿಯ ಹಾಸ್ಟೆಲ್ ಭರ್ತಿಯಾ­ಗಿತ್ತು. ಇದನ್ನೇ ಸವಾಲಾಗಿ ಸ್ವೀಕ­ರಿಸಿದೆ. ಪ್ರತಿನಿತ್ಯ ಜ್ಞಾನ­ಭಾರತಿ ವರೆಗೆ ಬಿಎಂಟಿಸಿ ಬಸ್‌­ನಲ್ಲಿ ಪ್ರಯಾಣ. ಪ್ರಯಾಣದ 6 ಗಂಟೆ ಅವಧಿಯನ್ನೇ ಓದಿಗಾಗಿ ಮೀಸ­ಲಿಟ್ಟೆ.  ಇದರಿಂದಾಗಿ ಹೆಚ್ಚಿನ ಅಂಕ­ಗಳು ಬಂತು’ ಎಂದು ಶ್ರುತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT