ADVERTISEMENT

‘ಬಸ್‌ ಭಾಗ್ಯ ಬೇಕು’ ಆಗ್ರಹಿಸಿ ಅಭಿಯಾನ

ಸಿಎಫ್‌ಬಿ, ಬೆಂಗಳೂರು ಬಸ್‌ ಪ್ರಯಾಣಿಕರ ವೇದಿಕೆ ಆಶ್ರಯದಲ್ಲಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2017, 20:03 IST
Last Updated 4 ಮಾರ್ಚ್ 2017, 20:03 IST
ಬೆಂಗಳೂರು: ಈ ಸಲದ ರಾಜ್ಯ ಬಜೆಟ್‌ನಲ್ಲಿ ‘ಬಸ್‌  ಭಾಗ್ಯ’ ನೀಡಬೇಕು ಎಂದು ಆಗ್ರಹಿಸಿ ‘ಸಿಟಿಜನ್ಸ್‌ ಆಫ್‌ ಬೆಂಗಳೂರು (ಸಿಎಫ್‌ಬಿ)’ ಹಾಗೂ ಬೆಂಗಳೂರು ಬಸ್‌ ಪ್ರಯಾಣಿಕರ ವೇದಿಕೆಯ ಆಶ್ರಯದಲ್ಲಿ ಶಾಂತಿನಗರ ಟಿಟಿಎಂಸಿಯಲ್ಲಿ ಶನಿವಾರ ಅಭಿಯಾನ ನಡೆಯಿತು. 
 
‘ನಗರದ ಜನಸಂಖ್ಯೆ 1.2 ಕೋಟಿ ಇದೆ. ರಾಜಧಾನಿಯಲ್ಲಿ ಕಾರು ಹಾಗೂ ದ್ವಿಚಕ್ರವಾಹನಗಳ ಸಂಖ್ಯೆ 56 ಲಕ್ಷಕ್ಕೂ ಅಧಿಕ ಇವೆ. ಆದರೆ, ಬಿಎಂಟಿಸಿ ಬಸ್‌ಗಳು ಇರುವುದು ಆರು ಸಾವಿರ ಮಾತ್ರ. ಜನರು ಸಾರ್ವಜನಿಕ ಸಾರಿಗೆಗಳನ್ನು ಬಳಸಲು ಉತ್ತೇಜನ ನೀಡಬೇಕು. ಈ ಸಲದ ಬಜೆಟ್‌ನಲ್ಲಿ ಬಿಎಂಟಿಸಿಗೆ ಹೆಚ್ಚಿನ ಅನುದಾನ ನೀಡಬೇಕು’ ಎಂದು ಸಂಘಟನೆಯ ಪದಾಧಿಕಾರಿಗಳು ಆಗ್ರಹಿಸಿದರು. 
‘ದರ ಹಾಫ್‌ ಮಾಡಿ, ಬಸ್‌ ಡಬಲ್‌ ಮಾಡಿ’ ಎಂದೂ ಒತ್ತಾಯಿಸಿದರು. 
 
ಸಿಎಫ್‌ಬಿ ಮುಖಂಡ ಶ್ರೀನಿವಾಸ ಅಲವಿಲ್ಲಿ ಮಾತನಾಡಿ, ‘ನಗರದಲ್ಲಿ 2005ರಲ್ಲಿ ಶೇ 55 ಮಂದಿ ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಿದ್ದರು. 2015ರಲ್ಲಿ ಈ ಪ್ರಮಾಣ ಶೇ 47ಕ್ಕೆ ಇಳಿದಿದೆ. ಬಿಎಂಟಿಸಿಯಲ್ಲಿ 2013ರಲ್ಲಿ 6431 ಬಸ್‌ಗಳು ಇದ್ದವು. 2016–17ರಲ್ಲಿ ಅವುಗಳ ಸಂಖ್ಯೆ 6,141ಕ್ಕೆ ಇಳಿದಿದೆ. ಸಾವಿರಕ್ಕೂ ಹೆಚ್ಚು ಬಸ್‌ಗಳು ಗುಜರಿಗೆ ಸೇರಲು ಸಿದ್ಧವಾಗಿದೆ. ಖಾಸಗಿ ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ’ ಎಂದು ಗಮನ ಸೆಳೆದರು. 
 
ಬಸ್‌ ಪ್ರಯಾಣಿಕರ ವೇದಿಕೆಯ ಸಂಚಾಲಕ ವಿನಯ್‌ ಶ್ರೀನಿವಾಸ ಮಾತನಾಡಿ, ‘ಬಿಎಂಟಿಸಿ ನಗರದ ಸಾಮಾನ್ಯ ಜನರ ಜೀವನಾಡಿ. ಸಂಸ್ಥೆಗೆ ಹೆಚ್ಚಿನ ಉತ್ತೇಜನ ನೀಡಬೇಕು. ಅದಕ್ಕಾಗಿ ಈ ಸಲದ ಬಜೆಟ್‌ನಲ್ಲಿ ಬಸ್‌ ಭಾಗ್ಯ ಘೋಷಿಸಬೇಕು. ಜತೆಗೆ ಬಸ್‌ ಪ್ರಯಾಣ ದರವನ್ನು ಕಡಿಮೆ ಮಾಡಬೇಕು’ ಎಂದು ಒತ್ತಾಯಿಸಿದರು. 
 
‘ಕಳೆದ ಆರು ವರ್ಷಗಳಲ್ಲಿ ಹಲವು ಸಲ ಬಸ್‌ ಪ್ರಯಾಣ ದರ ಏರಿಸಲಾಗಿದೆ. ಬಸ್‌ ಪ್ರಯಾಣಕ್ಕಿಂತ ದ್ವಿಚಕ್ರ ವಾಹನಗಳಲ್ಲಿ ತೆರಳುವುದೇ ಸೂಕ್ತ ಎಂಬ ಭಾವನೆ ಜನರಲ್ಲಿ  ಬಂದಿದೆ. ಹಳೆಯ ಬಸ್‌ಗಳು ಪದೇ ಪದೇ ಕೆಟ್ಟು ನಿಲ್ಲುತ್ತಿವೆ’ ಎಂದು ಅವರು ದೂರಿದರು. 
 
ಮಿಸ್ಡ್‌ ಕಾಲ್‌’ ಆಂದೋಲನ: ‘ಬಸ್‌ ಭಾಗ್ಯ ಅಭಿಯಾನದ ಹೋರಾಟ ತೀವ್ರ­ಗೊಳಿಸಲು ಹಾಗೂ ಇದಕ್ಕೆ ಜನಬೆಂಬಲ ಪಡೆಯಲು ‘ಮಿಸ್ಡ್‌–ಕಾಲ್‌’ ಆಂದೋಲನ ಆರಂಭಿಸಿ­ದ್ದೇವೆ. 08030474774 ಸಂಖ್ಯೆಗೆ ಮಿಸ್‌ಕಾಲ್‌ ಕೊಡುವ ಮೂಲಕ ನಮ್ಮ ಹೋರಾ­ಟಕ್ಕೆ ಜನತೆ ಬೆಂಬಲ ನೀಡಬೇಕು’ ಎಂದು ಅವರು ಮನವಿ ಮಾಡಿದರು. ಬಳಿಕ ಪದಾಧಿಕಾರಿ  ಬಿಎಂಟಿಸಿ ಅಧ್ಯಕ್ಷ ನಾಗರಾಜ್‌ ಯಾದವ್‌ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಏಕ್‌ರೂಪ್‌ ಕೌರ್ ಅವರಿಗೆ ಮನವಿ ಸಲ್ಲಿಸಿದರು. 
 
ಏಕ್‌ರೂಪ್‌ ಕೌರ್‌ ಪ್ರತಿಕ್ರಿಯಿಸಿ, ‘ಸಂಸ್ಥೆಗೆ ಹೆಚ್ಚುವರಿ ಬಸ್‌ಗಳ ಅಗತ್ಯ ಇದೆ. 3 ಸಾವಿರ ಬಸ್‌ಗಳ ಖರೀದಿಗೆ ಅನುದಾನ ನೀಡುವಂತೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ಸಲ ಬಜೆಟ್‌ನಲ್ಲಿ ಅನುದಾನ ಸಿಗುವ ವಿಶ್ವಾಸ ಇದೆ’ ಎಂದರು.
 
ಬೇಡಿಕೆಗಳೇನು?
– ಬಸ್ಸಿನ/ ಪಾಸ್‌ ದರ ಶೇ 50ರಷ್ಟು ಇಳಿಸಿ.
– ಬಸ್‌ಗಳ ಸಂಖ್ಯೆ ದುಪ್ಪಟ್ಟು ಮಾಡಿ.
– 6 ಸಾವಿರ ಹೊಸ ಬಸ್‌ ಸೇರಿಸಿ.
– ಬಸ್‌ ಪ್ರಯಾಣ ದರ ನಿಯಂತ್ರಿಸಲು ಸಮಿತಿ ಯೊಂದನ್ನು ರಚಿಸಬೇಕು. ಅದರಲ್ಲಿ ಬಸ್ ಪ್ರಯಾಣಿಕರ ಪ್ರತಿನಿಧಿಗಳು, ಕಾರ್ಮಿಕರು, ಬಿಬಿಎಂಪಿ ಸದಸ್ಯರು ಇರಬೇಕು.
– ಬಜೆಟ್‌ ತಯಾರಿ ಸಭೆಗೆ ಪ್ರಯಾಣಿಕರನ್ನೂ ಆಹ್ವಾನಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.