ADVERTISEMENT

ಬಾಂಬ್‌ ಸಿಡಿದು ನಾಯಿ ಸಾವು

​ಪ್ರಜಾವಾಣಿ ವಾರ್ತೆ
Published 22 ಜನವರಿ 2017, 20:06 IST
Last Updated 22 ಜನವರಿ 2017, 20:06 IST

ಮಾಗಡಿ: ಆಹಾರ ಎಂದು ಭಾವಿಸಿ ತಿನ್ನುವ ವೇಳೆ ಬಾಂಬ್‌ ಸಿಡಿದು ನಾಯಿ ಮೃತಪಟ್ಟಿರುವ ಘಟನೆ ಮಾಗಡಿ ತಾಲ್ಲೂಕಿನ ಅರಳುಕುಪ್ಪೆ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.

ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ದಾಯಾದಿಯನ್ನು ಕೊಲೆ ಮಾಡಲು ಹೂವಿನ ತೋಟದ ಬದುವಿನ ಮೇಲೆ  3 ರಿಂದ 4 ನಾಡ ಬಾಂಬ್ ಇಡಲಾಗಿತ್ತು ಎಂದು ತಿಳಿದುಬಂದಿದೆ. 

ಅರಳುಕುಪ್ಪೆಯ ದೊಡ್ಡಯ್ಯನ ಪತ್ನಿ ಭಾಗ್ಯ ಎಂಬಾಕೆಯ ಜೊತೆಗೆ ದಾಯಾದಿ    ಮಂಜುನಾಥ್  ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಬುದ್ಧಿ  ಹೇಳಿದರೂ ತಿದ್ದಿಕೊಳ್ಳದ ಕಾರಣ, ಮಂಜುನಾಥನನ್ನು ಕೊಲೆ ಮಾಡಲು ಹೂವಿನ ತೋಟದ ಬದುವಿನಲ್ಲಿ ನಾಡ ಬಾಂಬ್‌ ಇಡಲಾಗಿದೆ. ಮಂಜುನಾಥ್ ಮತ್ತು ಅವನ ಕುಟುಂಬದವರು  ಭಾನುವಾರ ಬೆಳಿಗ್ಗೆ ಕಾಕಡ ಮೊಗ್ಗನ್ನು ಬಿಡಿಸಲು ಹೋಗಿದ್ದರು. ನಾಯಿಯೂ ಜೊತೆಗಿತ್ತು. ನಾಯಿ ನಾಡ ಬಾಂಬ್‌ ತಿನ್ನಲು ಹೋಗಿ ಸಾವನ್ನಪ್ಪಿದೆ.  ಪರಿಶೀಲಿಸಿದಾಗ 3ರಿಂದ 4 ನಾಡ ಬಾಂಬ್ ಪತ್ತೆಯಾಗಿವೆ. ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ದೊಡ್ಡಯ್ಯನನ್ನು ಹಿಡಿದು ಮಾಗಡಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
‘ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಂಜುನಾಥನನ್ನು ಕೊಲೆ ಮಾಡುವ ಉದ್ದೇಶದಿಂದ ಬಾಂಬ್‌ ಇಟ್ಟಿದ್ದೆ’ ಎಂದು
ದೊಡ್ಡಯ್ಯ ಹೇಳಿಕೆ ನೀಡಿದ್ದಾಗಿ
ಪಿಎಸ್‌ಐ ಮಂಜುನಾಥ್‌. ಡಿ.ಆರ್‌.ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.