ADVERTISEMENT

ಬಾಡಿಗೆ ಹೆಚ್ಚಳ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2015, 19:30 IST
Last Updated 29 ಜುಲೈ 2015, 19:30 IST

ಬೆಂಗಳೂರು: ಪುಟ್ಟಣ್ಣ ಚೆಟ್ಟಿ ಪುರಭವನದ ಬಾಡಿಗೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಿರುವುದನ್ನು ಖಂಡಿಸಿ ರಂಗಭೂಮಿ ಕ್ರಿಯಾ ಸಮಿತಿ ಸದಸ್ಯರು ಪುರಭವನದ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ರಂಗಕರ್ಮಿ ಪ್ರಸನ್ನ, ‘ಪುಟ್ಟಣ್ಣ ಚೆಟ್ಟಿ ಅವರು ಸಾರ್ವಜನಿಕರು, ಕಲಾವಿದರ ಅನುಕೂಲಕ್ಕಾಗಿ ಪುರಭವನವನ್ನು ನಿರ್ಮಿಸಿದ್ದಾರೆ. ಆದರೆ, ಬಿಬಿಎಂಪಿ ಬಾಡಿಗೆಯನ್ನು ಏಕಾಏಕಿ ₨1.22 ಲಕ್ಷಕ್ಕೆ  ಹೆಚ್ಚಿಸಿರುವುದು ಸರಿಯಲ್ಲ. ಜನಸಾಮಾನ್ಯರಿಗೆ ಈ ಬಾಡಿಗೆ ಕೊಟ್ಟು ಕಾರ್ಯಕ್ರಮ ನಡೆಸಲು ಸಾಧ್ಯವಿಲ್ಲ’ ಎಂದರು.

ಪುರಭವನವು ನಗರದ ಮೊಟ್ಟಮೊದಲ ರಂಗಮಂದಿರವಾಗಿದೆ. ಅಲ್ಲದೇ, ಇದು ಪಾರಂಪರಿಕ ಕಟ್ಟಡ. ಇದರ ಬಾಡಿಗೆಯನ್ನು ದುಬಾರಿ ಕಲ್ಯಾಣಮಂಟಪಗಳ ರೀತಿ ಹೆಚ್ಚಿಗೆ ಮಾಡಲಾಗಿದೆ. ಕೂಡಲೇ ಬಾಡಿಗೆ ದರವನ್ನು ಇಳಿಸಬೇಕು ಮತ್ತು ಪುರಭವನವನ್ನು ಕಲಾವಿದರು, ಸಾಹಿತಿಗಳಿಗೆ ಮಾತ್ರ ಮೀಸಲಿರಿಸಬೇಕು ಎಂದು ಅವರು ಒತ್ತಾಯಿಸಿದರು.

ಸಮಿತಿಯ ಪ್ರಧಾನ ಸಂಚಾಲಕ ಕೆ.ವಿ.ನಾಗರಾಜಮೂರ್ತಿ, ‘ಪುರಭವನವನ್ನು ಈ ಹಿಂದೆ ₨ 5 ಸಾವಿರಕ್ಕೆ ಬಾಡಿಗೆ ನೀಡಲಾಗುತ್ತಿತ್ತು. ಈಗ ಅದನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಕಾರ್ಪೊರೇಟ್‌ ವ್ಯಕ್ತಿಗಳಿಗೆ ಮಾತ್ರ ಈ ಪ್ರಮಾಣದ ಬಾಡಿಗೆ ನೀಡಿ ಕಾರ್ಯಕ್ರಮ ನಡೆಸಲು ಸಾಧ್ಯ’ ಎಂದರು.

‘ಸುಮಾರು ₨8 ಕೋಟಿ ವೆಚ್ಚದಲ್ಲಿ ಪುರಭವನವನ್ನು ನವೀಕರಣ ಮಾಡಲಾಗಿದೆ. ಆದರೆ, ಒಳಭಾಗದಲ್ಲಿ ಯಾವುದೇ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಲ್ಲ. ನವೀಕರಣದಲ್ಲಿಯೂ ಅವ್ಯವಹಾರ ನಡೆದಿದೆ’ ಎಂದು ಆರೋಪಿಸಿದರು.

ಬಿಬಿಎಂಪಿಯು ಕೂಡಲೇ ಬಾಡಿಗೆ ಇಳಿಸದಿದ್ದರೆ ಪುರಭವನದಲ್ಲಿ ಯಾವುದೇ ಕಾರ್ಯಕ್ರಮಗಳನ್ನು ನಡೆಸಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಕಲಾವಿದ ಕಾಲಭೈರವ ಗಂಗಾಧರ್‌, ‘ಪೌರಾಣಿಕ ನಾಟಕಗಳಿಗಾಗಿ ಪುರಭವನವನ್ನು ಕನಿಷ್ಠ 15 ದಿನ ಈ ಹಿಂದೆ ಕೊಡುತ್ತಿದ್ದ ಬಾಡಿಗೆಗೆ ನೀಡಬೇಕು’ ಎಂದು ಒತ್ತಾಯಿಸಿದರು.

ಬಾಡಿಗೆ ದರ ಕಡಿಮೆಗೆ ಚಿಂತನೆ
ಬೆಂಗಳೂರು: ಪುರಭವನದ ಬಾಡಿಗೆ ದರ ದರ ಕಡಿಮೆ ಮಾಡಲು ಚಿಂತಿಸಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಜಿ.ಕುಮಾರ್‌ ನಾಯಕ್‌ ಹೇಳಿದರು.

ಪುರಭವನವನ್ನು ₨ 5 ಕೋಟಿ ಮೊತ್ತದಲ್ಲಿ ನವೀಕರಣ ಮಾಡಿದ ಬಳಿಕ ₨ 5 ಸಾವಿರದಷ್ಟು ಇದ್ದ ಬಾಡಿಗೆ ದರ ₨ 1.25 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದಕ್ಕೆ ಕಲಾವಿದರಿಂದ ಟೀಕೆ ವ್ಯಕ್ತವಾಗಿದೆ. ವಿಶೇಷ ಆಯುಕ್ತರಿಂದ (ಯೋಜನೆ) ವರದಿ ಪಡೆದು ದರ ನಿಗದಿ ಮಾಡಲಾಗುವುದು ಎಂದು ಹೇಳಿದರು.

ಮೊದಲು ಬಾಡಿಗೆ ಕಡಿಮೆಯಿದ್ದರೂ ಕಲಾವಿದರು ಧ್ವನಿವರ್ಧಕ, ಬೆಳಕು  ಸೇರಿ ಉಳಿದೆಲ್ಲ ವ್ಯವಸ್ಥೆಯನ್ನು ತಾವೇ ಮಾಡಿಕೊಳ್ಳಬೇಕಿತ್ತು. ಇದೀಗ ಈ ಎಲ್ಲ ಸೌಲಭ್ಯ ಪುರಭವನದಲ್ಲೇ ಲಭ್ಯವಿದ್ದು ಇದನ್ನೂ ಸೇರಿಸಿ ಲೆಕ್ಕ ಹಾಕಬೇಕಾಗುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT