ADVERTISEMENT

ಬಾತ್‌ರೂಮ್‌ ಸಾಮಗ್ರಿಗಳಲ್ಲಿ ಚಿನ್ನದ ಗಟ್ಟಿ ಸಾಗಾಟ

ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳಿಂದ ಒಬ್ಬನ ಬಂಧನ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 19:48 IST
Last Updated 21 ಜನವರಿ 2017, 19:48 IST
ನಲ್ಲಿಯ ಹಿಡಿಕೆಯಲ್ಲಿದ್ದ ಚಿನ್ನದ ಗಟ್ಟಿಗಳು
ನಲ್ಲಿಯ ಹಿಡಿಕೆಯಲ್ಲಿದ್ದ ಚಿನ್ನದ ಗಟ್ಟಿಗಳು   

ಬೆಂಗಳೂರು: ಬಾತ್‌ರೂಮ್‌ ಸಾಮಗ್ರಿಗಳಲ್ಲಿ ಚಿನ್ನದ  ಗಟ್ಟಿಗಳನ್ನು ಬಚ್ಚಿಟ್ಟು ಸಾಗಾಟ ಮಾಡುತ್ತಿದ್ದ ಪ್ರಯಾಣಿಕನೊಬ್ಬನನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.

‘ಕತಾರ್‌ ಏರ್‌ವೇಸ್‌ನ ಕ್ಯು.ಆರ್‌–572 ವಿಮಾನದಲ್ಲಿ ದೋಹಾದಿಂದ ನಗರದ ನಿಲ್ದಾಣಕ್ಕೆ  ಬಂದಿಳಿದಿದ್ದ ಪ್ರಯಾಣಿಕನನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಆತನ ಬಳಿ 230 ಗ್ರಾಂ ತೂಕದ ₹6.81 ಲಕ್ಷ ಮೌಲ್ಯದ ಚಿನ್ನದ ಗಟ್ಟಿಗಳು ಸಿಕ್ಕವು’ ಎಂದು ಕಸ್ಟಮ್ಸ್‌ ಅಧಿಕಾರಿಯೊಬ್ಬರು ತಿಳಿಸಿದರು.

‘ಬಾತ್‌ರೂಮ್‌ನಲ್ಲಿ ಅಳವಡಿಸುವ ನಲ್ಲಿ ಸೇರಿದಂತೆ ಹಲವು ಸಾಮಗ್ರಿಗಳ ಬಾಕ್ಸ್‌ ಆರೋಪಿ ಬಳಿ ಇತ್ತು. ಅದನ್ನು ಕಂಡು ಅನುಮಾನಗೊಂಡ ಸಿಬ್ಬಂದಿ, ಬಾಕ್ಸ್‌ ಬಿಚ್ಚಿ ತೋರಿಸುವಂತೆ ಹೇಳಿದ್ದರು. ಆರಂಭದಲ್ಲಿ ಸಾಮಗ್ರಿಗಳಷ್ಟೇ ಇರಬಹುದು ಎಂದು ಸಿಬ್ಬಂದಿ ತಿಳಿದುಕೊಂಡಿದ್ದರು. ಆದರೆ, ಲೋಹ ಶೋಧಕದಿಂದ ಪರೀಕ್ಷಿಸಿದಾಗ ಚಿನ್ನದ ಗಟ್ಟಿಗಳಿರುವುದು ಗೊತ್ತಾಯಿತು’.

ಬಳಿಕ ಸಾಮಗ್ರಿಗಳನ್ನು ಒಂದೊಂದಾಗಿ ಬಿಚ್ಚಿದಾಗ 16 ಗಟ್ಟಿಗಳು ಸಿಕ್ಕವು. ಬಳಿಕ ಆರೋಪಿಯನ್ನು ಬಂಧಿಸಲಾಯಿತು. ಸದ್ಯ ಆತನಿಂದ ಮತ್ತಷ್ಟು ಮಾಹಿತಿ ಪಡೆಯುತ್ತಿದ್ದೇವೆ. ತನಿಖೆ ದೃಷ್ಟಿಯಿಂದ ಆತನ ಹೆಸರನ್ನು ಗೋಪ್ಯವಾಗಿರಿಸಿದ್ದೇವೆ’ ಎಂದು ಅಧಿಕಾರಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.