ADVERTISEMENT

ಬಾಲಕ ಸಾವು ಪ್ರಕರಣ: ಕಟ್ಟಡ ಮಾಲೀಕನ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 19:30 IST
Last Updated 17 ಮಾರ್ಚ್ 2018, 19:30 IST

ಬೆಂಗಳೂರು: ಗೇಟ್‌ ಬಿದ್ದು ಬಾಲಕ ಕೆ.ಮಂಜುನಾಥ್ ಸಾವನ್ನಪ್ಪಿದ ಪ್ರಕರಣ ಸಂಬಂಧ ಡೆಸಾಲ್ಟ್ ಸಿಸ್ಟಮ್ಸ್ ಕಂಪನಿ ಸಿಬ್ಬಂದಿ ಹಾಗೂ ಕಟ್ಟಡದ ಮಾಲೀಕರ ವಿರುದ್ಧ ಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ನೇಹಿತರಾದ ದರ್ಶನ್ ಹಾಗೂ ಸಾಯಿ ಮೋಹನ್ ಜತೆ ಮಂಜುನಾಥ್ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಬರುತ್ತಿದ್ದಾಗ ಅವಘಡ ಸಂಭವಿಸಿತ್ತು. ಸ್ಥಳದಲ್ಲಿಯೇ ಆತ ಮೃತಪಟ್ಟಿದ್ದ.

ಕೋಟ್ಯಂತರ ರೂಪಾಯಿ ಖರ್ಚುಮಾಡಿ ತುಂಬಾ ಕಟ್ಟಡವನ್ನು ಸುಂದರವಾಗಿ ನಿರ್ಮಿಸಲಾಗಿದೆ. ಆದರೆ, ಗೇಟ್‌ಗಳ ಅಳವಡಿಕೆ ವೇಳೆ ಎಡವಿದ್ದಾರೆ. ಎಚ್ಚರಿಕೆಯಿಂದ ಸಿಬ್ಬಂದಿ ಕೆಲಸ ಮಾಡಿದ್ದರೆ ಅವಘಡ ಸಂಭವಿಸುತ್ತಿರಲಿಲ್ಲ. ಹೀಗಾಗಿ, ನಿರ್ಲಕ್ಷ್ಯದಿಂದ ಸಾವಿಗೆ ಕಾರಣರಾದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಜಯನಗರ ಪೊಲೀಸರು ಹೇಳಿದರು. ಘಟನೆಯಿಂದ ಎಚ್ಚೆತ್ತ ಬಿಬಿಎಂಪಿ ದಕ್ಷಿಣ ವಲಯದ ಕಂದಾಯ ಅಧಿಕಾರಿಗಳು ಶನಿವಾರ ಬೆಳಿಗ್ಗೆ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದರು.

ADVERTISEMENT

ಕಂದಾಯ ಅಧಿಕಾರಿ ನಾರಾಯಣಸ್ವಾಮಿ, ‘ಕಟ್ಟಡದ ಮುಂಭಾಗದಲ್ಲಿ 25 ಅಡಿ ಉದ್ದನೆಯ ಹಾಗೂ 4 ಅಡಿ ಎತ್ತರದ ಎರಡು (ಸ್ಲೈಡಿಂಗ್) ಗೇಟ್‌ಗಳನ್ನು ಅಳವಡಿಸಲಾಗಿದೆ. ತಲಾ 500 ಕೆ.ಜಿಗೂ ಅಧಿಕ ತೂಕವುಳ್ಳ ಅವುಗಳಿಗೆ ಲಾಕ್ ವ್ಯವಸ್ಥೆ ಅಳವಡಿಸಿರಲಿಲ್ಲ. ಅವಘಡಕ್ಕೆ ಅದೇ ಕಾರಣವಾಗಿದೆ’ ಎಂದರು.

ದಕ್ಷಿಣ ವಲಯದ ಜಂಟಿ ಆಯುಕ್ತ ಟಿ.ಎಚ್.ವಿಶ್ವನಾಥ್, ‘ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುವ ರೀತಿಯಲ್ಲಿ ಗೇಟ್‌ಗಳನ್ನು ಅಳವಡಿಸಿದ್ದು ತಪ್ಪು. ಗೇಟ್ ಅಳವಡಿಕೆ ಸಂಬಂಧ ನಿಯಮಗಳನ್ನು ಪಾಲಿಸಿಲ್ಲ. ವಿವರಣೆ ನೀಡುವಂತೆ ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಲಾಗುತ್ತದೆ. ತಪ್ಪು ಸಾಬೀತಾದರೆ ಅವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.