ADVERTISEMENT

ಬಾಲಭವನದ ಅಭಿವೃದ್ಧಿಗೆ ರೂ 2 ಕೋಟಿ: ಸುಧಾಮೂರ್ತಿ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2014, 19:50 IST
Last Updated 21 ಆಗಸ್ಟ್ 2014, 19:50 IST

ಬೆಂಗಳೂರು: ‘ನಗರದ ಬಾಲಭವನದ ಅಭಿವೃದ್ಧಿಗಾಗಿ ರೂ 2 ಕೋಟಿ ನೀಡಲಾ­ಗು­ವುದು.  ಬಾಲಭವನದ  ನವೀಕರಣ ಕಾರ್ಯವನ್ನು ಸದ್ಯದಲ್ಲಿಯೇ ಕೈಗೊಳ್ಳ­ಲಾ­­ಗುವುದು’ ಎಂದು  ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ತಿಳಿಸಿದರು.

ಇನ್ಫೊಸಿಸ್‌ ಪ್ರತಿಷ್ಠಾನವು ನಗರದ ಬಾಲಭವನದ ಆವರಣದಲ್ಲಿ ಗುರು­ವಾರ ಹಮ್ಮಿಕೊಂಡಿದ್ದ ಬಸ್‌ ಹಸ್ತಾಂತರ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮಕ್ಕಳಿಗೆ ಉತ್ತಮ ಸೌಲಭ್ಯ   ಒದಗಿ­ಸಲು ಪ್ರತಿಷ್ಠಾನವು ಮುಂದಾಗಿದೆ. ಬೆಂಗ­ಳೂರು ಬಾಲಭವನಕ್ಕೆ ಒಂದು ಬಸ್‌  ಹಸ್ತಾಂ­ತರ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಧಾರವಾಡ, ಉಡುಪಿ ಮತ್ತು ಬೀದರ್ ಜಿಲ್ಲಾ ಬಾಲಭವನ­ಗಳಿಗೆ  ತಲಾ ಒಂದು ಬಸ್‌  ನೀಡಲಾಗು­ವುದು’ ಎಂದು ಭರವಸೆ ನೀಡಿದರು.

ಸಚಿವೆ ಉಮಾಶ್ರೀ ಮಾತನಾಡಿ, ‘ಬಾಲಭವನ ಸೊಸೈಟಿಯು ಮಕ್ಕಳಲ್ಲಿ  ಕ್ರಿಯಾತ್ಮಕ ಹಾಗು ಸೃಜನಾತ್ಮಕ ಬೆಳವಣಿಗೆಗೆ ಪೂರಕವಾಗಿ ಕಾರ್ಯನಿ­ರ್ವ­ಹಿಸುತ್ತಿದೆ. ಈ ಕಾರ್ಯಕ್ಕೆ  ಬಲತುಂಬುವ ನಿಟ್ಟಿನಲ್ಲಿ ಸುಧಾ­ಮೂರ್ತಿ­ಯವರು  ಬಸ್‌ ನೀಡುವುದರ ಮೂಲಕ  ಬಾಲಭವನದ ಅಭಿವೃದ್ಧಿಗೆ ಸಹಕಾರ ನೀಡಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

40 ಆಸನವುಳ್ಳ ಬಸ್‌ ಇದಾಗಿದೆ. ಭವನವು ಏರ್ಪಡಿಸುವ  ಮಕ್ಕಳ ಬೇಸಿಗೆ ಶಿಬಿರ ಹಾಗೂ ಸಾಂಸ್ಕೃತಿಕ ಕಾರ್ಯ­ಕ್ರಮಗಳಿಗೆ ಈ ಬಸ್‌ ಅನ್ನು ಬಳಸಿಕೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಕಾರ್ಯಕ್ರಮದಲ್ಲಿ  ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಅಮಿತಾ ಪ್ರಸಾದ್, ಬಾಲಭವನ ಸೊಸೈಟಿಯ ಕಾರ್ಯದರ್ಶಿ ಎನ್.ಪಂಕಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.