ADVERTISEMENT

ಬಾಲಮಂದಿರ ನೌಕರ ಸೆರೆ

ಶೌಚಾಲಯ ಸ್ವಚ್ಛಗೊಳಿಸಲು ನಿರಾಕರಿಸಿದ ಬಾಲಕನಿಗೆ ಥಳಿತ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2014, 20:09 IST
Last Updated 22 ಆಗಸ್ಟ್ 2014, 20:09 IST

ಬೆಂಗಳೂರು: ಮನೆಗೆ ಹೋಗುವ ಬಸ್‌ ತಪ್ಪಿಸಿ­ಕೊಂಡು ವಿಲ್ಸನ್‌ಗಾರ್ಡನ್‌ ಬಳಿಯ ಲಕ್ಕಸಂದ್ರದ ಬಾಲಮಂದಿರ ಸೇರಿದ್ದ 14 ವರ್ಷದ ಬಾಲಕನನ್ನು ಶೌಚಾ­ಲಯ ಸ್ವಚ್ಛಗೊಳಿಸಲು ನಿರಾಕ­ರಿ­ಸಿದ ಕಾರಣಕ್ಕೆ ಅಲ್ಲಿನ ಸಿಬ್ಬಂದಿ ಅಮಾ­ನ­­­ವೀ­ಯವಾಗಿ ಥಳಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ಬಾಲಮಂದಿರದ ಸಿಬ್ಬಂದಿ ರಮೇಶ್ ಎಂಬಾತನನ್ನು ವಿಲ್ಸನ್‌­ಗಾರ್ಡನ್‌ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ದೊಡ್ಡಬೊಮ್ಮಸಂದ್ರದ ಬಾಲಕ ಯಶ­ವಂತಪುರದ ಆದರ್ಶ ಬಾಲಕರ ಶಾಲೆ­ಯಲ್ಲಿ ಎಂಟನೇ ತರಗತಿ ಓದುತ್ತಿ­ದ್ದಾನೆ.

ಆಗಸ್ಟ್‌ 19ರಂದು ಶಾಲೆ ಮುಗಿ­ಸಿ­­ಕೊಂಡು ಸಂಜೆ ಮನೆಗೆ ಹೋಗುವಾಗ ಬಸ್‌ ತಪ್ಪಿಸಿಕೊಂಡು ಬೇರೆ ಬಸ್‌ ಹತ್ತಿ ಮೆಜೆಸ್ಟಿಕ್‌ಗೆ ಹೋಗಿದ್ದಾನೆ. ಆಗ ಡಾನ್‌ ಬಾಸ್ಕೊ ಸಂಸ್ಥೆಯ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಬಾಲಕನನ್ನು ರಕ್ಷಿಸಿ ಬಾಲಮಂದಿರಕ್ಕೆ ಸೇರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ರಮೇಶ್‌, ಬಾಲಕನಿಗೆ ಶೌಚಾಲಯ ಸ್ವಚ್ಛಗೊಳಿಸುವಂತೆ ಹೇಳಿದ್ದಾರೆ.  ಬಾಲಕ ಅದಕ್ಕೆ ನಿರಾಕರಿಸಿದ್ದರಿಂದ ಬೆಲ್ಟ್‌ ಮತ್ತು ಪಿವಿಸಿ ಪೈಪ್‌ನಿಂದ ಆತನ ಮೊಣ­ಕಾಲು, ಬೆನ್ನು, ತೊಡೆ ಮತ್ತಿತರ ಕಡೆ  ಥಳಿಸಿದ್ದಾನೆ. ನಂತರ ಬಾಲಕನಿಗೆ ಊಟ ನೀಡದೆ ಶೌಚಾಲಯದಲ್ಲಿ ಕೆಲ ಕಾಲ ಕೂಡಿ ಹಾಕಲಾಗಿದೆ. ಘಟನೆ­ಯಲ್ಲಿ ಬಾಲಕ ತೀವ್ರವಾಗಿ ಗಾಯಗೊಂ­ಡಿ­ದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

ಬಾಲಕನನ್ನು ಮಕ್ಕಳ ಕಲ್ಯಾಣ ಸಮಿತಿ ಎದುರು ಆಪ್ತ ಸಮಾ­ಲೋಚ­ನೆ­ಗಾಗಿ ಹಾಜರು­ಪಡಿಸಿದಾಗ ಬಾಲಕನ ಮೇಲೆ ಹಲ್ಲೆ ನಡೆಸಿರುವ ಪ್ರಕರಣ
ಬೆಳ­ಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಸಮಿತಿಯ ಸದಸ್ಯರು ಬಾಲಕನ ತಾಯಿ­­ಯನ್ನು ಸಂಪರ್ಕಿಸಿ ಮಾಹಿತಿ ನೀಡಿ­ದ್ದಾರೆ. ಕೂಡಲೇ ಬಾಲಕನ ತಾಯಿ   ಆತ­ನನ್ನು ಇಂದಿರಾಗಾಂಧಿ ಮಕ್ಕಳ ಆಸ್ಪ­ತ್ರೆಗೆ ಸೇರಿಸಿದ್ದಾರೆ. ಆತನ ತಾಯಿ ನೀಡಿದ ದೂರು ಆಧರಿಸಿ ರಮೇಶ್‌ನನ್ನು ಬಂಧಿ­­ಸಲಾಯಿತು. ನಂತರ ಸಂಜೆ ವೇಳೆಗೆ ಜಾಮೀನಿನ ಮೇಲೆ ಆತನನ್ನು ಬಿಡು­ಗಡೆ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಮಾಧ್ಯಮದ ಮೇಲೆ ದೂರು: ಬಾಲ­ಕ­ನಿಗೆ ಚಿಕಿತ್ಸೆ ನೀಡಿದ ಇಂದಿರಾ­ಗಾಂಧಿ ಮಕ್ಕಳ ಆಸ್ಪತ್ರೆ ನಿರ್ದೇಶಕಿ ಡಾ.ಪ್ರೇಮ­ಲತಾ ‘ಪ್ರಜಾ­ವಾಣಿ’ಯೊಂದಿಗೆ ಮಾತ­ನಾಡಿ, ‘ಬಾಲಕ­­ನನ್ನು ಆತನ ತಾಯಿ, ಬಾಲ­­ಮಂದಿರದ ಸಿಬ್ಬಂದಿ ಬುಧ­­­­­ವಾರ  (ಆ. 20) ಆಸ್ಪತ್ರೆಗೆ ದಾಖ­ಲಿಸಿದ್ದರು. ಬಾಲಕನಿಗೆ ಪಿವಿಸಿ ಪೈಪ್‌­ನಿಂದ ಬೆನ್ನು, ತೊಡೆ,  ಭುಜದ ಮೇಲೆ ಹೊಡೆ­ಯ­ಲಾ­ಗಿದೆ. ಬಾಲಕನು ತೀವ್ರ ನೋವಿ­­ನಿಂದ  ಬಳಲುತ್ತಿದ್ದ’ ಎಂದು ತಿಳಿಸಿದರು.

‘ಬಾಲಕನಿಗೆ ಚಿಕಿತ್ಸೆಯ ಜತೆಗೆ ಆಪ್ತ­ಸ­ಮಾಲೋಚನೆಯ ಅಗತ್ಯವಿತ್ತು.  ಆತ  ಮಾನ­­ಸಿಕವಾಗಿ ಬಹಳ ಕುಗ್ಗಿದ್ದ.  ದೇಹದ ವಿವಿಧ ಭಾಗಗಳಲ್ಲಿ ಗಾಯ­­ವಾ­ಗಿ­­ದ್ದರಿಂದ ನೋವು ಅನುಭವಿಸುತ್ತಿದ್ದ’ ಎಂದರು. ‘ಸುವರ್ಣ ಮಾಧ್ಯಮ’ದವರು ಆಸ್ಪ­ತ್ರೆ­ಯ ಅನುಮತಿ ಪಡೆಯದೆ, ಬಾಲಕ ಮತ್ತು ಆತನ ತಾಯಿಯನ್ನು ಸ್ಟುಡಿ­ಯೊಗೆ ಕರೆದುಕೊಂಡು ಹೋಗಿದ್ದಾರೆ. ಹೀಗಾಗಿ, ಕೆಲಸಕ್ಕೆ ಅಡ್ಡಿಪಡಿಸಿದ ಕಾರ­ಣಕ್ಕೆ  ಆ ವಾಹಿನಿಯ ವಿರುದ್ಧ ಸಿದ್ದಾ­ಪುರ ಪೊಲೀಸ್‌ ಠಾಣೆಗೆ ದೂರು ಕೊಟ್ಟಿ­ದ್ದೇವೆ’ ಎಂದು ಅವರು ಹೇಳಿದರು.

ಇತರ ಮಕ್ಕಳ ಮೇಲೆ ಹಲ್ಲೆ ನಡೆಯುತ್ತಿದೆ
‘ಬಾಲಮಂದಿರದಲ್ಲಿ ಇತರ ಮಕ್ಕಳ ಮೇಲೂ ಅಲ್ಲಿನ ಸಿಬ್ಬಂದಿ­ಯಿಂದ ಹಲ್ಲೆ ನಡೆಯುತ್ತಿದೆ. ಮಾತು ಕೇಳದ ಮಕ್ಕಳನ್ನು ಸಿಬ್ಬಂದಿ ಅಮಾ­­ನುಷವಾಗಿ ಥಳಿಸುತ್ತಾರೆ. ಆದರೆ, ಭಯದಿಂದ ಆ ಮಕ್ಕಳು  ಹೇಳುತ್ತಿಲ್ಲ’
 –ಥಳಿತಕ್ಕೊಳಗಾದ ಬಾಲಕ

ಸಿಬ್ಬಂದಿಗೆ ಶಿಕ್ಷೆ ಆಗಬೇಕು
‘ಬಾಲಮಂದಿರದ ಸಿಬ್ಬಂದಿ ತಾವು ಹೇಳಿದ ಕೆಲಸ ಮಾಡಲಿಲ್ಲ ಎಂಬ ಕಾರ­ಣಕ್ಕೆ ಬಾಲಕನ್ನು  ಅಮಾ­ನ­­ವೀ­ಯವಾಗಿ ಥಳಿಸಿದ್ದಾರೆ. ತಮ್ಮ ಮಕ್ಕ­ಳಾಗಿದ್ದರೆ ಅವರು ಹೀಗೆಯೆ ಮಾಡು­ತ್ತಿದ್ದರೇ ? ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು’
–ವಿಲೋಟ್‌ ಹಜಲ್‌, ಬಾಲಕನ ತಾಯಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.