ADVERTISEMENT

ಬಿಎಂಟಿಎಫ್‌ ನೋಟಿಸ್‌ಗೆ ಹೈಕೋರ್ಟ್ ತಡೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 19:37 IST
Last Updated 22 ಜೂನ್ 2017, 19:37 IST
ಬಿಎಂಟಿಎಫ್‌ ನೋಟಿಸ್‌ಗೆ ಹೈಕೋರ್ಟ್ ತಡೆ
ಬಿಎಂಟಿಎಫ್‌ ನೋಟಿಸ್‌ಗೆ ಹೈಕೋರ್ಟ್ ತಡೆ   

ಬೆಂಗಳೂರು: ತ್ಯಾಜ್ಯ ವಿಲೇವಾರಿ ಗುತ್ತಿಗೆ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಂಟು ಜನ ಜಂಟಿ ಆಯುಕ್ತರಿಗೆ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್‌) ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ಬುಧವಾರ ತಡೆ ನೀಡಿದೆ.

ಈ ಕುರಿತಂತೆ ದಕ್ಷಿಣ ವಲಯದ ಟಿ.ಎಚ್‌.ವಿಶ್ವನಾಥ, ಪಶ್ಚಿಮ ವಲಯದ ಪಿ.ಆರ್.ಪಾಲಂಗಪ್ಪ, ಯಲಹಂಕ ವಲಯದ ಎಸ್‌.ನಾಗರಾಜು, ಬೊಮ್ಮನಹಳ್ಳಿಯ ವಿ.ಎನ್‌.ವೀರಭದ್ರಸ್ವಾಮಿ, ರಾಜರಾಜೇಶ್ವರಿ ನಗರದ ಎಂ.ಎಚ್‌.ತಿಪ್ಪೇಸ್ವಾಮಿ, ದಾಸರಹಳ್ಳಿಯ ಆರ್.ವೆಂಕಟಾಚಲಪತಿ, ಮಹದೇವಪುರದ ವಾಸಂತಿ ಮತ್ತು ಪೂರ್ವ ವಲಯದ ಹೆಚ್ಚುವರಿ ಆಯುಕ್ತ ಕೆ.ಸಿ.ಯತೀಶ್ ಕುಮಾರ್‌ ಸಲ್ಲಿಸಿದ ಅರ್ಜಿಗಳನ್ನು ನ್ಯಾಯಮೂರ್ತಿ ಅಶೋಕ ಬಿ. ಹಿಂಚಿಗೇರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

‘ನಗರದ ತ್ಯಾಜ್ಯ ವಿಲೇವಾರಿಗೆ ಬಜೆಟ್‌ನಲ್ಲಿ ಸಾಕಷ್ಟು ಹಣ ತೆಗೆದಿರಿಸಲಾಗಿದೆ. ಏಳು ಘನತ್ಯಾಜ್ಯ ನಿರ್ವಹಣಾ ಘಟಕಗಳ ನಿರ್ವಹಣೆಗಾಗಿ ಕೋಟಿಗಟ್ಟಲೆ ಹಣ ನೀಡಲಾಗಿದೆ. ಆದರೆ,  ಈ ಹಣದ ದುರ್ಬಳಕೆ ಆಗಿದೆ. ಪೌರ ಕಾರ್ಮಿಕರಿಗೆ ಪಿಂಚಣಿ, ಇಎಸ್‌ಯ ಸೌಲಭ್ಯಗಳನ್ನು ನೀಡದೆ ವಂಚಿಸಲಾಗಿದೆ’ ಎಂದು ಪಾಲಿಕೆ ಸದಸ್ಯ ಎನ್.ಆರ್.ರಮೇಶ್‌  ಬಿಎಂಟಿಎಫ್‌ಗೆ ದೂರು ನೀಡಿದ್ದರು.

ADVERTISEMENT

ಇದರ ಅನುಸಾರ ವಿಚಾರಣೆಗೆ ಹಾಜರಾಗುವಂತೆ ಅರ್ಜಿದಾರರಿಗೆ ಬಿಎಂಟಿಎಫ್‌ ಸೂಚಿಸಿದೆ. ‘ಬಿಎಂಟಿಎಫ್‌ಗೆ ನೋಟಿಸ್‌ ನೀಡುವ ಅಧಿಕಾರ ವ್ಯಾಪ್ತಿ ಇಲ್ಲ’ ಎಂಬುದು ಅರ್ಜಿದಾರರ ಆಕ್ಷೇಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.