ADVERTISEMENT

ಬಿಎಸ್‌ವೈ ಆಪ್ತ ಸಹಾಯಕನ ಜಾಮೀನು ಅರ್ಜಿಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 19:56 IST
Last Updated 19 ಜುಲೈ 2017, 19:56 IST
ಬಿ.ಎಸ್‌.ಯಡಿಯೂರಪ್ಪ
ಬಿ.ಎಸ್‌.ಯಡಿಯೂರಪ್ಪ   

ಬೆಂಗಳೂರು: ವಿಧಾನ ಪರಿಷತ್‌ನ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರ ಆಪ್ತ ಸಹಾಯಕ(ಪಿ.ಎ) ವಿನಯ್ ಅಪಹರಣ ಯತ್ನ, ಹಲ್ಲೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಬಿ.ಎಸ್‌.ಯಡಿಯೂರಪ್ಪ ಅವರ ಆಪ್ತ ಸಹಾಯಕ ಎನ್‌.ಆರ್‌.ಸಂತೋಷ್‌ ಸೆಷನ್ಸ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಆ ಅರ್ಜಿಗೆ ಬುಧವಾರ ಆಕ್ಷೇಪಣೆ ಸಲ್ಲಿಸಿರುವ ಪೊಲೀಸರು, ‘ಪ್ರಕರಣದಲ್ಲಿ ಸಂತೋಷ್‌ ಭಾಗಿಯಾಗಿರುವುದಕ್ಕೆ ಪುರಾವೆಗಳು ಸಿಕ್ಕಿವೆ. ಹೀಗಾಗಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಾರದು’ ಎಂದು ಕೋರಿದ್ದಾರೆ.

‘ಪ್ರಕರಣ ದಾಖಲಾದ ಬಳಿಕ ವಿಶೇಷ ತಂಡವು ತನಿಖೆ ನಡೆಸುತ್ತಿದೆ. ವಿಚಾ ರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದರೂ ಸಂತೋಷ್‌ ಬಂದಿಲ್ಲ. ಸದ್ಯ ಅವರು ತಲೆಮರೆಸಿಕೊಂಡಿದ್ದಾರೆ’ ಎಂದು  ಮಾಹಿತಿ ನೀಡಿದ್ದಾರೆ.

ADVERTISEMENT

ಪೊಲೀಸರ ಆಕ್ಷೇಪಣೆ ಸ್ವೀಕರಿಸಿರುವ ನ್ಯಾಯಾಲಯವು ಜಾಮೀನು ಅರ್ಜಿಯ ವಿಚಾರಣೆಯನ್ನು ಜುಲೈ 27ಕ್ಕೆ ಮುಂದೂಡಿದೆ.

*
ಹೇಬಿಯಸ್ ಕಾರ್ಪಸ್‌ ಅರ್ಜಿ ವಾಪಸು
ಬೆಂಗಳೂರು:
‘ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ  ಅವರ ಆಪ್ತ ಸಹಾಯಕ (ಪಿ.ಎ) ವಿನಯ್ ಅವರ ಅಪಹರಣ ಪ್ರಕರಣದ ಆರೋಪಿ ಪ್ರಶಾಂತ್‌ನನ್ನು ಜುಲೈ 13ರಂದು ಎಚ್‌ಎಎಲ್‌ ಪೊಲೀಸರು ಮೈಸೂರಿನ ಚಾಮುಂಡಿ ಬೆಟ್ಟದ ಬಳಿ ಬಂಧಿಸಿದ್ದಾರೆ’ ಎಂದು ಪ್ರಾಸಿಕ್ಯೂಷನ್‌ ಹೈಕೋರ್ಟ್‌ಗೆ ತಿಳಿಸಿದೆ.

ಈ ವಿವರಣೆ ಅನುಸಾರ ಪ್ರಶಾಂತ್ ಪತ್ನಿ, ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಯನ್ನು ವಾಪಸು ಪಡೆದಿದ್ದಾರೆ.

ಈಗಾಗಲೇ ಪ್ರಶಾಂತ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಚಾರಣೆಗಾಗಿ ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ಪ್ರಾಸಿಕ್ಯೂಷನ್‌ ವಕೀಲರು, ನ್ಯಾಯಮೂರ್ತಿಗಳಾದ ರವಿ ಮಳಿಮಠ ಹಾಗೂ ಜಾನ್‌ ಮೈಕೆಲ್ ಕುನ್ಹ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.