ADVERTISEMENT

ಬಿಜೆಪಿ ಮಾಜಿ ಮೇಯರ್‌ಗಳಿಗಿಲ್ಲ ಟಿಕೆಟ್‌

ವಾರ್ಡ್‌ ಮಟ್ಟದಲ್ಲಿ ಪ್ರಚಾರಕ್ಕೆ ಚಾಲನೆ: ಮತದಾರರ ಗುರುತಿನ ಚೀಟಿ ಮಾಡಿಸಲು ಪೈಪೋಟಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2015, 19:41 IST
Last Updated 2 ಆಗಸ್ಟ್ 2015, 19:41 IST

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ಸೋಮವಾರ ಅಧಿಸೂಚನೆ ಪ್ರಕಟವಾಗುವುದು ಖಚಿತವಾಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ.

ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ಮಧ್ಯೆ ಹಲವು ಸಲ ಓಡಾಡಿದರೂ ರಾಜ್ಯ ಸರ್ಕಾರಕ್ಕೆ ಚುನಾವಣೆ ಮುಂದೂಡಲು ಸಾಧ್ಯ ಆಗಿರಲಿಲ್ಲ. ವಿಧಾನಸಭೆಯಲ್ಲಿ ಬಿಬಿಎಂಪಿ ವಿಭಜನೆ ಮಸೂದೆಗೆ ಅಂಗೀಕಾರ ಪಡೆದು ಚುನಾವಣೆ ಮುಂದೂಡಲು ಕೊನೆಕ್ಷಣದ ಯತ್ನ ನಡೆಸಲಾಗಿತ್ತು. ಆದರೆ, ರಾಜ್ಯಪಾಲರು ಮಸೂದೆಗೆ ಅಂಕಿತ ಹಾಕಿರಲಿಲ್ಲ. ಈಗ ಅಧಿಸೂಚನೆ ಹೊರಡಿಸಲಾಗುತ್ತಿದೆ.

ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಎಡೆಬಿಡದೆ ಸಭೆಗಳು ನಡೆಯುತ್ತಿದ್ದು, ಅಭ್ಯರ್ಥಿಗಳ ಆಯ್ಕೆಗಾಗಿ ಕಸರತ್ತು ಆರಂಭವಾಗಿದೆ. ಕೆಂಗೇರಿಯಲ್ಲಿ ದೊಡ್ಡ ಸಮಾವೇಶ ಸಂಘಟಿಸುವ ಮೂಲಕ ಜೆಡಿಎಸ್‌ ಸಹ ಚುನಾವಣೆಗೆ ಸಿದ್ಧತೆ ಆರಂಭಿಸಿದೆ.

‘ಮಾಜಿ ಮೇಯರ್‌ಗಳಿಗೆ ಈ ಸಲ ಸ್ಪರ್ಧೆಗೆ ಅವಕಾಶ ನೀಡಬಾರದು ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಪಕ್ಷದ ಈ ನಿರ್ಧಾರದಿಂದ ಎಸ್‌.ಕೆ.ನಟರಾಜ್‌, ಡಿ. ವೆಂಕಟೇಶಮೂರ್ತಿ, ಬಿ.ಎಸ್‌. ಸತ್ಯ ನಾರಾಯಣ, ಶಾರದಮ್ಮ ಹಾಗೂ ಎನ್‌.ಶಾಂತಕುಮಾರಿ ಅವರಿಗೆ ಟಿಕೆಟ್‌ ಕೈತಪ್ಪಲಿದೆ’ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.

‘ಐವರೂ ಈಗ ಅಧಿಕಾರ ಅನುಭವಿಸಿದ್ದಾರೆ. ಅವರ ಅನುಭವವನ್ನು ಪಕ್ಷದ ಇತರ ವೇದಿಕೆಗಳಲ್ಲಿ ಬಳಕೆ ಮಾಡಿಕೊಳ್ಳಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಹೊಸಬರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ’ ಎಂದು ಸ್ಪಷ್ಟಪಡಿಸಿದರು.

‘ಇಂತಹ ನಿರ್ಧಾರದಿಂದ ಬಂಡಾಯಕ್ಕೆ ಅವಕಾಶ ಮಾಡಿಕೊಟ್ಟಂತೆ ಆಗುವುದಿಲ್ಲವೆ’ ಎಂದು ಪ್ರಶ್ನಿಸಿದರೆ, ‘ಹಾಗೇನಿಲ್ಲ. ಪಕ್ಷದ ತೀರ್ಮಾನವನ್ನು ಎಲ್ಲರೂ ಗೌರವಿಸಲಿದ್ದಾರೆ’ ಎಂದು ಉತ್ತರಿಸಿದರು.

‘ಪಕ್ಷದಲ್ಲಿ ಆಗಿರುವ ತೀರ್ಮಾನದ ಬಗೆಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಮುಖಂಡರು ವಹಿಸಿದ ಜವಾಬ್ದಾರಿಯನ್ನು ನಿಭಾಯಿಸಲು ನಾವು ಸಿದ್ಧ’ ಎಂದು ಸತ್ಯನಾರಾಯಣ ಹಾಗೂ ಶಾಂತಕುಮಾರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಮಾಜಿ ಮೇಯರ್‌ಗಳಿಗೆ ಟಿಕೆಟ್‌ ಕೊಡಬಾರದು ಎನ್ನುವಂತಹ ತೀರ್ಮಾನ ಆಗಿಲ್ಲ ಎಂಬುದು ನನ್ನ ಅನಿಸಿಕೆ’ ಎಂದು ಸತ್ಯನಾರಾಯಣ ಹೇಳಿದರು.

ಕಾಂಗ್ರೆಸ್‌ ಪಕ್ಷವೂ ಚುನಾವಣೆಗೆ ಭರದ ಸಿದ್ಧತೆ ನಡೆಸಿದ್ದು, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಈಗಾಗಲೇ ಸಭೆ ನಡೆಸಿದ್ದಾರೆ. ಸಚಿವರಿಗೆ ವಿಧಾನಸಭಾ ಕ್ಷೇತ್ರವಾರು ಹೊಣೆ ವಹಿಸಲಾಗಿದೆ. ಆ. 5ರಿಂದ ಬಿ ಫಾರ್ಮ್‌ ವಿತರಣೆ ನಡೆಯಲಿದೆ. ಹೊಸ ಮುಖಗಳಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ.

ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ‘ಆಮ್‌ ಆದ್ಮಿ’ ಪಕ್ಷ (ಎಎಪಿ) ಇನ್ನೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ.
‘ಸೋಮವಾರ ಅಧಿಸೂಚನೆ ಹೊರಡಿಸಿದ ನಂತರವಷ್ಟೇ ಸಭೆ ಸೇರಿ ಚುನಾವಣೆಗೆ ಸ್ಪರ್ಧಿಸುವ ಕುರಿತು ಅಂತಿಮ ತೀರ್ಮಾನ ಮಾಡುತ್ತೇವೆ’ ಎಂದು ಎಎಪಿ ರಾಜ್ಯ ಸಂಚಾಲಕ ಸಿದ್ದಾರ್ಥ ಶರ್ಮಾ ಅವರು  ‘ಪ್ರಜಾವಾಣಿ’ಗೆ ತಿಳಿಸಿದರು.

ಚೀಟಿ ಮಾಡಿಸಲು ಪೈಪೋಟಿ: ಮತದಾರರ ಗುರುತಿನ ಚೀಟಿ ಮಾಡಿಸಿಕೊಡಲು ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರಲ್ಲಿ ಪೈಪೋಟಿ ಏರ್ಪಟ್ಟಿದೆ.

ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಆಯಾ ವಾರ್ಡ್‌ಗಳ ಅಭ್ಯರ್ಥಿಗಳು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿ, ಗುರುತಿನ ಚೀಟಿ ಕೊಡಿಸಲು ಕಚೇರಿಗಳನ್ನೇ ತೆರೆದಿದ್ದಾರೆ. ಮನೆ, ಮನೆಗೆ ತೆರಳಿ ನೀವು ಗುರುತಿನ ಚೀಟಿ ಹೊಂದಿರುವಿರೊ, ಇಲ್ಲವೊ ಎಂದು ವಿಚಾರಿಸುತ್ತಿದ್ದಾರೆ.

ADVERTISEMENT

ಪ್ರಮುಖ ಪಕ್ಷಗಳು ಇನ್ನೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡದಿದ್ದರೂ ಆಕಾಂಕ್ಷಿತರು ಆಗಲೇ ತಮ್ಮ ಕ್ಷೇತ್ರಗಳಲ್ಲಿ ಭರದ ಪ್ರಚಾರ ಆರಂಭಿಸಿದ್ದಾರೆ. ಈ ಹಿಂದಿನ ಕೌನ್ಸಿಲ್‌ನಲ್ಲಿ ಸದಸ್ಯರಾಗಿದ್ದವರು ಈಗಾಗಲೇ ಮನೆ, ಮನೆಗೆ ತೆರಳಿ ಮತಯಾಚನೆಗೆ ಚಾಲನೆ ನೀಡಿದ್ದಾರೆ.


ಚುನಾವಣಾ ವೇಳಾಪಟ್ಟಿ
ಅಧಿಸೂಚನೆ ಹೊರಡಿಸುವುದು/ನಾಮಪತ್ರ ಸ್ವೀಕಾರ ಆರಂಭ ಆ. 3
ನಾಮಪತ್ರ ಸಲ್ಲಿಸಲು ಕೊನೆಯ ದಿನ ಆ. 10
ನಾಮಪತ್ರಗಳ ಪರಿಶೀಲನೆ ಆ. 11
ನಾಮಪತ್ರ ವಾಪಸ್‌ ಪಡೆಯಲು ಕೊನೆಯ ದಿನ ಆ. 13
198 ವಾರ್ಡ್‌ಗಳಲ್ಲಿ ಮತದಾನ ಆ. 22
ಅಗತ್ಯವಿದ್ದಲ್ಲಿ ಮರು ಮತದಾನದ ದಿನ ಆ. 24
ಮತ ಎಣಿಕೆ ಆ. 25
ಚುನಾವಣಾ ಪ್ರಕ್ರಿಯೆ ಮುಗಿಸಲು ಕೊನೆಯ ದಿನ ಆ. 26

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.