ADVERTISEMENT

ಬಿ.ಟಿ: ಹೆಚ್ಚು ಉದ್ಯೋಗಾವಕಾಶ

ಬಯೋಕಾನ್‌ನ ಕಿರಣ್‌ ಮಜುಂದಾರ್‌ ಷಾ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 7 ಜುಲೈ 2015, 19:27 IST
Last Updated 7 ಜುಲೈ 2015, 19:27 IST

ಬೆಂಗಳೂರು: ‘ಜೈವಿಕ ತಂತ್ರಜ್ಞಾನ ಕ್ಷೇತ್ರವು ಭಾರತದ ಭವಿಷ್ಯವಾಗಿದೆ’ ಎಂದು ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಷಾ ಹೇಳಿದರು. ಮೌಂಟ್‌ ಕಾರ್ಮೆಲ್‌ ಕಾಲೇಜಿನ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಮಂಗಳವಾರ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉದ್ಯಮಶೀಲತೆ ಕುರಿತು ವಿಶೇಷ ಉಪನ್ಯಾಸ ನೀಡಿದರು.

‘ಆರ್ಥಿಕ ಅಭಿವೃದ್ಧಿಗೆ ಜೈವಿಕ ತಂತ್ರಜ್ಞಾನ ಕ್ಷೇತ್ರ ಪೂರಕವಾಗಿದೆ. ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವವರಿಗೆ ಭಾರತದಲ್ಲಿ ಸಾಕಷ್ಟು ಉದ್ಯೋಗ  ಅವಕಾಶಗಳಿವೆ’ ಎಂದರು. ‘ಬೆಂಗಳೂರು, ತಂತ್ರಜ್ಞಾನ ಮತ್ತು ಉದ್ಯಮಶೀಲತೆಯ ತಾಣವಾಗಿದೆ.  ಜಗತ್ತಿನಲ್ಲೇ 12ನೇ ಅತಿದೊಡ್ಡ ತಂತ್ರಜ್ಞಾನದ ತಾಣವೂ ಹೌದು. ಸ್ಟಾರ್ಟ್‌ಅಪ್‌ಗಳ ರಾಜಧಾನಿ ಕೂಡ ಆಗಿದೆ. ನಿತ್ಯ ಹೊಸ ಹೊಸ ಉದ್ಯಮಗಳು ಹುಟ್ಟಿಕೊಳ್ಳುತ್ತಲೇ ಇವೆ. ಯುವಜನಾಂಗ ಇವುಗಳ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಸಲಹೆ ಮಾಡಿದರು.

‘1978ರಲ್ಲಿ ₨10 ಸಾವಿರ ಹೂಡಿಕೆ ಮಾಡಿ ಸಣ್ಣ  ಗ್ಯಾರೇಜ್‌ನಲ್ಲಿ ಬಯೋಕಾನ್‌ ಸಂಸ್ಥೆ ಆರಂಭಿಸಿದ್ದೆ. ಬೆಂಗಳೂರಿನಲ್ಲಿ ಆರಂಭಗೊಂಡ ಮೊದಲ ಸ್ಟಾರ್ಟ್‌ಅಪ್‌ ಸಂಸ್ಥೆ ಇದಾಗಿದೆ’ ಎಂದರು. ‘ಒಂದು ಉದ್ಯಮ ಆರಂಭಿಸುವಾಗ  ಸಾಕಷ್ಟು ಅಡೆತಡೆ ಬರುತ್ತವೆ. ಅವುಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.

‘ಬಯೋಕಾನ್‌ ಆರಂಭಿಸಿದಾಗ ಜೈವಿಕ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿರಲಿಲ್ಲ. ಸಂಸ್ಥೆ ಸೇರಲು  ಜನ ಹಿಂದೇಟು ಹಾಕುತ್ತಿದ್ದರು. ಬ್ಯಾಂಕ್‌ಗಳು ಸಾಲ ನೀಡಲು ಮುಂದೆ ಬರುತ್ತಿರಲಿಲ್ಲ. ಕೈಗೆತ್ತಿಕೊಂಡ ಕೆಲಸಗಳೆಲ್ಲ ವಿಫಲವಾಗುತ್ತಿದ್ದವು’ ಎಂದು ವಿವರಿಸಿದರು.

‘ಆದರೆ ನಾನೆಂದೂ ಅವುಗಳಿಗೆ ಎದೆಗುಂದಲಿಲ್ಲ. ನನ್ನ ದಾರಿ ಸ್ಪಷ್ಟವಾಗಿತ್ತು. ಸತತ ಸೋಲುಗಳ ನಂತರ ಕೊನೆಗೆ ಯಶಸ್ಸು ಸಿಕ್ಕಿತು. ಇಂದು ಸಂಸ್ಥೆಯಲ್ಲಿ 7,500 ಜನ ದುಡಿಯುತ್ತಿದ್ದಾರೆ. ಜಗತ್ತಿನ ಕೆಲವೇ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಬಯೋಕಾನ್‌ ಕೂಡ ಒಂದಾಗಿದೆ’ ಎಂದು ಹೇಳಿದರು.

‘ಪ್ರಾಮಾಣಿಕತೆಯಿಂದ ಹಣ ಗಳಿಸಿದ ರೆ ಮನುಷ್ಯನಿಗೆ ಅದು ಮೌಲ್ಯ ತಂದುಕೊಡುತ್ತದೆ. ಸಂಪತ್ತಿನ ಸೃಷ್ಟಿ ಎಂದರೆ ಮೌಲ್ಯಗಳ ಸೃಷ್ಟಿ. ಅದು ಕೇವಲ ಹಣಕ್ಕೆ ಮಾತ್ರ ಸಂಬಂಧಿಸಿದ್ದಲ್ಲ’ ಎಂದರು. ‘ಜಗತ್ತಿನಲ್ಲಿ ನಿತ್ಯ ಹೊಸ ಹೊಸ ಆವಿಷ್ಕಾರಗಳು ಆಗುತ್ತಿವೆ. ಸ್ಪರ್ಧೆ ಹೆಚ್ಚಾಗಿದೆ. ಭಿನ್ನವಾದುದ್ದನ್ನು ಮಾಡಲು  ಪ್ರಯತ್ನಿಸಬೇಕು’ ಎಂದು ಕಿರಣ್‌ ಮಜುಂದಾರ್‌ ಷಾ ಅವರು ಸಲಹೆ ನೀಡಿದರು.

‘ಎಲ್ಲ ಪಕ್ಷಗಳಿಗೂ ಅನುಕೂಲ’
‘ಬಿಬಿಎಂಪಿ ಚುನಾವಣೆ ಮುಂದಕ್ಕೆ ಹೋಗಿರುವುದರಿಂದ ಎಲ್ಲ ಪಕ್ಷಗಳಿಗೂ ಅನುಕೂಲವಾಗಿದೆ. ಇದರಿಂದ ಅವುಗಳಿಗೆ ತಯಾರಿ ಮಾಡಿಕೊಳ್ಳಲು ಹೆಚ್ಚಿನ ಸಮಯ ಸಿಕ್ಕಿದಂತಾಗಿದೆ’ ಎಂದು ಕಿರಣ್‌ ಮಜುಂದಾರ್‌ ಷಾ ಹೇಳಿದರು.

ಕಾರ್ಯಕ್ರಮದ ಬಳಿಕ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.‘ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿಯಿಂದ (ಬಿ.ಪ್ಯಾಕ್‌) ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಇರುವವರಿಗಾಗಿ ವಿಶೇಷ ಕಾರ್ಯಾಗಾರ ನಡೆಸಲಾಗುತ್ತಿದೆ. ಇದು ಯಾವುದೇ ಒಂದು ಪಕ್ಷದವರಿಗೆ ಸೀಮಿತವಾಗಿಲ್ಲ. ಯಾರೂ ಬೇಕಾದರೂ ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ’ ಎಂದು ಬಿ.ಪ್ಯಾಕ್‌ ಅಧ್ಯಕ್ಷೆಯೂ ಆಗಿರುವ ಷಾ ತಿಳಿಸಿದರು.

‘ಕಬ್ಬನ್‌ ಪಾರ್ಕ್‌ನಲ್ಲಿ ಸೂಕ್ತ ರೀತಿಯಲ್ಲಿ ವಿದ್ಯುತ್‌ ದೀಪ ಅಳವಡಿಸಬೇಕು. ಮತ್ತು ಅದರ ಅಂದ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದೂ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.