ADVERTISEMENT

ಬಿಡಿಎ ಯೋಜನೆ ಅತಂತ್ರ

ಜಮೀನು ಮಾಲೀಕತ್ವ ತಕರಾರು

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2014, 19:59 IST
Last Updated 21 ಆಗಸ್ಟ್ 2014, 19:59 IST

ಬೆಂಗಳೂರು: ಜ್ಞಾನಭಾರತಿ ಬಡಾವಣೆ­ಗಾಗಿ 20 ವರ್ಷಗಳ ಹಿಂದೆ ಬೆಂಗ­ಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ವಾಧೀನಪಡಿಸಿ­ಕೊಂಡಿದ್ದ 2.28 ಎಕರೆ ಜಮೀನು ತಮಗೆ ಸೇರಿದ್ದೆಂದು ಅದರ ಮೂಲ ಮಾಲೀಕರ ಸಂಬಂಧಿ­ಯೊ­ಬ್ಬರು ಇತ್ತೀಚೆಗೆ ತಕರಾರು ತೆಗೆದಿರುವು­ದರಿಂದ ಉದ್ದೇಶಿತ ₨ 130 ಕೋಟಿ ವೆಚ್ಚದ ವಸತಿ ಯೋಜನೆಯ ಭವಿಷ್ಯ ಅತಂತ್ರವಾಗಿದೆ.

ಕೆಂಗೇರಿ ಸಮೀಪದ ವಳಗೇರ­ಹಳ್ಳಿಯ ‘101/2ಬಿ’ ಸರ್ವೆ ನಂಬರಿನ ಈ ಜಮೀನನ್ನು 1994ರಲ್ಲಿ ಅಂತಿಮ ಅಧಿ­ಸೂಚನೆ ಮೂಲಕ ಬಿಡಿಎ ಸ್ವಾಧೀನ­ಪಡಿಸಿ­ಕೊಂಡಿತ್ತು. ಅದರ ನಂತರ ಖಾಲಿ ಬಿಟ್ಟಿದ್ದ ಜಾಗದಲ್ಲಿ ಇತ್ತೀಚೆಗೆ 368 ಮನೆಗಳ ವಸತಿ ಸಮುಚ್ಚಯ ನಿರ್ಮಿ­ಸಲು ಬಿಡಿಎ ಯೋಜನೆ ರೂಪಿಸಿ, ಟೆಂಡರ್‌ ಕರೆಯಿತು.

ಇನ್ನೇನು ಕಾಮ­ಗಾರಿ ಆರಂಭಿಸ­ಬೇಕು ಎನ್ನುವಷ್ಟರಲ್ಲಿ ಮಹೇಶ (ಮೂಲ ಮಾಲೀಕರ ಸಂಬಂಧಿ) ಎಂಬು­­ವರು ‘ಈ ಜಾಗ ನಮ್ಮದು’ ಎಂದು ಬಿಡಿಎ ಅಧಿಕಾರಿ­ಗಳ ವಿರುದ್ಧ ಕೆಂಗೇರಿ ಠಾಣೆಯಲ್ಲಿ ದೂರು ದಾಖಲಿ­ಸಿದರು. ಆದರೆ, ಮಹೇಶ ಮತ್ತು ಅವರ ಬೆಂಬ­ಲಿಗ ಎಂ.ಎಸ್‌.-­ಯತ್ನಟ್ಟಿ ಎಂಬು­ವ­ವರ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬಿಡಿಎ ಅಧಿಕಾರಿ­ಗಳು ಗುರುವಾರ ಪ್ರತಿದೂರು ಕೊಟ್ಟಿದ್ದಾರೆ.

ADVERTISEMENT

ಹಿಂದೆ ನಡೆದದ್ದೇನು?
ಜ್ಞಾನಭಾರತಿ ಬಡಾ­ವಣೆಗಾಗಿ ವಳಗೇರಹಳ್ಳಿಯ ಒಟ್ಟು  900.30 ಎಕರೆ ಜಮೀನನ್ನು ಸ್ವಾಧೀನ ಪಡಿಸಿ­ಕೊಂಡು 1989ರ ಜನವರಿ 19ರಂದು ಬಿಡಿಎ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ನಂತರ, 1994ರ ಜನವರಿ 19 ರಂದು 700.37 ಎಕರೆ ಸ್ವಾಧೀನದ ಬಗ್ಗೆ ಅಂತಿಮ ಅಧಿ­ಸೂಚನೆ ಹೊರಡಿಸಿತ್ತು.

ಆದರೆ,  ಕಾನೂನು ಪ್ರಕಾರ ಭೂಸ್ವಾಧೀನ ಪ್ರಕ್ರಿಯೆ ನಡೆದಿಲ್ಲ ಎಂದು ಹೈಕೋರ್ಟ್‌­ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದ ಕೆಲವು ಭೂ ಮಾಲೀಕರು,  ಅಧಿ­ಸೂಚನೆ­­­ರದ್ದು­ಪಡಿಸ­ಲು ಕೋರಿ­ದ್ದರು. ರಿಟ್‌ ಪುರಸ್ಕರಿಸಿದ್ದ ನ್ಯಾಯಾಲಯ, ಅರ್ಜಿದಾರರಿಗೆ ಸೇರಿದ ಜಮೀನಿಗೆ ಸಂಬಂಧಿಸಿದ  ಅಧಿಸೂಚನೆ­ಯನ್ನು ರದ್ದು­ಗೊಳಿಸಿತ್ತು. ನ್ಯಾಯಾಲಯದ ಆದೇಶದ ಅನ್ವಯ, ಬಿಡಿಎಯು 1997ರಲ್ಲಿ ಮತ್ತೊಮ್ಮೆ ಅಂತಿಮ ಅಧಿಸೂಚನೆ ಹೊರಡಿಸಿತ್ತು.

‘ಈ ಅಧಿಸೂಚನೆಯಲ್ಲಿ 101/2 ಬಿ ಸರ್ವೆ ನಂಬರ್‌ನ 2.28 ಎಕರೆ ಜಮೀನಿನ ಪ್ರಸ್ತಾಪ ಇಲ್ಲ. ಹಾಗಾಗಿ ಇದು ಬಿಡಿಎಗೆ ಸೇರುವುದಿಲ್ಲ’ ಎಂಬುದು ಮಹೇಶ ಹಾಗೂ ಕುಟುಂಬದವರ ವಾದ.
ಇದಕ್ಕೆ ಪ್ರತಿಯಾಗಿ ಬಿಡಿಎ ಭಿನ್ನ ವಾದವನ್ನು ಮುಂದಿಟ್ಟಿದೆ. ಅದರ ಪ್ರಕಾರ, ‘1997ರ ಅಧಿಸೂಚನೆ ಹೈಕೋರ್ಟ್‌­ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದವರ ಜಮೀನು­ಗಳಿಗೆ ಮಾತ್ರ ಅನ್ವಯವಾಗುತ್ತದೆ. ಆದರೆ ‘101/ 2ಬಿ’ ಸರ್ವೆ ನಂಬರ್‌ ಜಮೀನಿಗೆ 1994ರ ಅಧಿಸೂಚನೆಯೇ ಅನ್ವಯ­ವಾಗುತ್ತದೆ’.

ಬಿಡಿಎಗೆ ಜಯ
ಕುತೂಹಲಕಾರಿ ಸಂಗತಿ ಎಂದರೆ, ಈ ಜಮೀನಿಗೆ ಸಂಬಂಧಿಸಿದಂತೆ 2007­ರಲ್ಲಿ ಹೈಕೋರ್ಟ್‌, ಬಿಡಿಎ ಪರ ತೀರ್ಪು ನೀಡಿತ್ತು.
ಭೂಸ್ವಾಧೀನ ಕುರಿತಂತೆ 1989 ರಲ್ಲಿ ಹೊರಡಿಸಿದ್ದ ಪ್ರಾಥಮಿಕ ಅಧಿ ಸೂಚನೆ­ ರದ್ದುಪಡಿಸಬೇಕು ಎಂದು ಕೋರಿ ಈ ಜಮೀನಿನ ಮಾಲೀಕ­ರಾಗಿದ್ದ ದಿವಂಗತ ಮಾದಪ್ಪ ಎಂಬುವವರ ಪುತ್ರಿ ಮಹದೇವಮ್ಮ ಮತ್ತು ಪುತ್ರ ದಿವಂಗತ ಮಹದೇವಯ್ಯ ಅವರ ಪತ್ನಿ ರೇಣುಕಮ್ಮ ಅವರು 2002ರಲ್ಲಿ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು.

ಆದರೆ, 2007ರ ಜೂನ್‌ 21 ರಂದು  ಈ ಅರ್ಜಿಯನ್ನು ವಜಾ ಮಾಡಿದ್ದ ಏಕ ಸದಸ್ಯ ನ್ಯಾಯಪೀಠ, ಅರ್ಜಿದಾರರಿಗೆ ₨10 ಸಾವಿರ ದಂಡ­ ವಿಧಿಸಿತ್ತು.
ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ನ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿ­ದ್ದರು. ಈ ಅರ್ಜಿ ಯನ್ನೂ ನ್ಯಾಯಾಲಯ ವಜಾ ಮಾಡಿತ್ತು.
‌‘ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳಿದ್ದರೂ, ರಾಜಕೀಯ ಪ್ರಭಾವ ಬಳಸಿ ಯೋಜನೆಗೆ ಅಡ್ಡಗಾಲು ಹಾಕುವ ಪ್ರಯತ್ನ ನಡೆದಿದೆ. ಕಾನೂನು ಪ್ರಕಾರ ನಾವು ಸರಿ ಇದ್ದು, ಅಡ್ಡಿಪಡಿಸುವವರ ವಿರುದ್ಧ ಕೆಂಗೇರಿ ಠಾಣೆಯಲ್ಲಿ ದೂರು ನೀಡಲಾಗಿದೆ’ ಎಂದು ಬಿಡಿಎ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ 1997ರಲ್ಲಿ ಅಂತಿಮ ಅಧಿಸೂಚನೆ ಹೊರ­ಡಿ­ಸಿರುವುದರಿಂದ 1994ರ ಅಧಿ­ಸೂಚನೆಗೆ ಮಾನ್ಯತೆ ಇಲ್ಲ. ಈ ಜಮೀನಿನ ವಿಚಾರದಲ್ಲಿ ಅಧಿಕಾರಿಗಳು ಕಾನೂನು ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ಕಾನೂನು ಹೋರಾಟ ನಡೆಸು­ತ್ತೇವೆ’ ಎನ್ನುತ್ತಾರೆ ಎಂ.ಎಸ್‌.ಯತ್ನಟ್ಟಿ.

ಮತ್ತೊಂದು ತಗಾದೆ
ಜ್ಞಾನಭಾರತಿ ಬಡಾವಣೆಗೆ ಸ್ವಾಧೀನ ಪಡಿಸಿಕೊಂಡಿರುವ ವಳಗೇರಹಳ್ಳಿಯ ಸರ್ವೆ ನಂಬರ್‌ ‘84’ರ 1.05 ಎಕರೆ ಜಮೀನಿ­ನಲ್ಲಿ ಬಿಡಿಎ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ವಾಣಿಜ್ಯ ಸಂಕೀರ್ಣದ ನಿರ್ಮಾಣ ಕಾಮ­ಗಾರಿಗೂ ಅಡ್ಡಿ ಎದುರಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಹೇಳಿ­ಕೊಂಡು ಕೆಲವರು ತಕರಾರು ತೆಗೆದಿದ್ದಾರೆ ಎಂದು ಹೇಳಲಾಗಿದೆ. ಮೈಸೂರು ರಸ್ತೆಗೆ ಅಭಿಮುಖ­ವಾಗಿ­ರುವ ಈ ಜಮೀನಿನಲ್ಲಿ ಬಡಾವಣೆಯ ನಿವಾಸಿಗಳಿಗಾಗಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಬಿಡಿಎ ಮುಂದಾಗಿದ್ದು, ನೆಲವನ್ನು ಸಮತಟ್ಟು ಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.