ADVERTISEMENT

ಬಿಬಿಎಂಪಿ ಕಸ ದೇವನಹಳ್ಳಿ ಸುತ್ತ ವಿಲೇವಾರಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2014, 19:51 IST
Last Updated 19 ಅಕ್ಟೋಬರ್ 2014, 19:51 IST

ದೇವನಹಳ್ಳಿ: ಬೆಂಗಳೂರು ನಗರದ ಕಸವನ್ನು ಈಗ ದೇವನ­ಹಳ್ಳಿ ಸುತ್ತಮುತ್ತ ಸುರಿಯುತ್ತಿರುವುದು ಸ್ಥಳೀಯರಿಗೆ ಮತ್ತು ಸುತ್ತಮುತ್ತ ಗ್ರಾಮಸ್ಥರಿಗೆ ಹಲವಾರು ಸಮಸ್ಯೆಗಳನ್ನು ತಂದೊಡ್ಡಿದೆ.

ಬಿಬಿಎಂಪಿ ಸುರಿಯುತ್ತಿರುವ ರಾತ್ರೋರಾತ್ರಿ ಕಸದ ವಿಲೇ­ವಾರಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ­ದಿಂದ ಕೇವಲ 6–7 ಕಿ.ಮೀ ವ್ಯಾಪ್ತಿಯಲ್ಲಿ ನಡೆಯುತ್ತದೆ. ಇದ­ರಿಂದ ವಿವಿಧ ಹಕ್ಕಿ, ರಣಹದ್ದುಗಳು ವಿಮಾನ ಹಾರಾಟಕ್ಕೆ ಅಡಚಣೆ ಉಂಟು ಮಾಡುವ ಸಾಧ್ಯತೆಗಳಿವೆ. ಅಲ್ಲದೆ ವಿಮಾನ ನಿಲ್ದಾಣ ವ್ಯಾಪ್ತಿಯ ಐದಾರು ಕಿ.ಮೀ. ವ್ಯಾಪ್ತಿಯಲ್ಲಿ ಕೋಳಿ ಸಾಗಾಣಿಕೆಯನ್ನು ನಿಷೇಧಿಸಿದ್ದರೂ ತ್ಯಾಜ್ಯ ವಿಲೇವಾರಿ ಸ್ಥಳೀಯರಿಗೆ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ತಲೆ­ನೋವಾಗಿ ಪರಿಣಮಿಸಲಿದೆ ಎಂಬುದು ಪರಿಸರ ತಜ್ಞರ ಆರೋಪ.

ಪಟ್ಟಣದಲ್ಲಿ ಪುರಸಭೆ ಅಸ್ತಿತ್ವಕ್ಕೆ ಬಂದಿದ್ದರೂ ಇದುವ­ರೆಗೂ ಕಸ ಸಂಗ್ರಹಕ್ಕೆ ಸರ್ಕಾರ ನಿಗದಿತ ಜಾಗ ನೀಡಿಲ್ಲ. ಈ ಹಿಂದೆ ಕಾರ್ಯ ನಿರ್ವಹಿಸಿದ್ದ ಅಧ್ಯಕ್ಷರು ಸದಸ್ಯರು ಮತ್ತು ಪುರಸಭೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದ ಪರಿಣಾಮ ಪುರಸಭೆ ತಾನೇ ಗುರುತಿಸಿಕೊಂಡ ಕೆಲವು ಸರ್ಕಾರಿ ಜಾಗದಲ್ಲಿ ಕಸ ಸುರಿದು ನಿಟ್ಟುಸಿರು ಬಿಡುತ್ತಿದೆ. ಇಂತಹ ಸಂದರ್ಭದಲ್ಲಿ ಬೆಂಗಳೂರಿನಿಂದ ಕಸ ತುಂಬಿದ ಲಾರಿಗಳು ರಾತ್ರೋರಾತ್ರಿ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಹಾಗೂ ತಾಲ್ಲೂಕಿನ ಗುಡುವನಹಳ್ಳಿ ಅರಣ್ಯ ಪ್ರದೇಶ ಮತ್ತು ಐ.ವಿ.ಸಿ ರಸ್ತೆ ನರಗನಹಳ್ಳಿ ವ್ಯಾಪ್ತಿಯಲ್ಲಿ ಕಸ ಸುರಿ-­ಯು­­ತ್ತಿದ್ದು ಸುತ್ತಮುತ್ತ ಗ್ರಾಮಗಳ ವ್ಯಾಪ್ತಿ­ಯಲ್ಲಿ ದುರ್ವಾಸನೆ ಹರಡಿ ಗ್ರಾಮಸ್ಥ­ರನ್ನು ಕೆಂಗೆಡಿಸಿದೆ ಎಂಬುದು ಸಾರ್ವಜನಿಕರ ಆರೋಪ.

ಸರ್ಕಾರ ಡಿಸೆಂಬರ್ ಒಂದರ ನಂತರ ಮಂಡೂರಿನಲ್ಲಿ ಕಸ ವಿಲೇವಾರಿ ನಿಲ್ಲಿಸು­ವುದಾಗಿ ಅಲ್ಲಿನ ಜನರಿಗೆ ಭರವಸೆ ನೀಡಿದೆ. ಅಲ್ಲದೆ ಕಸ ವಿಲೇವಾರಿಗೆ ದೊಡ್ಡಬಳ್ಳಾಪುರ ತಾಲ್ಲೂಕು ಆರೂಢಿ ಗ್ರಾಮದ ಸುತ್ತ­ಮುತ್ತ 476 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿರುವುದು ಸ್ಥಳೀಯರ ವಿರೋ­ಧಕ್ಕೆ ಕಾರಣವಾಗಿದೆ. ಇದರ ನಡುವೆ ಎರಡು ಕಡೆಯಿಂದ ಪ್ರಬಲವಾದ ಹೋರಾಟ ಎದುರಿಸುತ್ತಿ­ರುವ ಸರ್ಕಾರ ತಟಸ್ಥ ನೀತಿ ಅನುಸರಿಸುತ್ತಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.