ADVERTISEMENT

ಬಿಬಿಎಂಪಿ: ಕಾಂಗ್ರೆಸ್‌ ಸದಸ್ಯರಿಗೆ ಬಿಜೆಪಿ ಗಾಳ!

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2015, 19:41 IST
Last Updated 4 ಸೆಪ್ಟೆಂಬರ್ 2015, 19:41 IST
ಬಿಬಿಎಂಪಿ: ಕಾಂಗ್ರೆಸ್‌ ಸದಸ್ಯರಿಗೆ ಬಿಜೆಪಿ ಗಾಳ!
ಬಿಬಿಎಂಪಿ: ಕಾಂಗ್ರೆಸ್‌ ಸದಸ್ಯರಿಗೆ ಬಿಜೆಪಿ ಗಾಳ!   

ಬೆಂಗಳೂರು: ಕಾಂಗ್ರೆಸ್ಸಿನ ಕಾರ್ಪೊರೇಟರ್‌ಗಳನ್ನು ‘ಖರೀದಿಸಲು’ ಬಿಜೆಪಿ ಮುಖಂಡರು ಮುಂದಾಗಿದ್ದಾರೆ ಎಂದು ಕಾಂಗ್ರೆಸ್‌ ಶುಕ್ರವಾರ ಆರೋಪಿಸಿದೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವರಾದ ರಾಮಲಿಂಗಾರೆಡ್ಡಿ, ದಿನೇಶ್‌ ಗುಂಡೂರಾವ್‌ ಮತ್ತು ಕೃಷ್ಣ ಬೈರೇಗೌಡ, ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಯನ್ನು ವಿರೋಧಿಸುತ್ತಿರುವ ಬಿಜೆಪಿ ವಿರುದ್ಧ ಹರಿಹಾಯ್ದರು.

‘ನಮ್ಮ ಪಕ್ಷದ 4–5 ಕಾರ್ಪೊರೇಟರ್‌ಗಳನ್ನು ಖರೀದಿಸಲು ಬಿಜೆಪಿ ಮುಖಂಡರು ಮುಂದಾಗಿದ್ದಾರೆ’ ಎಂದು ರಾಮಲಿಂಗಾರೆಡ್ಡಿ ಹೇಳಿದರು.
‘ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಒಂದು ವಾರ್ಡ್‌ನ ಮಹಿಳಾ ಕಾರ್ಪೊರೇಟರ್‌ ಒಬ್ಬರಿಗೆ ಕರೆ ಮಾಡಿದ್ದ ಬಿಜೆಪಿ ಮುಖಂಡರು, ಹಣ ಕೊಡುವುದಾಗಿ ಹೇಳಿದ್ದಾರೆ. ಆ ಸಂಭಾಷಣೆಯನ್ನು ಧ್ವನಿ ಮುದ್ರಿಸಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಅದನ್ನು ಬಹಿರಂಗಪಡಿಸಲಾಗುವುದು’ ಎಂದು ಶಾಸಕ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

ಯಾವುದು ಜನಾಭಿಪ್ರಾಯ?: ಬಿಬಿ ಎಂಪಿಯ ಮೇಯರ್‌ ಯಾರಾಗಬೇಕು ಎಂಬುದನ್ನು 260 ಜನ ತೀರ್ಮಾನಿಸಬೇಕು. 198 ಮಂದಿ ಕಾರ್ಪೊರೇಟರ್‌ಗಳು ಮಾತ್ರವಲ್ಲ. 260ರಲ್ಲಿ 131 ಜನರ ಮತ ಯಾರಿಗೆ ದೊರೆಯುತ್ತದೆಯೋ ಅವರೇ ಮೇಯರ್‌ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವಿನ ಮೈತ್ರಿ ಅಪವಿತ್ರ ಎಂದು ಬಿಜೆಪಿ ಆರೋಪಿಸುತ್ತಿದೆ. ಹಾಗಾದರೆ ಹಿಂದೆ ಬಿಜೆಪಿ ಮತ್ತು ಜೆಡಿಎಸ್‌ ಮಾಡಿಕೊಂಡಿದ್ದು ಪವಿತ್ರವಾಗಿತ್ತೇ? ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಅಪವಿತ್ರ ಎಂದು ಹೇಳುವ ನೈತಿಕತೆ ಬಿಜೆಪಿಗೆ ಇದೆಯೇ ಎಂದು ರೆಡ್ಡಿ ಪ್ರಶ್ನಿಸಿದರು.

ಬಿಜೆಪಿಯ ವಿಧಾನ ಪರಿಷತ್‌ ಸದಸ್ಯ ಜಗ್ಗೇಶ್‌ ಅವರ ಹೆಸರು ತುರುವೇಕೆರೆಯ ಮತದಾರರ ಪಟ್ಟಿಯಲ್ಲಿ ಈಗಲೂ ಇದೆ. ರಾಜ್ಯಸಭಾ ಸದಸ್ಯ ವೆಂಕಯ್ಯ ನಾಯ್ಡು ರಾಜ್ಯದವರೇ ಅಲ್ಲ. ಮೇಯರ್ ಚುನಾವಣೆಯಲ್ಲಿ ರಾಜ್ಯಸಭೆ, ವಿಧಾನ ಪರಿಷತ್ ಸದಸ್ಯರಿಗೆ ಮತದಾನದ ಅವಕಾಶ ಬೇಡ ಎಂದು ಅಧಿಕಾರ ದಲ್ಲಿದ್ದಾಗ ಬಿಜೆಪಿ ಆಗ್ರಹಿಸಲಿಲ್ಲ. ಈಗ ತನಗೆ ತೊಂದರೆ ಆದಾಗ, ಇವರಿಗೆ ಮತದಾನದ ಅವಕಾಶ ಇರಬಾರದು ಎನ್ನುತ್ತಿದೆ ಎಂದು ಆರೋಪಿಸಿದರು.
ಪಕ್ಷೇತರರಿಗೆ ಹಣದ ಆಮಿಷ ಒಡ್ಡ ಲಾಗಿದೆ ಎಂದು ಬಿಜೆಪಿ ಮುಖಂಡರು ಆರೋಪಿಸುತ್ತಿದ್ದಾರೆ. ಆದರೆ ಹಿಂದೆ ವಿ. ಸೋಮಣ್ಣರಿಗೆ ಬಿಜೆಪಿ ಸೇರಲು ಎಷ್ಟು ಮೊತ್ತ ಸಂದಾಯ ಆಗಿತ್ತು ಎಂಬುದನ್ನು ತಿಳಿಸುವರೇ ಎಂದು ಕೇಳಿದರು.
*
₹ 2.5 ಕೋಟಿ ಆಮಿಷ
ಚೌಡೇಶ್ವರಿ ವಾರ್ಡ್‌ನ ಕಾರ್ಪೊರೇಟರ್, ಕಾಂಗ್ರೆಸ್ಸಿನ ಪದ್ಮಾವತಿ ಅವರ ಪತಿ ಅಮರನಾಥ್‌ಗೆ ಕರೆ ಮಾಡಿ, ‘ನಿಮ್ಮ ಪತ್ನಿ ಬಿಜೆಪಿ ಸೇರಿದರೆ ₹ 2.5 ಕೋಟಿ ಕೊಡಲಾಗುವುದು ಎಂಬ ಆಮಿಷ ಒಡ್ಡಲಾಗಿತ್ತು’ ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದರು.
*
ಕಾಂಗ್ರೆಸ್‌ ಸದಸ್ಯರೂ ರೆಸಾರ್ಟ್‌ಗೆ
ಬೆಂಗಳೂರು:
ಜೆಡಿಎಸ್‌ ಬಳಿಕ ತನ್ನ ನೂತನ ಕಾರ್ಪೊರೇಟರ್‌ಗಳನ್ನು ರೆಸಾರ್ಟ್‌ಗೆ ಕಳುಹಿಸುವುದು ಈಗ ಕಾಂಗ್ರೆಸ್‌ನ ಸರದಿ. ಬಿಜೆಪಿ ತನ್ನ ಸದಸ್ಯರಿಗೆ ಎಲ್ಲಿ ಗಾಳ ಹಾಕುವುದೋ ಎಂಬ ಭೀತಿಯಿಂದ ಕಾಂಗ್ರೆಸ್‌ ಕೂಡ ಈಗ ರೆಸಾರ್ಟ್‌ ಹಾದಿ ಹಿಡಿದಿದೆ. ಲೋಕಸಭಾ ವ್ಯಾಪ್ತಿಗೆ ತಕ್ಕಂತೆ ಪಕ್ಷದ ಕಾರ್ಪೊರೇಟರ್‌ಗಳನ್ನು ನಾಲ್ಕು ತಂಡಗ ಳನ್ನಾಗಿ ಮಾಡಿ, ಒಂದೊಂದು ತಂಡ ವನ್ನು ಒಂದೊಂದು ಕಡೆ ಕಳುಹಿಸ ಲಾಗು ವುದು ಎಂದು ಶಾಸಕ ಎಸ್‌.ಟಿ. ಸೋಮ ಶೇಖರ್‌ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಕಾಂಗ್ರೆಸ್‌ 76 ಪಾಲಿಕೆ ಸದಸ್ಯರನ್ನು ಹೊಂದಿದ್ದು, ಅವರನ್ನೆಲ್ಲ ಶನಿವಾರ ಸ್ಥಳಾಂತರ ಮಾಡಲಾಗುವುದು ಎಂಬ ಊಹಾಪೋಹ ಈಗ ಸತ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.