ADVERTISEMENT

ಬಿಬಿಎಂಪಿ ಗುತ್ತಿಗೆದಾರ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 25 ಮೇ 2015, 19:36 IST
Last Updated 25 ಮೇ 2015, 19:36 IST
ರವಿಕುಮಾರ್‌ ಅವರ ಸಾವಿಗೆ ಪಾಲಿಕೆ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿ ಗುತ್ತಿಗೆದಾರರು ಬಿಬಿಎಂಪಿ ಕೇಂದ್ರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರು ಪಾಲಿಕೆ ಆಯುಕ್ತ ಜಿ.ಕುಮಾರ್‌ ನಾಯಕ್‌ ಅವರೊಂದಿಗೆ  ವಾಗ್ವಾದ ನಡೆಸಿದರು  ಪ್ರಜಾವಾಣಿ ಚಿತ್ರ
ರವಿಕುಮಾರ್‌ ಅವರ ಸಾವಿಗೆ ಪಾಲಿಕೆ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿ ಗುತ್ತಿಗೆದಾರರು ಬಿಬಿಎಂಪಿ ಕೇಂದ್ರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರು ಪಾಲಿಕೆ ಆಯುಕ್ತ ಜಿ.ಕುಮಾರ್‌ ನಾಯಕ್‌ ಅವರೊಂದಿಗೆ ವಾಗ್ವಾದ ನಡೆಸಿದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ಜ್ಞಾನಭಾರತಿ ಸಮೀಪದ ನಾಗರಬಾವಿಯಲ್ಲಿ ಸೋಮವಾರ ಬಿಬಿಎಂಪಿ ಉಪ ಗುತ್ತಿಗೆದಾರ ರವಿಕುಮಾರ್‌ (32) ಎಂಬುವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಗರಬಾವಿ ಸಮೀಪದ ಎನ್‌ಜಿಇಎಫ್ ಲೇಔಟ್‌ ನಿವಾಸಿಯಾದ ರವಿಕುಮಾರ್‌ ಅವರು ನಾಗರಬಾವಿಯಲ್ಲಿ ಕಚೇರಿ ಮಾಡಿಕೊಂಡಿದ್ದರು. ಬೆಳಿಗ್ಗೆ 11.30ರ ಸುಮಾರಿಗೆ ನೇಣು ಹಾಕಿಕೊಂಡಿದ್ದಾರೆ.

ರವಿಕುಮಾರ್ ಮಧ್ಯಾಹ್ನ ಊಟಕ್ಕೆ ಮನೆಗೆ ಬರದಿದ್ದಾಗ ಅನುಮಾನಗೊಂಡ ಅವರ ತಾಯಿ ‌ಕಚೇರಿಗೆ ಹೋಗಿ ನೋಡಿದಾಗ ನೇಣು ಹಾಕಿಕೊಂಡಿರು ವುದು ಬೆಳಕಿಗೆ ಬಂದಿದೆ. ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಗುತ್ತಿಗೆದಾರರ ಪ್ರತಿಭಟನೆ: ‌ರವಿಕುಮಾರ್‌ ಅವರ ಸಾವಿಗೆ ಬಿಬಿಎಂಪಿ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿ ನೂರಾರು ಗುತ್ತಿಗೆದಾರರು ಬಿಬಿಎಂಪಿ ಕೇಂದ್ರ ಕಚೇರಿ ಎದುರು ಸೋಮವಾರ ಸಂಜೆ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟ ನಾಕಾರರು ಬಿಬಿಎಂಪಿ ವಿರುದ್ಧ ಘೋಷಣೆ ಕೂಗಿ, ಕೂಡಲೇ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

‘ರವಿಕುಮಾರ್‌ ಅವರು ಬಿಬಿಎಂಪಿ ಗುತ್ತಿಗೆದಾರರ ಸಂಘದ ಉಪಾ ಧ್ಯಕ್ಷರೂ ಆಗಿ ದ್ದಾರೆ. ಅವರಿಗೆ ಪಾಲಿಕೆಯಿಂದ     ₨ 5 ಕೋಟಿ ಹಣ ಬಾಕಿ ಇತ್ತು. ಒಂದು ವಾರದ ಹಿಂದೆ ಪಾಲಿಕೆ ಅಧಿಕಾರಿಗಳನ್ನು ಭೇಟಿ ಮಾಡಿ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ಆದರೂ ಹಣ ಬಿಡುಗಡೆ ಮಾಡಿರಲಿಲ್ಲ’ ಎಂದು ಪ್ರತಿಭಟನಾಕಾರರು ಹೇಳಿದರು.

ಸಕಾಲಕ್ಕೆ ಕಾಮಗಾರಿ ಹಣ ಬಿಡುಗಡೆ ಆಗದಿದ್ದುದರಿಂದ ಸಾಲದ ಮೇಲಿನ ಬಡ್ಡಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಹೀಗಾಗಿ ತಕ್ಷಣ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಟಕಾರರು ಬಿಬಿಎಂಪಿ ಆಡಳಿತಾಧಿಕಾರಿ ಟಿ.ಎಂ.ವಿಜಯಭಾಸ್ಕರ್‌ ಅವರನ್ನು ಒತ್ತಾಯಿಸಿದರು.

ಗುತ್ತಿಗೆದಾರರ ಬೇಡಿಕೆಗಳಿಗೆ ಪ್ರತಿಕ್ರಿಯಿಸಿದ ವಿಜಯಭಾಸ್ಕರ್‌, ‘ಒಟ್ಟು ₨ 2,100 ಕೋಟಿಯಷ್ಟು ಗುತ್ತಿಗೆ ಹಣ ಬಾಕಿ ನೀಡಬೇಕಿದೆ. ನಮಗೂ ಆದಷ್ಟು ಬೇಗ ಬಾಕಿ ತೀರುಸುವ ಆಸೆ ಇದೆ. ಆದರೆ, ಪಾಲಿಕೆ ಆರ್ಥಿಕ ಸ್ಥಿತಿ ಅಷ್ಟೊಂದು ಉತ್ತಮವಾಗಿಲ್ಲ. ಹಂತ, ಹಂತವಾಗಿ ಹಣ ಬಿಡುಗಡೆ ಮಾಡಲಾಗುವುದು’ ಎಂದು ಹೇಳಿದರು.

‘ಕಾಮಗಾರಿಗಳ ಪರಿಶೀಲನಾ ವರದಿ ಬಂದಂತೆ ಹಣ ಬಿಡುಗಡೆಗೆ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ಭರವಸೆ ನೀಡಿದರು. ಪ್ರತಿಭಟ
ನಾಕಾರರು ಈ ಭರವಸೆಗೆ ಸಮ್ಮತಿ ಸೂಚಿಸಲಿಲ್ಲ. ಮಂಗಳವಾರ ಮತ್ತೆ ಪ್ರತಿಭಟನೆ ಮುಂದುವರಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT