ADVERTISEMENT

ಬಿಬಿಎಂಪಿ ವಿಭಜನೆಗೆ ವಿರೋಧ ಜನರು ಧ್ವನಿ ಎತ್ತಬೇಕು: ನಾಡಗೌಡ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2014, 19:31 IST
Last Updated 30 ಸೆಪ್ಟೆಂಬರ್ 2014, 19:31 IST

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಭಜನೆ ಸಂಬಂಧ ವರದಿ ನೀಡಲು ರಚಿಸಿರುವ ಸಮಿತಿಯಲ್ಲಿ ನಿವೃತ್ತ ಐಎಎಸ್‌ ಅಧಿಕಾರಿಗಳಿಗೆ ಸ್ಥಾನ ನೀಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಜನತಾದಳ (ಸಂಯುಕ್ತ) ರಾಜ್ಯ ಘಟಕ ಅಧ್ಯಕ್ಷ ಎಂ.ಪಿ.ನಾಡಗೌಡ ಅವರು, ಈ ಬಗ್ಗೆ ಜನರು ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.

ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ (ಆರ್‌ಪಿಐ) ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಬಿಬಿಎಂಪಿ ವಿಭಜನೆ: ಸಾಧಕ ಬಾಧಕ’ಗಳ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ವಿಭಜನೆ ಹಿಂದೆಯೇ ದೊಡ್ಡ ಹುನ್ನಾರ ಇರುವಂತಿದೆ. ಈ ಪ್ರಕ್ರಿಯೆಯಿಂದ ವಿದೇಶಿ ಕಂಪೆನಿಗಳಿಗೆ ಒಳ್ಳೆಯದಾಗಲಿದ್ದು, ಬಡವರು, ವ್ಯಾಪಾರಿಗಳು ಬೀದಿಗೆ ಬೀಳಲಿದ್ದಾರೆ. ಸರ್ಕಾರದ ಕ್ರಮವನ್ನು ಜನರು ಬೀದಿಗಿಳಿದು ಪ್ರತಿಭಟಿಸಬೇಕು’ ಎಂದರು.

‘ನಗರದಲ್ಲಿ ಮಳೆ ಬಂದರೆ ಅದನ್ನು ಎದುರಿಸುವ ಶಕ್ತಿ ಆಡಳಿತದಾರರಿಗೆ ಇಲ್ಲ. ಸಮರ್ಪಕ ತ್ಯಾಜ್ಯ ವಿಲೇವಾರಿ ಸಾಧ್ಯವಾಗುತ್ತಿಲ್ಲ. ಈಗ ಪಾಲಿಕೆಯನ್ನೇ ವಿಭಜನೆ ಮಾಡಲು ಮುಂದಾಗಿದ್ದಾರೆ. ಸಾರ್ವಜನಿಕರು, ಪಾಲಿಕೆ ಸದಸ್ಯರು ಹಾಗೂ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಬೇಕಿತ್ತು. ಅದನ್ನು ಬಿಟ್ಟು ಸಮಿತಿಯಲ್ಲಿ ಅಧಿಕಾರಿಗಳಿಗೆ ಮಹತ್ವ ನೀಡಲಾಗಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಸದಸ್ಯ ವಿರೋಧ: ಪಾಲಿಕೆಯ ಕಾಂಗ್ರೆಸ್‌ ಸದಸ್ಯ ಟಿ.ಮಲ್ಲೇಶ್‌ ಕೂಡ ವಿಭಜನೆಯನ್ನು ವಿರೋಧಿಸಿದರು. ‘110 ಕೋಟಿ ಜನರನ್ನು ಆಳಲು ಒಬ್ಬ ಪ್ರಧಾನಿಗೆ ಸಾಧ್ಯವಿರುವಾಗ 1 ಕೋಟಿ ಜನರನ್ನು ಆಳಲು ಒಬ್ಬ ಮೇಯರ್‌ಗೆ ಸಾಧ್ಯವಿಲ್ಲವೇ’ ಎಂದು ಪ್ರಶ್ನಿಸಿದರು.

ಬಡವರನ್ನು ತುಳಿಯುವ ಸಂಚು: ಆರ್‌ಪಿಐ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಮಾತನಾಡಿ, ‘ಪಾಲಿಕೆ ವಿಭಜನೆಯಾಗಬೇಕು ಎಂದು ಜನರು ಎಲ್ಲೂ ಪ್ರತಿಭಟನೆ ನಡೆಸಿಲ್ಲ. ಆದರೆ,  ಮೂವರು ಸದಸ್ಯರನ್ನು ನೇಮಿ­ಸುವ ಮೂಲಕ ವಿಭಜನೆ ಬೇಕು ಎಂದು ಅವರಿಂದ ಹೇಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದರ ಹಿಂದೆ ಬಡವರನ್ನು ತುಳಿಯುವ ಸಂಚು ಅಡಗಿದೆ’ ಎಂದರು.

ಆರ್‌ಪಿಐ ಕಾರ್ಯಾಧ್ಯಕ್ಷ ಕೆ.ಚಂದ್ರಶೇಖರ್‌, ಚಿಂತಕ ರವಿಚಂದ್ರ, ಕನ್ನಡ ಪಕ್ಷದ ರಾಜ್ಯಾಧ್ಯಕ್ಷ ಪುರುಷೋತ್ತಮ್‌ ಹಾಗೂ ಇತಿಹಾಸ ತಜ್ಞ ಚಿಕ್ಕರಂಗೇಗೌಡ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.