ADVERTISEMENT

ಬಿಬಿಎಂಪಿ: ಶುರುವಾಗಿದೆ ತಲೆಗಳ ಎಣಿಕೆ!

ಮ್ಯಾಜಿಕ್‌ ಸಂಖ್ಯೆಗಾಗಿ ಪಕ್ಷೇತರರ ಬೆನ್ನುಬಿದ್ದ ಬಿಜೆಪಿ–ಕಾಂಗ್ರೆಸ್‌ * ಜೆಡಿಎಸ್ ಓಲೈಕೆಗೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2015, 19:59 IST
Last Updated 28 ಆಗಸ್ಟ್ 2015, 19:59 IST

ಬೆಂಗಳೂರು:  ಬಿಬಿಎಂಪಿ ಚುನಾವಣೆಯಲ್ಲಿ ಅಧಿಕ ಸ್ಥಾನ ಪಡೆದ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮಧ್ಯೆ ಮೈತ್ರಿಗಾಗಿ ಮಾತುಕತೆ  ನಡೆದ ಬೆನ್ನಹಿಂದೆಯೇ ಮತಾಧಿಕಾರ ಹೊಂದಿದ ಸದಸ್ಯರ ತಲೆಗಳ ಎಣಿಕೆ ಕೂಡ ಶುರುವಾಗಿದೆ.

ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ ಮುಖಂಡರ ಚಿತ್ತವೆಲ್ಲ ಈಗ ಪಕ್ಷೇತರ ಸದಸ್ಯರ ಕಡೆಗೆ ಕೇಂದ್ರೀಕೃತವಾಗಿದೆ.
ಮೇಯರ್‌ ಚುನಾವಣೆಯಲ್ಲಿ ಪ್ರತಿ ಮತ ಕೂಡ ಮುಖ್ಯವಾಗಿದ್ದರಿಂದ ಮತದಾನದ ಹಕ್ಕು ಹೊಂದಿದ ಪಾಲಿಕೇತರ ಸದಸ್ಯರ ಸಂಖ್ಯೆಯನ್ನು ಕಾಂಗ್ರೆಸ್‌ ಲೆಕ್ಕ ಹಾಕುತ್ತಿದೆ. ಬೇರೆ ಜಿಲ್ಲೆಗಳಲ್ಲಿ ವಾಸವಾಗಿದ್ದು ಈಗ ಬೆಂಗಳೂರಿಗೆ ನಿವಾಸ ಬದಲಿಸಿದ ರಾಜ್ಯಸಭಾ ಹಾಗೂ ವಿಧಾನ ಪರಿಷತ್‌ ಸದಸ್ಯರ ಮತಾಧಿಕಾರಕ್ಕಾಗಿ ಕಾಂಗ್ರೆಸ್‌ ಯತ್ನಿಸುತ್ತಿದೆ.

ಬೇರೆ ಜಿಲ್ಲೆಗಳ ವಿವರ ಕೊಟ್ಟಿದ್ದ ಅಂತಹ ಸದಸ್ಯರ ಮಾಹಿತಿ ಕಲೆಹಾಕಲು ಬಿಜೆಪಿ ನಿರ್ಧರಿಸಿದೆ. ಹೀಗಾಗಿ ಆಯಾ ಜಿಲ್ಲೆಗಳ ಕೆಡಿಪಿ ಸಭೆಗಳ ವಿವರ ಪಡೆಯಲು ಸಂದೇಶ ರವಾನೆಯಾಗಿದೆ. ಕಾನೂನು ತಜ್ಞರನ್ನೂ ಸಂಪರ್ಕಿಸಿರುವ ಬಿಜೆಪಿ ಮುಖಂಡರು ಮುಂದಿನ ಹೆಜ್ಜೆ ಬಗೆಗೆ ಸಲಹೆ ಪಡೆದಿದ್ದಾರೆ. ಪಕ್ಷೇತರರನ್ನು ಸಂಪರ್ಕಿಸಿ, ಮನ ಒಲಿಸುವ ಹೊಣೆಯನ್ನು ಮುಖಂಡ ವಿ.ಸೋಮಣ್ಣ ಅವರಿಗೆ ವಹಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಫಲಿತಾಂಶ ಘೋಷಣೆ ಆದಮೇಲೆ ಮೂವರು ಪಕ್ಷೇತರರು (ಪಕ್ಷದ ವಿರುದ್ಧ ಬಂಡಾಯ ಎದ್ದು ಜಯಿಸಿದವರು) ನಮಗೆ ಬೆಂಬಲ ನೀಡಲು ಬಂದಿದ್ದರು. ಆದರೆ ಸ್ಥಳೀಯ ಶಾಸಕರಾದ ಅರವಿಂದ ಲಿಂಬಾವಳಿ, ಸಿ.ರಘು ಅಷ್ಟಾಗಿ ಆಸಕ್ತಿ ತೋರಲಿಲ್ಲ. ಅದೇ ಈಗ ನಮಗೆ ಮುಳು
ವಾಗಿದೆ’ ಎಂದು ಹೆಸರು ಬಿಜೆಪಿಯ ನಾಯಕರೊಬ್ಬರು ಹೇಳುತ್ತಾರೆ.

‘ನಮ್ಮ ಪಕ್ಷಕ್ಕೆ ಅಧಿಕಾರದ ಲಾಲಸೆಯೇನೂ ಇಲ್ಲ. ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ತಡೆಯಲು ಕಾಂಗ್ರೆಸ್‌ನಿಂದ ಅಧಿಕೃತ ಪ್ರಸ್ತಾವ ಬಂದರಷ್ಟೇ ಬೆಂಬಲ ನೀಡಲು ಪರಿಶೀಲನೆ ಮಾಡೋಣ ಎಂಬುದು ನಮ್ಮ ನಾಯಕ ಎಚ್‌.ಡಿ.ದೇವೇಗೌಡ ಅವರ ಅಭಿ
ಪ್ರಾಯ’ ಎಂದು ಜೆಡಿಎಸ್‌ ಮುಖಂಡ ವೈಎಸ್‌ವಿ ದತ್ತಾ ವಿವರಿಸುತ್ತಾರೆ.

ಪ್ರಮುಖ ಪಾತ್ರಧಾರಿಗಳು

ಮೇಯರ್‌ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಪಕ್ಷೇತರ ಸದಸ್ಯರು ಇಂತಿದ್ದಾರೆ:
ಬಿಜೆಪಿಗೆ ಬಂಡಾಯ ಎದ್ದು ಜಯಿಸಿದವರು: ಆನಂದಕುಮಾರ್‌ (ಹೊಯ್ಸಳನಗರ), ಚಂದ್ರಪ್ಪ ರೆಡ್ಡಿ (ಕೋನೇನ ಅಗ್ರಹಾರ), ರಮೇಶ್‌ (ಮಾರತ್‌ಹಳ್ಳಿ);
ಕಾಂಗ್ರೆಸ್‌ಗೆ ಬಂಡಾಯ ಎದ್ದು ಜಯಿಸಿದವರು: ಏಳುಮಲೈ (ಸಗಾಯಪುರ), ಮಮತಾ ಸರವಣ (ಹಲಸೂರು, ಈಗ ಬಿಜೆಪಿ ಸೇರ್ಪಡೆ ಆಗಿದ್ದಾರೆ), ಗಾಯತ್ರಿ (ಕೆಂಪಾಪುರ ಅಗ್ರಹಾರ); ಎಸ್‌ಡಿಪಿಐ ಸದಸ್ಯ: ಮುಜಾಹಿದ್‌ ಪಾಷಾ (ಸಿದ್ದಾಪುರ).

ದಿನದ ಬೆಳವಣಿಗೆ
* ಜೆಡಿಎಸ್‌ ಶಾಸಕರಾದ ವೈಎಸ್‌ವಿ ದತ್ತಾ ಹಾಗೂ ಜಮೀರ್‌ ಅಹ್ಮದ್‌ ಖಾನ್‌ ಅವರಿಂದ ಮುಖ್ಯಮಂತ್ರಿ ಭೇಟಿ

* ಸಿದ್ದರಾಮಯ್ಯ ಅವರೊಂದಿಗೆ ಸಿ.ಎಂ. ಇಬ್ರಾಹಿಂ ಚರ್ಚೆ

* ಜಮೀರ್‌ ಅಹ್ಮದ್‌ ಖಾನ್‌, ಎನ್‌. ಚೆಲುವರಾಯಸ್ವಾಮಿ ಅವರಿಂದ ಪಕ್ಷದ ಶಾಸಕರು, ಕಾರ್ಪೊರೇಟರ್‌ಗಳ ಸಭೆ

* ಯಾರ ಸಂಪರ್ಕಕ್ಕೂ ಸಿಗದೆ ಗೌಪ್ಯವಾಗಿ ಉಳಿದ ಪಕ್ಷೇತರರು. ಮೊಬೈಲ್‌ಗಳು ಸಹ ಸ್ವಿಚ್ಡ್‌ ಆಫ್‌

* ‘ಕೃಷ್ಣಾ’ದಲ್ಲಿ ಸಚಿವ ರಾಮಲಿಂಗಾ ರೆಡ್ಡಿ, ಶಾಸಕರಾದ ಬೈರತಿ ಬಸವರಾಜು, ಮುನಿರತ್ನ, ಎಸ್‌.ಟಿ. ಸೋಮಶೇಖರ್‌ ಜತೆ ಮುಖ್ಯಮಂತ್ರಿ ಸಮಾಲೋಚನೆ

* ಎಚ್ಚರಿಕೆ ಹೆಜ್ಜೆ ಇಡಲು ಎಚ್‌.ಡಿ. ಕುಮಾರಸ್ವಾಮಿ ಅವರಿಂದ ಸಂದೇಶ ರವಾನೆ

* ಹೈಕಮಾಂಡ್‌ ಅನುಮತಿ ಪಡೆದು, ಅಧಿಕೃತ ಪ್ರಸ್ತಾವ ಸಲ್ಲಿಸಲು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಸೂಚನೆ

* ಎಸ್‌ಡಿಪಿಐನಿಂದ ಆಯ್ಕೆಯಾದ ಪಾಲಿಕೆ ಸದಸ್ಯ ಮುಜಾಹಿದ್‌ ಪಾಷಾ ಅವರ ಮನೆಗೆ ರಾತ್ರಿ ಜಮೀರ್‌ ಅಹ್ಮದ್‌ ಖಾನ್‌ ಭೇಟಿ

* ಕೇಂದ್ರ ಕಚೇರಿಗೆ ದೌಡಾಯಿಸಿದ ಬಿಜೆಪಿ ಮುಖಂಡರು. ಮಧ್ಯಾಹ್ನದಿಂದ ತಡರಾತ್ರಿವರೆಗೆ ಬೆಂಬಿಡದೆ ಸಭೆ, ತಂತ್ರಗಾರಿಕೆ ಕುರಿತು ಚರ್ಚೆ. ಕಾಯ್ದುನೋಡುವ ತೀರ್ಮಾನ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.