ADVERTISEMENT

ಬಿಬಿಎಂಪಿ ಸಹಾಯಕ ಎಂಜಿನಿಯರ್ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 21:00 IST
Last Updated 24 ಮಾರ್ಚ್ 2017, 21:00 IST

ಬೆಂಗಳೂರು: ಬಿಬಿಎಂಪಿ ಹನುಮಂತನಗರ ವಾರ್ಡ್‌ ಕಚೇರಿಗೆ ನುಗ್ಗಿ ಸಹಾಯಕ ಎಂಜಿನಿಯರ್ ಗಿರೀಶ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಶ್ರೀನಿವಾಸ್ (47) ಎಂಬಾತನನ್ನು ಕೆಂಪೇಗೌಡ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಆರೋಪಿಯು ಠಾಣೆಗೆ ಕರೆದೊಯ್ಯುತ್ತಿದ್ದಂತೆಯೇ ಎದೆ ನೋವು ಎಂದು ಕುಸಿದು ಬಿದ್ದ. ಹೀಗಾಗಿ, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚೇತರಿಸಿಕೊಂಡ ಬಳಿಕ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ’ ಎಂದು ಪೊಲೀಸರು ಹೇಳಿದ್ದಾರೆ.

ಮಾರ್ಚ್ 21ರ ಸಂಜೆ 6 ಗಂಟೆ ಸುಮಾರಿಗೆ ವಾರ್ಡ್ ಕಚೇರಿಗೆ ನುಗ್ಗಿದ ಶ್ರೀನಿವಾಸ್, ‘ರಸ್ತೆ ಕಾಮಗಾರಿ ಸೇರಿದಂತೆ ವಾರ್ಡ್‌ನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಸರಿಯಾಗಿ ಕೆಲಸ ಮಾಡದಿದ್ದರೆ ಬೂಟು ಕಾಲಿನಲ್ಲಿ ಒದೆಯುತ್ತೇನೆ’ ಎಂದು ಗಿರೀಶ್ ಅವರನ್ನು ನಿಂದಿಸಿದ್ದಾನೆ ಎನ್ನಲಾಗಿದೆ.

ಆತನ ವರ್ತನೆಯಿಂದ ಕುಪಿತಗೊಂಡ ಗಿರೀಶ್, ಏರು ಧ್ವನಿಯಲ್ಲೇ ಪ್ರತಿಕ್ರಿಯಿಸಿದ್ದಾರೆ. ಆಗ ಅವರ ಮೇಲೆ ಶ್ರೀನಿವಾಸ್ ಹಲ್ಲೆ ನಡೆಸಿದ. ಆತನನ್ನು ನಿಯಂತ್ರಿಸಲು ಹೋದ ವರ್ಕ್‌ ಇನ್‌ಸ್ಪೆಕ್ಟರ್ ದೇವವರ್ಮ ಅವರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಶ್ರೀನಿವಾಸ್ 2016ರಲ್ಲೂ ಈತ ಇದೇ ಕಚೇರಿಯಲ್ಲಿ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.