ADVERTISEMENT

ಬುಲ್‌ ಬಾರ್, ಕ್ರ್ಯಾಶ್ ಗಾರ್ಡ್‌ ಅಳವಡಿಕೆ ನಿಷೇಧ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2017, 19:30 IST
Last Updated 16 ಡಿಸೆಂಬರ್ 2017, 19:30 IST
ಕಾರಿಗೆ ಅಳವಡಿಸಿರುವ ಬುಲ್ ಬಾರ್‌
ಕಾರಿಗೆ ಅಳವಡಿಸಿರುವ ಬುಲ್ ಬಾರ್‌   

ಬೆಂಗಳೂರು: ಮೋಟಾರು ವಾಹನಗಳಿಗೆ ಬುಲ್‌ ಬಾರ್ ಹಾಗೂ ಕ್ರ್ಯಾಶ್‌ ಗಾರ್ಡ್‌ ಅಳವಡಿಸುವುದನ್ನು ನಿಷೇಧಿಸಿ ಕೇಂದ್ರ ಸಾರಿಗೆ ಸಚಿವಾಲಯವು ಡಿ. 7ರಂದು ಸುತ್ತೋಲೆ ಹೊರಡಿಸಿದೆ. ಇದರ ಪ್ರತಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ದೇಶದಲ್ಲಿ ಸಂಭವಿಸಿದ್ದ  ಹಲವು ಅಪಘಾತಗಳಲ್ಲಿ ಬುಲ್‌ ಬಾರ್ ಹಾಗೂ ಕ್ರ್ಯಾಶ್‌ ಗಾರ್ಡ್‌ ತಾಗಿ ಹಲವರು ಮೃತಪಟ್ಟಿದ್ದಾರೆ. ಇನ್ನು ಹಲವರು ಗಾಯ
ಗೊಂಡಿದ್ದಾರೆ.  ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವಾಲಯವು ಈ ಸುತ್ತೋಲೆ ಹೊರಡಿಸಿ, ಅದರಲ್ಲಿರುವ ಅಂಶಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಎಲ್ಲ ರಾಜ್ಯಗಳ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ವಾಹನಗಳು ಅಂದವಾಗಿ ಕಾಣಬೇಕು. ಅವಘಡಗಳು ಸಂಭವಿಸಿದಾಗ ವಾಹನದ ಮುಂಭಾಗಕ್ಕೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ಮಾಲೀಕರು, ಬುಲ್‌ ಬಾರ್ ಹಾಗೂ ಕ್ರ್ಯಾಶ್‌ ಗಾರ್ಡ್‌ ಅಳವಡಿಸುತ್ತಿದ್ದಾರೆ.

ADVERTISEMENT

‘ಮೋಟಾರ್ ವಾಹನಗಳ ಕಾಯ್ದೆ 1988ರ ಸೆಕ್ಷನ್‌ 52ರ ಪ್ರಕಾರ ಬುಲ್‌ ಬಾರ್ ಹಾಗೂ ಕ್ರ್ಯಾಶ್‌ ಗಾರ್ಡ್‌ಗಳನ್ನು ತೆರವು ಮಾಡುವಂತೆ ವಾಹನಗಳ ಮಾಲೀಕರಿಗೆ ಸೂಚನೆ ನೀಡಬೇಕು. ಈ ನಿಯಮವನ್ನು ಯಾರೂ ಉಲ್ಲಂಘಿಸುತ್ತಾರೋ ಅವರ ವಿರುದ್ಧ ಸೆಕ್ಷನ್‌ 190 ಹಾಗೂ 191 ಅಡಿ ಕ್ರಮ ಜರುಗಿಸಿ ದಂಡ ವಿಧಿಸಬೇಕು’ ಎಂದು ಸಚಿವಾಲಯದ ನಿರ್ದೇಶಕರಾದ ಪ್ರಿಯಾಂಕಾ ಭಾರತಿ ಸಹಿ ಮಾಡಿರುವ ಸುತ್ತೋಲೆಯಲ್ಲಿ ಬರೆಯಲಾಗಿದೆ.

ನಿಷೇಧದ ಮಾಹಿತಿ ಇಲ್ಲ: ‘ಬುಲ್‌ ಬಾರ್ ಹಾಗೂ ಕ್ರ್ಯಾಶ್‌ ಗಾರ್ಡ್‌ ನಿಷೇಧದ ಬಗ್ಗೆ ಯಾವುದೇ ಸುತ್ತೋಲೆ ಬಂದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅಂಥ ಸುತ್ತೋಲೆ ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ’ ಎಂದು ಸಾರಿಗೆ ಇಲಾಖೆಯ ಆಯುಕ್ತ ಬಿ.ದಯಾನಂದ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸುತ್ತೋಲೆ ಬಗ್ಗೆ ನಿಖರ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ. ಕೇಂದ್ರ ಸಾರಿಗೆ ಸಚಿವಾಲಯದ ಸುತ್ತೋಲೆ ಅಧಿಕೃತವಾಗಿ ಕೈ ಸೇರಿದ ಬಳಿಕ ರಾಜ್ಯದಲ್ಲಿ ಅದರ ಜಾರಿಗೆ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದೇವೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.