ADVERTISEMENT

ಬೆಂಗಳೂರಿನಲ್ಲಿ ವಿದ್ಯಾರ್ಥಿಗಳಿಂದ ಭಾರಿ ಪ್ರತಿಭಟನೆ

ಯರ್ರಾಬಿರ್ರಿ ನುಗ್ಗಿದ ಟ್ಯಾಂಕರ್‌ಗೆ 2 ಬಲಿ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2015, 6:38 IST
Last Updated 27 ಫೆಬ್ರುವರಿ 2015, 6:38 IST

ಬೆಂಗಳೂರು: ಇಲ್ಲಿನ ಹೆಬ್ಬಾಳ ಸಮೀಪದ ಕೆಂಪಾಪುರ ಜಂಕ್ಷನ್‌ನಲ್ಲಿ ಗುರುವಾರ ಮಧ್ಯಾಹ್ನ ಸಿಗ್ನಲ್‌ ದಾಟುವಾಗ ಏಕಾಏಕಿ ಬಂದೆರಗಿದ ಟ್ಯಾಂಕರ್‌ಗೆ ಬಲಿಯಾದ ವಿದ್ಯಾರ್ಥಿನಿ ಅರ್ಪಿತಾ (19) ಹಾಗೂ ಆನಂದ್ (25) ಅವರ ಸಾವಿಗೆ ಆಕ್ರೋಶ ವ್ಯಕ್ತಪಡಿಸಿ ಸಾವಿರಾರು ವಿದ್ಯಾರ್ಥಿಗಳು ರಸ್ತೆಗಳಿದಿದ್ದು, ಶುಕ್ರವಾರ ಬೆಳಿಗ್ಗೆಯಿಂದ ಇಲ್ಲಿನ ಕೆಂಪಾಪುರ ಜಂಕ್ಷನ್‌ನಲ್ಲಿ ರಸ್ತೆ ತಡೆದು ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಹೆಬ್ಬಾಳದ ಸಿಂಧಿ ಕಾಲೇಜಿನ ದ್ವಿತೀಯ ವರ್ಷದ ಬಿ.ಕಾಂ ವಿದ್ಯಾರ್ಥಿನಿ ಅರ್ಪಿತಾ ಹಾಗೂ ದೊಡ್ಡ­ಬಳ್ಳಾಪುರದ ಗೊಲ್ಲರಹಳ್ಳಿ ಆನಂದ್  ಮೃತಪಟ್ಟವರು. ಘಟನೆಯಲ್ಲಿ ಅಕ್ಷತಾ, ಕುಸುಮಶ್ರೀ ಹಾಗೂ ಸುಮಂತ್‌­ರೆಡ್ಡಿ ಎಂಬುವರು ಗಾಯ­ಗೊಂಡಿದ್ದು, ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಚಾಲಕ ಯತೀಶ್‌ ಬಾಬು (28) ಹೆಬ್ಬಾಳ ಸಂಚಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗುರುವಾರ ಮಧ್ಯಾಹ್ನ 12.50ರ ಸುಮಾರಿಗೆ ಈ ಘಟನೆ ನಡೆದಾಗ ಸುಮಾರು 15ಕ್ಕೂ ಹೆಚ್ಚು ಪಾದಚಾರಿಗಳು ರಸ್ತೆ ದಾಟುತ್ತಿದ್ದರು.

ಸಿಂಧಿ, ವಿದ್ಯಾನಿಕೇತನ, ಪ್ರೆಸಿಡೆನ್ಸಿ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು  ಹೆಬ್ಬಾಳದ ಕೆಂಪಾಪುರ ಜಂಕ್ಷನ್‌ ಬಳಿ ಸೇರಿದ್ದು, ರಸ್ತೆಯನ್ನು ಸಂಪೂರ್ಣವಾಗಿ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.  ಇದರಿಂದ ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯಲ್ಲಿ ಭಾರಿ ಟ್ರಾಪಿಕ್‌ ಜಾಮ್‌ ಉಂಟಾಗಿದೆ. ಸುಮಾರು 6 ಕಿ.ಮೀ ಉದ್ದದವರೆಗೆ ವಾಹನಗಳು ಸಾಲುಗಟ್ಟಿ ನಿಂತಿವೆ. ವಿದ್ಯಾರ್ಥಿಗಳ ಪ್ರತಿಭಟನೆಗೆ ಸ್ಥಳೀಯರು ಸಹ ಬೆಂಬಲ ಸೂಚಿಸಿ ರಸ್ತೆಗಿಳಿದಿರುವುದರಿಂದ  ಸ್ಥಳದಲ್ಲಿ ಭಾರಿ ಜನದಟ್ಟಣೆ ಉಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT