ADVERTISEMENT

ಬೆಂಗಳೂರು ವಿ.ವಿ ಸಿಂಡಿಕೇಟ್ ವಿರೋಧ

ನಾಲ್ಕು ವಿ.ವಿಗಳಾಗಿ ವಿಭಜನೆ: ಸಂಪುಟ ಉಪಸಮಿತಿ ಶಿಫಾರಸು

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2015, 19:51 IST
Last Updated 4 ಮಾರ್ಚ್ 2015, 19:51 IST

ಬೆಂಗಳೂರು: ಬೆಂಗಳೂರು ವಿವಿಯನ್ನು ನಾಲ್ಕು ವಿಶ್ವವಿದ್ಯಾಲಯಗಳನ್ನಾಗಿ ವಿಭಜಿಸ­ಬೇಕು ಎಂಬ ಸಚಿವ ಸಂಪುಟ ಉಪ­ಸಮಿತಿಯ ಶಿಫಾರಸಿಗೆ ಬೆಂಗಳೂರು ವಿವಿಯ ಸಿಂಡಿಕೇಟ್‌ ಸಭೆಯಲ್ಲಿ ವಿರೋಧ ವ್ಯಕ್ತವಾಗಿದೆ.

ವಿವಿಯಲ್ಲಿ ಬುಧವಾರ ನಡೆದ ಸಿಂಡಿಕೇಟ್‌ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಲಪತಿ ಪ್ರೊ.ಬಿ.ತಿಮ್ಮೇಗೌಡ, ‘ಮೂರು ಪ್ರತ್ಯೇಕ ವಿವಿಗಳನ್ನು ಸ್ಥಾಪಿಸಬೇಕು ಹಾಗೂ ಬೆಂಗಳೂರು ವಿವಿಯನ್ನು ಕೇಂದ್ರ ವಿವಿಯನ್ನಾಗಿ ಮಾಡಬೇಕು ಎಂದು ಉಪಸಮಿತಿ ಶಿಫಾರಸು ಮಾಡಿದೆ. ಹೀಗೆ ಮಾಡಿದರೆ ಬೆಂಗಳೂರು ವಿವಿಗೆ ಸಮಸ್ಯೆ ಆಗಲಿದೆ. ಈ ಸಂಬಂಧ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆಯಲಾಗುವುದು. ಅಲ್ಲದೆ ಸಚಿವರ ಬಳಿಗೆ ಸಿಂಡಿಕೇಟ್‌ ಸದಸ್ಯರ ನಿಯೋಗ ತೆರಳಲಿದೆ’ ಎಂದರು.

‘ಬೆಂಗಳೂರು ವಿವಿಯನ್ನು ಕೇಂದ್ರ ವಿವಿಯನ್ನಾಗಿ ಮಾಡಿದರೆ ಅನುದಾನದ ಕೊರತೆ ಉಂಟಾಗಲಿದೆ. ಕಾಲೇಜುಗಳಿಂದ ಮಾನ್ಯತಾ ಶುಲ್ಕವೂ ಸಿಗುವುದಿಲ್ಲ. ಸರ್ಕಾರ ಈಗ ನೀಡುತ್ತಿರುವ ಅನುದಾನದಿಂದ ವಿವಿ ನಿರ್ವಹಣೆ ಕಷ್ಟ. ಒಂದು ವೇಳೆ ಕೇಂದ್ರ ವಿವಿಯನ್ನಾಗಿ ಮಾಡಿದರೆ ಮೂರು ಪಟ್ಟು ಅನುದಾನ ನೀಡಬೇಕು ಎಂದು ಮನವಿ ಮಾಡಲಾಗುವುದು’ ಎಂದರು.

‘ಬೆಂಗಳೂರು ವಿವಿ ವಿಭಜನೆಗೆ ನಮ್ಮ ವಿರೋಧ ಇಲ್ಲ. ಬೆಂಗಳೂರು ಕೇಂದ್ರ ಭಾಗದ ಜನರ ಅನುಕೂಲಕ್ಕಾಗಿ  ಬೆಂಗಳೂರು ವಿವಿ ಹಾಗೆಯೇ ಇರಲಿ. ಹೊರ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮತ್ತೆರಡು ವಿವಿ ಸ್ಥಾಪಿಸಲಿ. ಅವುಗಳಿಗೆ ಬೆಂಗಳೂರು ದಕ್ಷಿಣ ವಿವಿ, ಬೆಂಗಳೂರು ಉತ್ತರ ವಿವಿ ಎಂದು ಹೆಸರು ಇಡಲಿ. ಆಗ ಬೆಂಗಳೂರು ಬ್ರ್ಯಾಂಡ್‌ ಸಹ ಉಳಿಯುತ್ತದೆ’ ಎಂದು ಅವರು ಸಲಹೆ ನೀಡಿದರು.

ಒಂದೇ ಸ್ಥಳದಲ್ಲಿ ಎರಡು ಕಾಲೇಜು:  ಒಂದೇ ಸ್ಥಳದಲ್ಲಿ ಇರುವ ಎರಡು ಕಾಲೇಜುಗಳಿಗೆ ಮಾನ್ಯತೆ ಮುಂದುವರಿಸಲು ಎಲ್‌ಐಸಿ (ಸ್ಥಳೀಯ ವಿಚಾರಣಾ ಸಮಿತಿ) ಶಿಫಾರಸು ಮಾಡಿರುವ ಅಂಶ ಬೆಳಕಿಗೆ ಬಂದಿದೆ. ಇಂತಹ ಮೂರು ಉದಾಹರಣೆಗಳನ್ನು ಸಿಂಡಿಕೇಟ್‌ ಸಭೆಯಲ್ಲಿ ಪತ್ತೆ ಹಚ್ಚಲಾಯಿತು.

‘ಸುಂಕದಕಟ್ಟೆಯಲ್ಲಿರುವ ಲಕ್ಷ್ಮಿ ಕಾಲೇಜು ಹಾಗೂ ರಾಜಾರಾಮ್‌ ಮೋಹನರಾಯ್‌ ಕಾಲೇಜುಗಳು ಒಂದೇ ಸ್ಥಳದಲ್ಲಿವೆ. ಅದೇ ರೀತಿಯಲ್ಲಿ ಎಸ್‌.ಜಿ.ಹಳ್ಳಿಯಲ್ಲಿರುವ ಶ್ರೀನಿಧಿ ಕಾಲೇಜು, ಪ್ರಿನ್ಸ್‌ ಕಾಲೇಜು ಒಂದೇ ಸ್ಥಳದಲ್ಲಿವೆ. ಬೆಂಗಳೂರು ಕಾಲೇಜು, ಬೆಂಗಳೂರು ಸಿಟಿ ಎಜುಕೇಷನ್‌ ಕಾಲೇಜು ಪ್ರಕರಣವೂ ಅದೇ ರೀತಿ ಇದೆ. ಈ ಕಾಲೇಜುಗಳಿಗೆ ಮಾನ್ಯತೆ ನೀಡಬಹುದು ಎಂದು ಎಲ್‌ಐಸಿ ಶಿಫಾರಸು ಮಾಡಿತ್ತು’ ಎಂದು ಕುಲಪತಿ ಬಹಿರಂಗಪಡಿಸಿದರು.

‘ಒಂದೇ ಸ್ಥಳದಲ್ಲಿ ಎರಡು ಕಾಲೇಜುಗಳನ್ನು ನಡೆಸಲು ಕಾನೂನಿನಲ್ಲಿ ಅವಕಾಶ ಇಲ್ಲ. ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಹೆಚ್ಚಿಸಲು ಮಾತ್ರ ಅವಕಾಶ ಇದೆ. ಹೀಗಾಗಿ ಎಲ್‌ಐಸಿ ಮುಖ್ಯಸ್ಥರನ್ನು ಕರೆಸಿ ವಿಚಾರಿಸಲಾಯಿತು. ಅವರಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ. ಈ
ಮೂರು ಕಾಲೇಜುಗಳ ಮೂಲಸೌಕರ್ಯಗಳ ಪರಿಶೀಲನೆಗೆ ಮತ್ತೊಂದು ಸಮಿತಿಯನ್ನು ಕಳುಹಿಸಲಾಗುವುದು’
ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.