ADVERTISEMENT

‘ಬೆಳ್ಳಂದೂರು ಕೆರೆಯಲ್ಲ, ಕಾಂಗ್ರೆಸ್‌ ಕೆರೆ’

ನವ ಭಾರತ ಪ್ರಜಾಸತ್ತಾತ್ಮಕ ಪಕ್ಷದ ಕಾರ್ಯಕರ್ತರ ಧರಣಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2017, 20:18 IST
Last Updated 22 ಆಗಸ್ಟ್ 2017, 20:18 IST
‘ಬೆಳ್ಳಂದೂರು ಕೆರೆಯಲ್ಲ, ಕಾಂಗ್ರೆಸ್‌ ಕೆರೆ’
‘ಬೆಳ್ಳಂದೂರು ಕೆರೆಯಲ್ಲ, ಕಾಂಗ್ರೆಸ್‌ ಕೆರೆ’   

ಬೆಂಗಳೂರು: ‘ಬೆಳ್ಳಂದೂರು ಕೆರೆಯನ್ನು ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರ ವಿಫಲವಾಗಿದೆ’ ಎಂದು ಆರೋಪಿಸಿ ನವ ಭಾರತ ಪ್ರಜಾಸತ್ತಾತ್ಮಕ ಪಕ್ಷದ ಕಾರ್ಯಕರ್ತರು ಮಂಗಳವಾರ ಧರಣಿ ನಡೆಸಿದರು.

ಈ ಕೆರೆಗೆ ‘ಕಾಂಗ್ರೆಸ್ ಕೆರೆ’ ಎಂದು ಮರುನಾಮಕರಣ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌, ಸಂಸದ ಪಿ.ಸಿ.ಮೋಹನ್ ಹಾಗೂ ಶಾಸಕ ಅರವಿಂದ ಲಿಂಬಾವಳಿ ಅವರ ಭಾವಚಿತ್ರದ ಮಾಸ್ಕ್‌ ಹಾಕಿಕೊಂಡಿದ್ದ ಕಾರ್ಯಕರ್ತರು ನಾಮಕರಣದಲ್ಲಿ ಪಾಲ್ಗೊಂಡಿದ್ದರು.

‘ಬೆಳ್ಳಂದೂರು ಕೆರೆಯಲ್ಲಿ 4–5 ವರ್ಷಗಳಿಂದ ನೊರೆ ಸಮಸ್ಯೆ ಕಾಣಿಸಿಕೊಂಡಿದೆ. ಈ ಭಾಗದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಕೆರೆಯನ್ನು ಸ್ವಚ್ಛಗೊಳಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (ಎನ್‌ಜಿಟಿ) ಚಾಟಿ ಬೀಸಿತ್ತು. ಆದರೆ, ನೆಪ ಮಾತ್ರಕ್ಕೆ ಕೆರೆಯನ್ನು ಸ್ವಚ್ಛಗೊಳಿಸಲಾಗುತ್ತಿದೆ. ಕಳೆ ತೆಗೆಯುವ ಕಾರ್ಯ ಆಮೆಗತಿಯಲ್ಲಿ ಸಾಗಿದೆ’ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅನಿಲ್ ಶೆಟ್ಟಿ ದೂರಿದರು.

ADVERTISEMENT

‘ಕೆರೆಯನ್ನು ಅಭಿವೃದ್ಧಿ ಪಡಿಸಬೇಕಿದ್ದ ರಾಜ್ಯ ಸರ್ಕಾರವು, ನೊರೆ ಭಾಗ್ಯ ಕರುಣಿಸಿದೆ. ಈ ಭಾಗ್ಯದಿಂದಾಗಿ ಕೆರೆಯ ಸುತ್ತಲಿನ ಜನರು ಸಂತೃಪ್ತರಾಗಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳ್ಳಂದೂರು, ವರ್ತೂರು ಕೆರೆಗಳಲ್ಲಿ ನೊರೆ ಸಮಸ್ಯೆ ಹೆಚ್ಚಾಗಿದೆ. ನೊರೆ ಪರ್ವತದಂತೆ ಕಂಡುಬರುತ್ತಿದೆ. ಇದರಿಂದ ಸ್ಥಳೀಯರು ಹಾಗೂ ವಾಹನ ಸವಾರರು ಆರೋಗ್ಯ ಸಮಸ್ಯೆಗಳಿಂದ ಬಳಲುವಂತಾಗಿದೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.