ADVERTISEMENT

ಬೆಳ್ಳಂದೂರು ಕೆರೆ: ಹೆಚ್ಚುತ್ತಿರುವ ನೊರೆ, ದುರ್ನಾತ

​ಪ್ರಜಾವಾಣಿ ವಾರ್ತೆ
Published 3 ಜೂನ್ 2015, 20:09 IST
Last Updated 3 ಜೂನ್ 2015, 20:09 IST

ಬೆಂಗಳೂರು: ರಾಸಾಯನಿಕ ತ್ಯಾಜ್ಯದಿಂದ ಕಲುಷಿತಗೊಂಡಿರುವ ನಗರದ ಬೆಳ್ಳಂದೂರು ಕೆರೆಯ ಯಮಲೂರು ಕೋಡಿಯಲ್ಲಿನ ದುರ್ನಾತಯುಕ್ತ ನೊರೆ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರಿಂದಾಗಿ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

ವಾರದ ಹಿಂದೆಯಷ್ಟೇ ಕೆರೆ ಕೋಡಿಯಲ್ಲಿನ ನೊರೆ ಹಾಗೂ ದುರ್ನಾತವನ್ನು ಕಡಿಮೆ  ಮಾಡಲು ನಗರದ ಪ್ರಾಪರ್ಟಿಲೂಪ್ ಆ್ಯಂಡ್‌ ಟಿಟಾನ್‌ ಸಿಎಸ್‌ಆರ್‌ ಟೀಮ್‌ ಸಂಸ್ಥೆ ವತಿಯಿಂದ ನೊರೆಯ ಮೇಲೆ ಲ್ಯಾಕ್ಟೋಸ್‌ ಬ್ಯಾಕ್ಟೀರಿಯಾಯುಕ್ತ ಈಎಂಒನ್‌ ದ್ರಾವಣ ಸಿಂಪಡಿಸಲಾಗಿತ್ತು.

ಆದರೆ, ಕೋಡಿಯಲ್ಲಿ ಸಂಗ್ರಹಗೊಳ್ಳುವ ನೊರೆ  ಪ್ರಮಾಣವಾಗಲಿ, ಕೊಳಕು ದುರ್ನಾತವಾಗಲಿ ಕಿಂಚಿತ್ತು ಕಡಿಮೆಯಾಗಿಲ್ಲ.
ಕಳೆದ ಒಂದು ವರ್ಷದ ಅವಧಿಯಲ್ಲಿ ಯಮಲೂರು ಗ್ರಾಮದಲ್ಲಿ 15 ಮಂದಿ ಡೆಂಗೆ ಜ್ವರದಿಂದ ಬಳಲಿದ್ದಾರೆ. ಹಲವರು ಚಿಕುನ್‌ಗುನ್ಯಾ ಕಾಯಿಲೆಗೆ ತುತ್ತಾಗಿದ್ದಾರೆ.

ಕಳೆದ 3–4 ತಿಂಗಳುಗಳಿಂದ ದುರ್ನಾತ ಸೇವಿಸುತ್ತಿರುವುದರಿಂದ ಈಗಾಗಲೇ ಐವತ್ತಕ್ಕೂ ಹೆಚ್ಚು ಮಂದಿ ಗಂಟಲು ಬೇನೆ, ಜ್ವರ, ತುರಿಕೆಯಂತಹ ಕಾಯಿಲೆಗಳಿಂದ ಬಳಲುತ್ತಿದ್ದಾರೆ.

ಮಡುಗಟ್ಟಿದ ನೀರು: ಕಳೆದ ತಿಂಗಳು ಕೆರೆ ಕೋಡಿ ಹಾಗೂ ಒತ್ತುವರಿಯಾದ ರಾಜಕಾಲುವೆಗಳು ಒಡೆದು ಕೆರೆಯ ಕೊಳಕು ನೀರು ಗ್ರಾಮದ ಕರಿಯಮ್ಮನ ಅಗ್ರಹಾರ ರಸ್ತೆಯ ಮೇಲೆ ಹರಿದಿತ್ತು.

ಮರುದಿನ ಸ್ಥಳ ಪರಿಶೀಲಿಸಿದ ಅಧಿಕಾರಿಗಳು ರಾಜಕಾಲುವೆಯನ್ನು ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಒಡೆದ ಕೋಡಿ ರಾಜಕಾಲುವೆಯನ್ನು ದುರಸ್ತಿಗೊಳಿಸಲಾಯಿತು.  ಆದರೆ, ಮಾರತಹಳ್ಳಿಯಲ್ಲಿರುವ 33 ಅಡಿ ಅಗಲದ ಮಣ್ಣು ತುಂಬಿರುವ ರಾಜಕಾಲುವೆಯನ್ನು ತೆರವುಗೊಳಿಸಲಿಲ್ಲ. ಆದ್ದರಿಂದ, ಕೆರೆ ಕೋಡಿಯಲ್ಲಿ ಕೊಳಕು ನೀರು ಮಡುಗಟ್ಟಿ ನಿಂತಿದೆ. ಹೀಗಾಗಿ, ನೊರೆ ಕಡಿಮೆಯಾಗುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.
****
ರಾಜಕಾಲುವೆ ಮಣ್ಣು ತುಂಬಿದ ಕಾರಣ ಕಲುಷಿತ ನೀರು ಮಡುಗಟ್ಟಿ ನಿಂತು, ಜಮೀನುಗಳಿಗೆ ನುಗ್ಗುತ್ತಿದೆ. ನಿಂತ ನೀರಿನಲ್ಲಿ  ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ
-ನಾರಾಯಣ, ಯಮಲೂರು ನಿವಾಸಿ

ಕಲುಷಿತ ನೀರನ್ನು ಶುದ್ಧಗೊಳಿಸುವ ಕಾರ್ಯ ಯೋಜನೆಗಿಂತ, ಕೆರೆ ಕೋಡಿ ಹಾಗೂ ಅಮಾನಿ ಕೆರೆಯಲ್ಲಿ ಕೊಳಕು ನೀರು ಸಂಗ್ರಹಗೊಳ್ಳದಂತೆ ಕ್ರಮಗೊಳ್ಳಬೇಕು.
ಎಸ್‌.ಭಾಸ್ಕರ್‌ಯಮಲೂರು ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT