ADVERTISEMENT

ಬ್ಯಾಂಕುಗಳ ವಿಲೀನ ಕ್ರಮಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 30 ಜೂನ್ 2016, 19:30 IST
Last Updated 30 ಜೂನ್ 2016, 19:30 IST

ಬೆಂಗಳೂರು: ಸಹವರ್ತಿ ಬ್ಯಾಂಕ್‌ಗಳನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಜತೆಗೆ ವಿಲೀನ ಮಾಡುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ಪ್ರದೇಶ ಬ್ಯಾಂಕ್‌ ನೌಕರರ ಒಕ್ಕೂಟದ (ಕೆಪಿಬಿಇಎಫ್‌) ಸದಸ್ಯರು ಗುರುವಾರ ಧರಣಿ ನಡೆಸಿದರು.

ನಗರದ ಕೆ.ಜಿ. ರಸ್ತೆಯಲ್ಲಿರುವ ಎಸ್‌ಬಿಎಂ ಪ್ರಧಾನ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ, ಐಡಿಬಿಐ ಬ್ಯಾಂಕ್‌ ಖಾಸಗೀಕರಣ ಸೇರಿದಂತೆ ಹಲವು ನಿರ್ಧಾರಗಳನ್ನು ವಿರೋಧಿಸಲಾಯಿತು.

ಈ ವೇಳೆ ಮಾತನಾಡಿದ ಕೆಪಿಬಿಇಎಫ್‌ ಅಧ್ಯಕ್ಷ ವಸಂತ್‌ ರೈ, ‘ಸ್ಟೇಟ್‌ ಬ್ಯಾಂಕ್ ಆಫ್‌ ಮೈಸೂರು(ಎಸ್‌ಬಿಎಂ) ಹಾಗೂ ಸ್ಟೇಟ್‌ ಬ್ಯಾಂಕ್‌ ಹೈದರಾಬಾದ್‌ ಸೇರಿದಂತೆ ಐದು ಸಹವರ್ತಿ ಬ್ಯಾಂಕುಗಳನ್ನು ಕೇಂದ್ರ ಸರ್ಕಾರವು ಎಸ್‌ಬಿಐ ಜತೆಗೆ ವಿಲೀನಕ್ಕೆ ಮುಂದಾಗಿದೆ. ಇದರಿಂದ ಶತಮಾನದಷ್ಟು ಹಳೆಯದಾದ ಎಸ್‌ಬಿಎಂ ಲಾಭವು ಅನ್ಯರಾಜ್ಯಗಳ ಪಾಲಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಬ್ಯಾಂಕುಗಳ ವಿಲೀನದಿಂದ ಬಹುರಾಷ್ಟ್ರೀಯ ಕಂಪೆನಿಗಳಿಗಷ್ಟೇ ಲಾಭ. ದೇಶದ ಹಿತಾಸಕ್ತಿ ಹಾಗೂ ಅಭಿವೃದ್ಧಿ ಆದ್ಯತೆಗೆ ಹಿನ್ನಡೆಯಾಗುತ್ತದೆ. ಆದ್ದರಿಂದ ಸರ್ಕಾರ ಈ ಕ್ರಮವನ್ನು ಕೈಬಿಡಬೇಕು’ ಎಂದು ಆಗ್ರಹಿಸಿದರು.

ಕೆಪಿಬಿಇಎಎಫ್‌ ಪ್ರಧಾನ ಕಾರ್ಯದರ್ಶಿ ಅಜಯ್ ಮಾಂಜ್ರೇಕರ್‌ ಮಾತನಾಡಿ,‘ಬ್ಯಾಂಕುಗಳ ವಿಲೀನ ಎಂಬುದು ಒಂದರ್ಥದಲ್ಲಿ  ಖಾಸಗೀಕರಣ ಪ್ರಕ್ರಿಯೆ. ಇದರಿಂದ ವಿದೇಶಿ ಹೂಡಿಕೆದಾರರಿಗೆ ಮಾತ್ರವೇ ಲಾಭ’ ಎಂದು ದೂರಿದರು.

‘ಕೇಂದ್ರದ ಇಂಥ  ನಿರ್ಧಾರಗಳ  ವಿರುದ್ಧ ಜುಲೈ 12 ಹಾಗೂ 13ರಂದು ಎಐಬಿಇಎ ಹಾಗೂ ಎಐಬಿಒಎ ಸದಸ್ಯರಿಂದ ಪ್ರತಿಭಟನೆ ನಡೆಯಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.